ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಗುರು ದೇಶಪಾಂಡೆ ನಿರ್ದೇಶನದಲ್ಲಿ ಪ್ರಜ್ವಲ್, “ಠಾಕ್ರೆ’ ಎಂಬ ಚಿತ್ರ ಮಾಡಬೇಕಿತ್ತು. ಹಾಡುಗಳ ರೆಕಾರ್ಡಿಂಗ್ ಆಗುವುದರ ಜೊತೆಗೆ, ಪ್ರಜ್ವಲ್ ವರ್ಕೌಟ್ ಮಾಡಿದ್ದೂ ಆಗಿತ್ತು. ಆದರೆ, ಚಿತ್ರ ಕಾರಣಾಂತರಗಳಿಂದ ಸೆಟ್ಟೇರಲಿಲ್ಲ. ಈಗ ಪ್ರಜ್ವಲ್, ಕೊನೆಗೂ ಗುರು ದೇಶಪಾಂಡೆ ಜೊತೆಗೆ ಇನ್ನೊಂದು ಚಿತ್ರ ಮಾಡುತ್ತಿದ್ದಾರೆ. ಈ ಬಾರಿ ಗುರು ನಿರ್ದೇಶನ ಮಾಡುತ್ತಿಲ್ಲ.
ಬದಲಿಗೆ ಚಿತ್ರದ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡು, ನಿರ್ದೇಶನವನ್ನು ಜಡೇಶ್‌ಗೆ ವಹಿಸಿದ್ದಾರೆ. ಜಡೇಶ್, ಇದಕ್ಕೂ ಮುನ್ನ ಗುರು ದೇಶಪಾಂಡೆ ಅವರ ಚಿತ್ರಗಳಲ್ಲಿ ಸಹನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. “ರಾಜ-ಹಂಸ’ ಎಂಬ ಚಿತ್ರವನ್ನೂ ನಿರ್ದೇಶಿಸಿದ್ದರು. ಈಗ ಪ್ರಜ್ವಲ್ ಅಭಿನಯದಲ್ಲಿ ಹೊಸ ಚಿತ್ರವೊಂದನ್ನು ನಿರ್ದೇಶಿಸುವುದಕ್ಕೆ ಸಜ್ಜಾಗಿದ್ದಾರೆ.
ಅಂದಹಾಗೆ, ಸ್ಲಿಪಿಂಗ್ ಬ್ಯೂಟಿ ಸಿಂಡ್ರೋಮ್ ಎಂಬ ಖಾಯಿಲೆಯನ್ನು ಮೂಲವಾಗಿಟ್ಟುಕೊಂಡು ಕಥೆ ಮಾಡಿದ್ದಾರಂತೆ ಜಡೇಶ್. “ಸಾಮಾನ್ಯವಾಗಿ ಮನುಷ್ಯ ದಿನವೊಂದಕ್ಕೆ ಏಳೆಂಟು ಗಂಟೆ ನಿದ್ದೆ ಮಾಡಿದರೆ, ಈ ಸಿಂಡ್ರೋಮ್‌ನಿಂದ ಬಳಲುತ್ತಿರುವವರು ಏಳೆಂಟು ಗಂಟೆ ಮಾತ್ರ ಎದ್ದಿರುತ್ತಾರೆ. ಮಿಕ್ಕಂತೆ ಅವರು ಮಲಗೇ ಇರುತ್ತಾರೆ. ಎದ್ದಿದ್ದಾಗ ಅವರು ಏನು ಮಾಡಬಲ್ಲರು ಎನ್ನುವುದನ್ನು ಕಾಮಿಡಿಯಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ.
ಇಲ್ಲಿ ನಾಯಕನ ಪಾತ್ರವನ್ನು ಕುಂಭಕರ್ಣನನ್ನು ಬೇಸ್ ಮಾಡಿ ಬರೆದಿದ್ದೇವೆ. ಕುಂಭಕರ್ಣನನ್ನ ಎಬ್ಬಿಸೋದು ಕಷ್ಟ. ಎಬ್ಬಿಸಿದ ಮೇಲೆ ಹಿಡಿಯುವುದು ಕಷ್ಟ. ಆ ಪಾತ್ರವನ್ನು ಮೂಲವಾಗಿಟ್ಟುಕೊಂಡು ಕಥೆ ಮಾಡಿದ್ದೇವೆ. ಇಲ್ಲಿ ನಾಯಕ ಎದ್ದಿರುವ ಏಳೆಂಟು ಗಂಟೆ ಸಮಯದಲ್ಲಿ ತನ್ನ ಎಲ್ಲ ಶಕ್ತಿ ಮತ್ತು ಬುದ್ಧಿಯನ್ನು ಪ್ರದರ್ಶನ ಮಾಡುತ್ತಾನೆ. ಹೇಗೆ ಎನ್ನುವುದನ್ನು ಥ್ರಿಲ್ಲಿಂಗ್ ಆಗಿ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ’ ಎನ್ನುತ್ತಾರೆ ಜಡೇಶ್.
ಈಗಾಗಲೇ ಚಿತ್ರದ ಕಥೆ ಸಿದ್ಧವಾಗಿದ್ದು, ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಚಿತ್ರದಲ್ಲಿ ಇನ್ನೂ ಒಬ್ಬ ನಾಯಕ ಇರಲಿದ್ದು, ಯಾರಿಂದ ಆ ಪಾತ್ರವನ್ನು ಮಾಡಿಸಬೇಕೆಂಬುದು ಪಕ್ಕಾ ಆಗಿಲ್ಲವಂತೆ. ಸದ್ಯದಲ್ಲೇ, ಇನ್ನೊಬ್ಬ ನಾಯಕ, ನಾಯಕಿ ಸೇರಿದಂತೆ ಉಳಿದ ಪಾತ್ರವರ್ಗ ಹಾಗೂ ತಂತ್ರಜ್ಞರ ಆಯ್ಕೆ ನಡೆಯಲಿದೆ. ಹಾಗೆಯೇ ಚಿತ್ರದ ಹೆಸರು ಸಹ ಇನ್ನೂ ಪಕ್ಕಾ ಆಗಿಲ್ಲವಂತೆ.
“ಕುಂಭಕರ್ಣ’ ಎಂಬ ಹೆಸರೇ ಚೆನ್ನಾಗಿದ್ದು, ಅದನ್ನೇ ಇಡಬಹುದು ಎಂಬ ಅಭಿಪ್ರಾಯ ಬರಬಹುದು. ಆ ಹೆಸರು ಸಹ ಚಿತ್ರತಂಡದವರ ಮನಸ್ಸಿನಲ್ಲಿದೆ. ಅದಲ್ಲದೆ ಇನ್ನೊಂದೆರೆಡು ಶೀರ್ಷಿಕೆಗಳನ್ನೂ ಯೋಚನೆ ಮಾಡಲಾಗುತ್ತಿದೆಯಂತೆ. ಅಂತಿಮವಾಗಿ ಪ್ರಜ್ವಲ್, “ಕುಂಭಕರ್ಣ’ರಾಗುತ್ತಾರೋ ಅಥವಾ ಚಿತ್ರಕ್ಕೆ ಬೇರೊಂದು ಹೆಸರು ಸಿಗುತ್ತದೋ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕು.