ಬೆಳಗ್ಗೆ 5.30ರಿಂದ ತ್ರಿಕಾಲ ಪೂಜೆ ಜತೆಯಲ್ಲಿ ವಿಶೇಷ ಅಲಂಕಾರದೊಂದಿಗೆ ಶುಂಭಹಾ ಪೂಜೆ ದೇವಿ ಸನ್ನಿಧಾನದಲ್ಲಿ ನಡೆಯಿತು. ಬಳಿಕ ಚಂಡಿಕಾ ಹೋಮ ನಡೆದು ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು.
ಇಂದು ಸಂಜೆ 6 ಗಂಟೆಯಿಂದ ಅಮ್ಮನವರ ಸನ್ನಿಧಾನದಲ್ಲಿ ರಂಗಪೂಜೆ, ಚಂಡಿಕಾ ಪಾರಾಯಣ ಮತ್ತು ದುರ್ಗಾ ನಮಸ್ಕಾರ ಪೂಜೆಗಳು ನಡೆಯಲಿವೆ. ಮಹಾನವಮಿಯ ಪುಣ್ಯದಿನವಾಗಿರುವ ಇಂದು ಅಮ್ಮನವರ ಸನ್ನಿಧಾನಕ್ಕೆ ಮುಂಜಾನೆಯಿಂದಲೇ ಅಪಾರ ಭಕ್ತ ಸಮೂಹ ಹರಿದುಬರುತ್ತಿದೆ.
Advertisement
ಅಮ್ಮನವರ ಸನ್ನಿಧಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಇಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕಾಳಿಂಗ ನಾವಡ ಅಭಿಮಾನ ಬಳಗದವರಿಂದ ನಿರಂತರ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯುತ್ತಿದೆ.ಶರನ್ನವರಾತ್ರಿ ಪರ್ವಕಾಲದಲ್ಲಿ ವಿಧವಿಧವಾಗಿ ಆರಾಧನೆಗೊಂಡ ಶ್ರೀ ದೇವರಿಗೆ ಸ್ವರ್ಣಲೇಪಿತ ಪಲ್ಲಕಿಯನ್ನು ಮಹಾನವಮಿಯ ಪುಣ್ಯದಿನವಾಗಿರುವ ಇಂದು ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ಸ್ವರ್ಣ ಲೇಪಿತ ಪಲ್ಲಕ್ಕಿಯನ್ನು ದೇವಳದ ಆಡಳಿತ ಧರ್ಮದರ್ಶಿ ದೇವರಾಯ ಎಂ.ಶೇರೆಗಾರ್ ಹಾಗೂ ಅನಿತಾ ದಂಪತಿಗಳು ಸಂಪ್ರದಾಯದಂತೆ ಭರಮಾಡಿಕೊಂಡರು.
ಈ ಸಂದರ್ಭದಲ್ಲಿ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ದ ಹಿರಿಯ ಆಡಳಿತ ಧರ್ಮ ದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಉಡುಪಿಯ ಆಭರಣ ಜುವೆಲರ್ಸ್‌ನಲ್ಲಿ ಸಿದ್ಧಗೊಂಡ ಈ ಅತ್ಯಾಕರ್ಷಕ ಸ್ವರ್ಣಲೇಪಿತ ಪಲ್ಲಕಿಯನ್ನು ಇಂದು ಸಾಯಂಕಾಲ ದೇಗುಲದ ಮಹಾದ್ವಾರದಿಂದ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಲಾಯಿತು.
ಈ ಸಂದರ್ಭದಲ್ಲಿ ದೇಗುಲದ ಧರ್ಮದರ್ಶಿ ದೇವರಾಯ ಎಂ. ಶೇರೆಗಾರ್, ಆಡಳಿತ ಮಂಡಳಿಯ ಸದಸ್ಯರು ಹಾಗೂ ಅಪಾರ ಭಕ್ತವರ್ಗದವರು ಉಪಸ್ಥಿತರಿದ್ದರು. ಮಹಾನವಮಿಯ ಪರ್ವದಿನವಾಗಿರುವ ಮಂಗಳವಾರದಂದು ಅಮ್ಮನವರ ಸನ್ನಿಧಾನದಲ್ಲಿ ಈ ನೂತನ ಸ್ವರ್ಣ ಲೇಪಿತ ಪಲ್ಲಕಿ ಉತ್ಸವ ನಡೆಯಲಿದೆ.