ನವದೆಹಲಿ: ಹರಿದ್ವಾರದಲ್ಲಿ ವಿಜೃಂಭಣೆಯಿಂದ ಜರುತ್ತಿರುವ ಮಹಾಕುಂಭ ಮೇಳ ಏಪ್ರಿಲ್ 27ರ ವರೆಗೂ ಮುಂದುವರೆಯಲಿದೆ ಎಂದು ವರದಿಯಾಗಿದೆ.
ದೇಶದಲ್ಲಿ ಕೋವಿಡ್ ವೈರಸ್ ಪ್ರಕರಣಗಳಲ್ಲಿ ಭಾರಿ ಏರಿಕೆ ನಡುವೆಯೂ ಕುಂಭಮೇಳದಲ್ಲಿ ಲಕ್ಷಾಂತರ ಜನರು ಗುಂಪುಗೂಡಿ ಭಾಗಿಯಾಗುತ್ತಿರುವುದು ತೀವ್ರ ಟೀಕೆಗೆ ಗುರಿಯಾಗಿತ್ತು. ಮೇಳದಲ್ಲಿ ಕೋವಿಡ್ ಮುನ್ನಚ್ಚರಿಕಾ ಕ್ರಮಗಳನ್ನು ಗಾಳಿಗೆ ತೂರಲಾಗುತ್ತಿದ್ದು, ಕುಂಭಮೇಳವನ್ನು ಅರ್ಧಕ್ಕೆ ಮೊಟಕುಗೊಳಿಸಲಾಗುತ್ತಿದೆ ಎನ್ನುವ ಮಾತು ಕೇಳಿ ಬಂದಿತ್ತು.
ಈ ಬಗ್ಗೆ ಮಾತನಾಡಿರುವ ಜಿಲ್ಲಾಧಿಕಾರಿ ದೀಪಕ್ ರಾವತ್, ಜನೆವರಿಯಲ್ಲಿಯೇ ಕುಂಭಮೇಳ ಪ್ರಾರಂಭವಾಗಬೇಕಿತ್ತು. ಆದರೆ, ಕೋವಿಡ್ ಪಿಡುಗಿನ ಹಿನ್ನೆಲೆ ಏಪ್ರಿಲ್‍ನಲ್ಲಿ ಆಯೋಜಿಸಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಪ್ರಸ್ತುತ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಕುಂಭ ಮೇಳದ ಅವಧಿಯಲ್ಲಿ ಕಡಿತಗೊಳಿಸುವಂತೆ ಕೇಂದ್ರ ಎಸ್‍ಓಪಿ ತಂಡ ಸೂಚಿಸಿದೆ. ಆದರೆ, ಮೇಳವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿರುವ ಬಗ್ಗೆ ಯಾವುದೇ ಮಾಹಿತಿ ನನಗಿಲ್ಲ ಎಂದಿದ್ದಾರೆ.
ಬುಧವಾರ ಮುಂಜಾನೆ ಉತ್ತರಾಖಂಡ ಸರ್ಕಾರ ಹಾಗೂ ಧಾರ್ಮಿಕ ಮುಖಂಡರುಗಳ ನಡುವೆ ಈ ಕುರಿತು ಸಭೆ ಕೂಡ ನಡೆದಿದೆ. ಸಭೆಯಲ್ಲಿ ಕುಂಭ ಮೇಳ ಮೊಟಕುಗೊಳಿಸಲು ಧಾರ್ಮಿಕ ಮುಖಂಡರುಗಳ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇಂದು ಸಂಜೆ ಅಧಿಕಾರಿಗಳು ಹೇಳಿರುವ ಪ್ರಕಾರ, ಏಪ್ರಿಲ್ 27 ರವರೆಗೆ ನಿರಾಂತಕವಾಗಿ ಕುಂಭಮೇಳ ಜರುಗಲಿದೆಯಂತೆ.
ಇನ್ನು ದಿನದಿಂದ ದಿನಕ್ಕೆ ಕುಂಭಮೇಳಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬುಧವಾರ ಬೆಳಿಗ್ಗೆ ಸಾಧುಗಳು ಮತ್ತು ಭಕ್ತರು ಹರ್ ಕಿ ಪೌರಿ ಮುಖ್ಯ ಘಟ್ಟದಲ್ಲಿ ಮೂರನೇ ಪ್ರಮುಖ ಸ್ನಾನವಾದ ‘ಶಹಿ ಸ್ನಾನ್’ ಕೈಗೊಂಡಿದ್ದಾರೆ. ಮಧ್ಯಾಹ್ನ 2 ಗಂಟೆಯವರೆಗೆ ಕುಂಭದ ಅತ್ಯಂತ ಮಹತ್ವದ ದಿನಗಳಲ್ಲಿ ಒಂದಾದ ಬುಧವಾರ 9,43,452 ಮಂದಿ ಗಂಗಾ ನದಿಯಲ್ಲಿ ಮುಳುಗೆದ್ದಿದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.