ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ತಂಡವನ್ನು ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಚಾಂಪಿಯನ್ಸ್ ಟ್ರೋಫಿ ಫೈನಲ್ ವೇಳೆ ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಪಾಕಿಸ್ತಾನದ ವಿರುದ್ಧ ಸೋಲು ಅನಿಲ್ ಕುಂಬ್ಳೆಯನ್ನು ಕೆರಳಿಸಿತ್ತು. ತನ್ನ ನಿರ್ಣಯಕ್ಕೆ ಬೆಲೆ ಕೊಡದೆ ಇರುವುದು ಕೂಡ ಕುಂಬ್ಳೆ ಸಿಟ್ಟಿಗೆ ಕಾರಣವಾಗಿತ್ತು. ಭಾರತ ಡ್ರೆಸ್ಸಿಂಗ್ ರೂಮ್‌ಗೆ ಬಂದವರೇ ಶಾಲೆ ಮಕ್ಕಳಿಗೆ ಟೀಚರ್ ಬೈದು ಕ್ಲಾಸ್ ಕೊಡುವಂತೆ ಆಟಗಾರರಿಗೆ ಚೆನ್ನಾಗಿ ಬೈದಿದ್ರು. ಹೀಗೊಂದು ಸುದ್ದಿ ಈಗ ಹರಿದಾಡುತ್ತಿದೆ. ಇದನ್ನು ಸ್ವತಃ ° ಬಿಸಿಸಿಐ ಉನ್ನತ ಮೂಲಗಳು ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದ ವೇಳೆ ತಿಳಿಸಿದ್ದಾರೆ.
ಆಟಗಾರರ ವಿರುದ್ಧ ಕೂಗಾಡಿದ್ದ ಕುಂಬ್ಳೆ: ಜೂ.18ರಂದು ದಿ ಓವೆಲ್‌ನಲ್ಲಿ ಪಾಕ್ ವಿರುದ್ಧ ಫೈನಲ್ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡಿತ್ತು. ಮೊದಲೇ ಕೊಹ್ಲಿ ಜತೆ ಮನಸ್ತಾಪ ಹೊಂದಿದ್ದ ಕೋಚ್ ಅನಿಲ್ ಕುಂಬ್ಳೆ ಪಿತ್ತ ಆಗ ನೆತ್ತಿಗೇರಿತ್ತು. ಸೋಲನ್ನು ಒಪ್ಪಿಕೊಳ್ಳುವ ಅಥವಾ ಅರಗಿಸಿಕೊಳ್ಳುವ ಸ್ಥಿತಿಯಲ್ಲಿ ಕುಂಬ್ಳೆ ಇರಲಿಲ್ಲ. ಡ್ರೆಸ್ಸಿಂಗ್ ರೂಮ್‌ಗೆ ಬಂದವರೇ ಏಕಾಏಕಿ ಕೂಗಾಡಿದ್ದಾರೆ. ನಾಯಕ ಸೇರಿದಂತೆ ಆಟಗಾರರೆಲ್ಲರಿಗೂ ಚೆನ್ನಾಗಿ ಬೈದಿದ್ದಾರೆ. ಇವರ ಬೈಗುಳದ ದಾಟಿ ಶಾಲೆ ಮಕ್ಕಳಿಗೆ ಟೀಚರ್ ಬೈಯುವ ರೀತಿಯಲ್ಲಿ ಇತ್ತು ಎಂದು ಬಿಸಿಸಿಐ ಮೂಲಗಳು ಹೇಳಿವೆ.
ಟಾಸ್ ವಿಷಯದಲ್ಲಿ ಕುಂಬ್ಳೆ ಕಡೆಗಣಿಸಿದ್ದ ಕೊಹ್ಲಿ?: ಚಾಂಪಿಯನ್ಸ್ ಟ್ರೋಫಿ ಟಾಸ್‌ಗೆ ತೆರಳುವ ವೇಳೆ ಅನಿಲ್ ಕುಂಬ್ಳೆ ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಮಾಡುವಂತೆ ಕೊಹ್ಲಿಗೆ ಸೂಚಿಸಿದ್ದರು ಎನ್ನಲಾಗಿದೆ. ಆದರೆ ಕೊಹ್ಲಿ ಟಾಸ್ ಗೆದ್ದ ಬಳಿಕ ಕುಂಬ್ಳೆ ನಿರ್ಣಯ ಕೈಬಿಟ್ಟು ಸ್ವಂತ ನಿರ್ಧಾರ ತೆಗೆದುಕೊಂಡಿದ್ದರು. ಮೊದಲು ಫೀಲ್ಡಿಂಗ್ ನಡೆಸುವ ನಿರ್ಧಾರ ಕೊಹ್ಲಿದ್ದು ಆಗಿತ್ತು. ಇಲ್ಲಿ ಕೋಚ್ ಕುಂಬ್ಳೆಯನ್ನು ಕೊಹ್ಲಿ ಕಡೆಗಣಿಸಿದ್ದು ಸ್ಪಷ್ಟವಾಗಿತ್ತು. ಇದೆಲ್ಲದರ ಬಳಿಕ ಭಾರತ ಸೋಲು ಕಂಡಿತ್ತು. ಇದು ಕುಂಬ್ಳೆ ಸಿಟ್ಟಿಗೆ ಇನ್ನೊಂದು ಕಾರಣವಾಗಿತ್ತು ಎನ್ನಲಾಗಿದೆ.
