Advertisement

ಕುಂಬಳೆ ಗ್ರಾಮ ಪಂಚಾಯತ್‌ಕಾರ್ಯ “ಲಯ’

06:30 AM Aug 03, 2017 | Team Udayavani |

ಕಾಸರಗೋಡು: ಅಚ್ಚಗನ್ನಡ ಪ್ರದೇಶವಾದ ಕಾಸರಗೋಡಿನಲ್ಲಿ ಒಂದೆಡೆ ಕನ್ನಡದ ಉಳಿವಿಗಾಗಿ ಹೋರಾಟ ನಡೆಯುತ್ತಿದ್ದರೆ, ಇನ್ನೊಂದೆಡೆ ಕನ್ನಡದ ನಿರ್ನಾಮ ಯತ್ನ ನಡೆಯುತ್ತಿದೆ. ಇದಕ್ಕೆ ಕುಂಬಳೆ ಗ್ರಾಮ ಪಂಚಾಯತ್‌ನ ನಾಮಫಲಕವೇ ಸಾಕ್ಷಿಯಾಗಿದೆ.

Advertisement

ಕುಂಬಳೆ ಗ್ರಾಮ ಪಂಚಾಯತ್‌ ಕಚೇರಿ ಕಟ್ಟಡದಲ್ಲಿ ಅಳವಡಿಸಿದ ನಾಮಫಲಕದಲ್ಲಿ ಕಾರ್ಯಾಲಯ ಬದಲಾಗಿ “ಕಾರ್ಯಲಯ’ ಎಂದು ದಾಖಲಿಸಲಾಗಿದೆ. ವಿವಿಧ ಅಗತ್ಯಗಳಿಗಾಗಿ ಪಂಚಾಯತ್‌ ಕಚೇರಿಗೆ ಬರುವವರು ಈ ನಾಮಫಲಕದತ್ತ ಕಣ್ಣು ಹಾಯಿಸಿದರೆ ಗಾಬರಿಗೊಳ್ಳುವುದಂತೂ ಖಂಡಿತ. ಯಾಕೆಂದರೆ “ಲಯ’ ಎಂದರೆ ನಾಶ ಎಂದರ್ಥವಾಗಿದೆ. ಇದನ್ನು ಎರಡು ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು. ಮೊದಲನೆಯದಾಗಿ ಕುಂಬಳೆ ಗ್ರಾಮ ಪಂಚಾಯತ್‌ ಕಾರ್ಯಲಯ ವಾಗಿದೆಯೆಂದೂ, ಎರಡನೆಯದಾಗಿ ಪಂಚಾಯತ್‌ನಲ್ಲಿ ಸಾರ್ವಜನಿಕ ಕಾರ್ಯಗಳು ಕೂಡ “ಲಯ’ವೇ ಎಂದು ತಿಳಿಯದೆ ಗೊಂದಲ ಹುಟ್ಟಿಸುವುದು ಸಹಜ.

ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಲಭಿಸಬೇಕಾದ ಕಚೇರಿಯಲ್ಲಿ ವಿರುದ್ಧ ಅರ್ಥಕೊಡುವ ನಾಮಫಲಕಗಳನ್ನು ಅಳವಡಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಅದೇ ರೀತಿ ಇದೇ ನಾಮಫಲಕದಲ್ಲಿ ಸಭಾಂಗಣ ಎಂಬ ಪದ ಬಳಸುವ ಬದಲು ಕೋನ್ಫರೆನ್ಸ್‌ ಹಾಲ್‌ ಎಂದು ಬರೆಯಲಾಗಿದೆ. 

ಕನ್ನಡದಲ್ಲಿ ಸರಿಯಾದ ಪದಗಳಿರುವಾಗ ಆಂಗ್ಲ ಪದವನ್ನೇ ನೇರವಾಗಿ ಕನ್ನಡದಲ್ಲಿ ಬರೆಯಲಾಗಿದೆ. ಆಂಗ್ಲ ಅಕ್ಷರ ಮಾಲೆಗಿಂತಲೂ ದುಪ್ಪಟ್ಟು ಅಕ್ಷರ ಮಾಲೆಯಿರುವ ಮಧುರವಾದ ಕನ್ನಡ ಭಾಷೆಯಲ್ಲಿ ಪದಗಳಿಗೇನೂ ಕೊರತೆಯಿಲ್ಲ. ಕನ್ನಡ ಪದಗಳಿಂದ ಕೂಡಿದ ನಾಮಫಲಕ ಬರೆಯಬೇಕೆಂಬ ಇಚ್ಛಾಶಕ್ತಿಯ ಕೊರತೆ ಕುಂಬಳೆ ಗ್ರಾಮ ಪಂಚಾಯತ್‌ ಅಧಿಕಾರಿಗಳಲ್ಲಿ ಕಾಣಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next