Advertisement

ದಿವ್ಯ ಕುಂಭ, ಭವ್ಯ ಕುಂಭ!

06:00 AM Dec 02, 2018 | Team Udayavani |

ಅಲಹಾಬಾದ್‌: ಈ ಬಾರಿಯ ಕುಂಭ ಮೇಳ ಭಾರೀ ಕುತೂಹಲ ಕೆರಳಿಸಿದೆ. 12 ವರ್ಷಗಳಿಗೊಮ್ಮೆ ಜರಗುವ ಮೇಳ ಈ ಬಾರಿ ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ನಡೆಯಲಿದ್ದು, ಇದಕ್ಕೆ “ದಿವ್ಯ ಕುಂಭ, ಭವ್ಯ ಕುಂಭ’ ಎಂಬ ಘೋಷವಾಕ್ಯ ಇರಲಿದೆ. ಜನವರಿ 14ರ ಮಕರ ಸಂಕ್ರಾಂತಿಯಿಂದ ಆರಂಭವಾಗಿ ಮಾರ್ಚ್‌ 4ರ ಮಹಾಶಿವರಾತ್ರಿಯವರೆಗೆ ನಡೆಯುವ ಮೇಳಕ್ಕಾಗಿ ಸರಕಾರ ಸಮಗ್ರ ನೀಲನಕ್ಷೆಯನ್ನು ಸಿದ್ಧಪಡಿಸಿ ಮೂಲಸೌಕರ್ಯ ನಿರ್ಮಾಣದಲ್ಲಿ ತೊಡಗಿದೆ. ಈ ಬಾರಿಯಂತೂ ಕುಂಭಮೇಳವನ್ನು ವಿಶೇಷವಾಗಿ ನಡೆಸಲು ನಿರ್ಧರಿಸಲಾಗಿದೆ.

Advertisement

ಮೌನಿ ಅಮಾವಾಸ್ಯೆಗೆ 3 ಕೋಟಿ ಜನ!
ಕುಂಭ ಮೇಳದ 49 ದಿನಗಳ ಅವಧಿಯಲ್ಲಿ ಆರು ವಿಶೇಷ ದಿನಗಳಂದು ಪವಿತ್ರ ಸ್ನಾನ ನಡೆಯುತ್ತದೆ. ಈ ಪೈಕಿ ಫೆಬ್ರವರಿ ನಾಲ್ಕರ ಮೌನಿ ಅಮಾವಾಸ್ಯೆ ವಿಶೇಷ. ಅಂದು ಸುಮಾರು 3 ಕೋಟಿ ಜನರು ಅಲಹಾಬಾದ್‌ಗೆ ಆಗಮಿಸುವ ನಿರೀಕ್ಷೆಯಿದೆ. 10 ಲಕ್ಷ ವಿದೇಶೀಯರು ಆಗಮಿಸಲಿದ್ದು, ಎಲ್ಲ ದೇಶಗಳ ರಾಯಭಾರ ಕಚೇರಿಗಳಿಗೆ ಆಹ್ವಾನ ಪತ್ರ ಕಳುಹಿಸಲಾಗಿದೆ. ವಾರಾಣಸಿಯಲ್ಲಿ ಜ. 24ರಂದು ಪ್ರವಾಸಿ ಭಾರತೀಯ ದಿನ ಆಚರಿಸಲಾಗುತ್ತಿದೆ.

ಜಲಸಾರಿಗೆ ಸೌಲಭ್ಯ
ಮೇಳಕ್ಕೆ ಆಗಮಿಸುವ ಭಕ್ತರು ಒಂದು ಘಾಟ್‌ನಿಂದ ಇನ್ನೊಂದು ಘಾಟ್‌ಗೆ ತೆರಳಲು ಅನುಕೂಲವಾಗುವಂತೆ ಜಲಸಾರಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ಖಾಸಗಿ ಆಪರೇಟರ್‌ಗಳನ್ನು ನಿಯೋಜಿಸಲಾಗಿದೆ. 

ಶೌಚಾಲಯಕ್ಕಾಗಿ 550 ಕೋ.ರೂ.
ಈ ಬಾರಿ 1.5 ಲಕ್ಷ ಶೌಚಾಲಯ ನಿರ್ಮಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ 550 ಕೋ. ರೂ. ಮೀಸಲಿಡಲಾಗಿದೆ. ಇವುಗಳ ನಿರ್ವಹಣೆಗಾಗಿ 15,000 ಜನರನ್ನು ನೇಮಿಸಲಾಗುತ್ತದೆ.