ಆಟಗಾರರನ್ನು ವೃತ್ತಿಪರರಂತೆ ನಡೆಸಿಕೊಂಡಿಲ್ಲ ಕುಂಬ್ಳೆ?: ಸದ್ಯ ಇಂತಹದೊಂದು ವಿಚಾರವನ್ನು ಬಿಸಿಸಿಐ ಉನ್ನತ ಮೂಲಗಳು ಪ್ರಸ್ತಾಪಿಸಿರುವುದು ಈಗ ಕುಂಬ್ಳೆಯತ್ತ ಬೊಟ್ಟು ಮಾಡುವಂತಾಗಿದೆ. ಕೊಹ್ಲಿ ತಪ್ಪು ಮಾಡಿದ್ದರೂ ಒಬ್ಬ ಕೋಚ್ ಆಗಿ ಸೋತ ತಕ್ಷಣ ಆಟಗಾರರನ್ನು ಮನಬಂದಂತೆ ಬೈಯ್ದು ನೋಯಿಸುವುದು ಅವರ ಆತ್ಮವಿಶ್ವಾಸವನ್ನು ಹಾಳು ಮಾಡಿದಂತೆ ಆಗುತ್ತದೆ. ಘಟನೆಯಿಂದ ಸ್ವತಃ ಕೊಹ್ಲಿ ಮತ್ತು ಆಟಗಾರರು ತೀವ್ರ ಬೇಸರಕ್ಕೆ ಒಳಗಾಗಿದ್ದರು ಎನ್ನಲಾಗಿದೆ.
ಕೊಹ್ಲಿ ಕೇಳದೆ ಆಟಗಾರನ ಬದಲಿಸಿದ್ದ ಕುಂಬ್ಳೆ?: ಆಸ್ಟ್ರೇಲಿಯಾ ವಿರುದ್ಧ ಧರ್ಮಶಾಲಾದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಗಾಯಗೊಂಡಿದ್ದರು. ಇವರ ಬದಲಿಗೆ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಕುಂಬ್ಳೆ ತಂಡಕ್ಕೆ ಸೇರಿಸಿಕೊಂಡಿದ್ದರು. ಇದನ್ನು ಕೊಹ್ಲಿ ಗಮನಕ್ಕೆ ತಾರದೆ ನಡೆಸಿದ್ದರು ಎಂದು ಬಿಸಿಸಿಐ ಮೂಲಗಳು ಹೇಳಿವೆ.
ತಂಡದ ಮ್ಯಾನೇಜರ್‌ನಿಂದ ವರದಿ ಕೇಳಿದ ಸಿಇಎ
ನವದೆಹಲಿ: ಬಿಸಿಸಿಐ ಆಡಳಿತಾಧಿಕಾರಿಗಳು ಚಾಂಪಿಯನ್ಸ್ ಟ್ರೋಫಿ ಫೈನಲ್ ವೇಳೆ ವಿರಾಟ್ ಕೊಹ್ಲಿ ಹಾಗೂ ಅನಿಲ್ ಕುಂಬ್ಳೆ ನಡುವೆ ಮನಸ್ತಾಪ ಆಗಿತ್ತು ಎನ್ನುವ ವಿಷಯಕ್ಕೆ ಸಂಬಂಧ ಪಟ್ಟಂತೆ ಈಗ ತಂಡದ ಮ್ಯಾನೇಜರ್ ಕಪಿಲ್ ಮಲ್ಹೋತ್ರಾ ಅವರಲ್ಲಿ ವರದಿ ನೀಡುವಂತೆ ಸೂಚಿಸಿದೆ. ಬಿಸಿಸಿಐ ಸಿಇಒ ಜೊಹ್ರಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.