ಟೆಂಟ್‌ ಸಿಟಿ
ದೇಶಿ ಹಾಗೂ ವಿದೇಶಿ ಭಕ್ತರಿಗಾಗಿ ಟೆಂಟ್‌ ಸಿಟಿಗಳನ್ನು ನಿರ್ಮಿಸಲಾಗುತ್ತಿದೆ. ಸರಕಾರ ಕೂಡ ಟೆಂಟ್‌ ನಿರ್ಮಿಸಲಿದ್ದು, ವಿವಿಧ ಧಾರ್ಮಿಕ ಸಂಸ್ಥೆಗಳೂ ತಮ್ಮ ಟೆಂಟ್‌ಗಳನ್ನು ನಿರ್ಮಿಸಲಿವೆ. ಇದಕ್ಕಾಗಿ ಸರಕಾರ 129 ಕೋಟಿ ರೂ. ಮೀಸಲಿಟ್ಟಿದೆ. 

Advertisement

3 ತಿಂಗಳು ಮದುವೆಗೆ ನಿಷೇಧ
ಕುಂಭ ಮೇಳ ಹಿನ್ನೆಲೆಯಲ್ಲಿ ಜನವರಿಯಿಂದ ಮಾರ್ಚ್‌ ವರೆಗೆ ಅಂದರೆ 3 ತಿಂಗಳ ಕಾಲ ಪ್ರಯಾಗ್‌ರಾಜ್‌ನಲ್ಲಿ ಮದುವೆ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗಿದೆ. ಈ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್‌ ಸರಕಾರ ಆದೇಶ ಹೊರಡಿಸಿದೆ.

ಭದ್ರತೆ
40 ಪೊಲೀಸ್‌ ಠಾಣೆಗಳು, 40 ಅಗ್ನಿ ಶಾಮಕ ಠಾಣೆಗಳನ್ನು ಸ್ಥಾಪಿಸಲಾಗುತ್ತಿದ್ದು, 1,000 ಸಿಸಿಟಿವಿ ಕೆಮರಾಗಳನ್ನು ಅಳವಡಿಸಲಾಗುತ್ತದೆ. ಒಟ್ಟು 20 ಸಾವಿರ ಪೊಲೀಸರನ್ನು ನಿಯೋಜಿಸಲಾಗುತ್ತದೆ. 1,100 ಮುಳುಗುತಜ್ಞರೂ ಇರಲಿದ್ದಾರೆ.

ಆರು ಪವಿತ್ರ ಸ್ನಾನ
ಮಕರ ಸಂಕ್ರಾಂತಿ    (ಜ. 14)
ಪೌರುಷ ಹುಣ್ಣಿಮೆ    (ಜ. 21)
ಮೌನಿ ಅಮಾವಾಸ್ಯೆ    (ಫೆ. 4)
ವಸಂತ ಪಂಚಮಿ    (ಫೆ. 10)
ಮಾಘ ಹುಣ್ಣಿಮೆ    (ಫೆ. 19)
ಮಹಾಶಿವರಾತ್ರಿ    (ಮಾ. 4)

1.5 ಲಕ್ಷ  ಶೌಚಾಲಯ
5 ಘಾಟ್‌ಗಳಿಗೆ ತೆರಳಲು ಜಲ ಸಾರಿಗೆ ವ್ಯವಸ್ಥೆ
12 ಕೋಟಿ ಭಕ್ತರ ನಿರೀಕ್ಷೆ

2,000 ಕೋಟಿ ರೂ. ಅನುದಾನ ಮಂಜೂರು
2013ರಲ್ಲಿ ಅಖೀಲೇಶ್‌ ಯಾದವ್‌ ಸರಕಾರ ಮಂಜೂರು ಮಾಡಿದ್ದಕ್ಕಿಂತ ದುಪ್ಪಟ್ಟು ಮೊತ್ತ
2,500 ಹೆಕ್ಟೇರ್‌ ಜಾಗದಲ್ಲಿ ಕುಂಭ ಮೇಳ ಆಚರಣೆ
5,000 ಧಾರ್ಮಿಕ, ಸಾಮಾಜಿಕ ಸಂಘಟನೆಗಳಿಗೆ ಕ್ಯಾಂಪ್‌ ಆಯೋಜನೆಗೆ
12 ಕೋಟಿ ಜನರು ಆಗಮಿಸುವ ನಿರೀಕ್ಷೆ
150 ವಿಶೇಷ ರೈಲುಗಳು

Advertisement

Udayavani is now on Telegram. Click here to join our channel and stay updated with the latest news.

Next