ಕೆ.ಆರ್.ಪೇಟೆ: ಕಾವೇರಿ, ಹೇಮಾವತಿ, ಲಕ್ಷ್ಮಣತೀರ್ಥ ನದಿಗಳ ಸಂಗಮ ಕ್ಷೇತ್ರವಾಗಿರುವ ಕೆ.ಆರ್.ಪೇಟೆ ತಾಲೂಕಿನ ಅಂಬಿಗರಹಳ್ಳಿ, ಪುರ, ಸಂಗಾಪುರ ಗ್ರಾಮಗಳ ಬಳಿ ಇರುವ ತ್ರಿವೇಣಿ ಸಂಗಮದಲ್ಲಿ ಅ.14ರಿಂದ 3 ದಿನ 2ನೇ ಮಹಾಕುಂಭ ಮೇಳ ಆಯೋಜಿಸಲಾಗಿದ್ದು ಸರ್ಕಾರ 7ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಸಚಿವರಾದ ನಾರಾಯಣಗೌಡ ತಿಳಿಸಿದರು.
ಮಾರ್ಗದರ್ಶನ: ಬೆಂಗಳೂರಿನ ವಿಜಯನಗರದ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಸುತ್ತೂರು ಶ್ರೀ ಕ್ಷೇತ್ರದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿ, ಚಂದ್ರವನದ ಮಹಾಂತ ಶಿವಯೋಗಿ ಸ್ವಾಮೀಜಿಗಳ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಿ ಶ್ರೀಗಳ ಮಾರ್ಗದರ್ಶನ ಪಡೆಯಲಾಯಿತು ಎಂದು ಹೇಳಿದರು.
ಅ.13ರ ಸಂಜೆಯಿಂದಲೇ ಬಾಲ ಮಲೈಮಹದೇಶ್ವರ ದೇವಾಲಯದ ಪ್ರತಿಷ್ಠಾಪನೆ ಕಾರ್ಯ ಹಾಗೂ ಧಾರ್ಮಿಕ ಕಾರ್ಯಕ್ರಮ ಆರಂಭಿಸಲು ತೀರ್ಮಾನಿಸಲಾಯಿತು. ಮೊದಲ ಕುಂಭ ಮೇಳ 2015ರಲ್ಲಿ ಶಾಸಕರಾಗಿದ್ದ ನಾರಾಯಣಗೌಡರ ನೇತೃತ್ವದಲ್ಲಿ ನಡೆದಿತ್ತು. ಈ ಬಾರಿ ಸಚಿವರಾಗಿರುವ ನಾರಾಯಣಗೌಡರ ನೇತೃತ್ವದಲ್ಲಿ ಯಶ್ವಸಿಯಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು.
ರಸ್ತೆ ಅಭಿವೃದ್ಧಿಪಡಿಸಿ: ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಕಳೆದ ಬಾರಿಗಿಂತ ಈ ಬಾರಿ ಇನ್ನೂ ಅದ್ದೂರಿಯಾಗಿ ಆಯೋಜಿಸಬೇಕು. ಭಕ್ತರಿಗೆ ಸೂಕ್ತ ಸ್ನಾನಘಟ್ಟ ತಂಗಲು ವ್ಯವಸ್ಥೆ, ರಸ್ತೆ ಅಭಿ ವೃದ್ಧಿಪಡಿಸಬೇಕೆಂದು ಸುತ್ತೂರು ಶ್ರೀಗಳು ಜಿಲ್ಲಾಡಳಿತ, ತಾಲೂಕು ಆಡಳಿತಕ್ಕೆ ಸಲಹೆ ನೀಡಿದರು. ಅಲ್ಲದೇ, ಕುಂಭಮೇಳವನ್ನು ಶಾಸ್ತ್ರೋಕ್ತವಾಗಿ ಆಚರಿಸಬೇಕು. ಜತೆಗೆ ವಸ್ತು ಪ್ರದರ್ಶನ, ಮೇಳ ನಡೆಸಬೇಕು ಎಂದು ಬೇಬಿ ಮಠದ ತ್ರಿನೇತ್ರ ಮಹಾಂತ ಶಿವಯೋಗಿ ಶ್ರೀ ತಿಳಿಸಿದರು.
ಗಂಗಾರತಿ: ಪ್ರತಿದಿನ ಗಂಗಾರತಿ, ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ಮಲೆ ಮಹ ದೇಶ್ವರ ಬೆಟ್ಟದಿಂದ ತ್ರಿವೇಣಿ ಸಂಗಮದವರೆಗೂ ಜ್ಯೋತಿ ಯಾತ್ರೆ ಸೇರಿದಂತೆ ಹಲವು ಕಾರ್ಯಕ್ರಮಗಳ ಬಗ್ಗೆ ಶ್ರೀಗಳ ಜತೆ ಚರ್ಚಿಸಲಾಯಿತು. 5 ಜಿಲ್ಲೆಗಳಲ್ಲಿ ಮಲೆ ಮಹದೇಶ್ವರ ಜ್ಯೋತಿ ಸಂಚರಿಸಲಿದ್ದು, ಅ.13 ರಂದು ಕೆ.ಆರ್.ಪೇಟೆಯ ತ್ರಿವೇಣಿ ಸಂಗಮ ತಲುಪಲಿದೆ. ದೇಶದ ವಿವಿಧ ಕಡೆಯಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ. ರಸ್ತೆ ಸೌಕರ್ಯ, ಸಾಂಸ್ಕೃತಿಕ ಕಾರ್ಯಕ್ರಮ, ಸಾಧು ಸಂತರಿಗೆ ವಸತಿ ಸೌಕರ್ಯ, ಪ್ರಸಾದ ವ್ಯವಸ್ಥೆ ಮಾಡಬೇಕು. ಬರುವ ಭಕ್ತರಿಗೆ ಸಂಗಮದಲ್ಲಿ ಸ್ನಾನಘಟ್ಟ ನಿರ್ಮಾಣ, ಶೌಚಾಲಯದ ವ್ಯವಸ್ಥೆ, ತಾತ್ಕಾಲಿಕ ಮನೆಗಳ ನಿರ್ಮಾಣ ಸೇರಿದಂತೆ ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ಅಗತ್ಯ ಸಿದ್ಧತೆ ಕೈಗೊಳ್ಳ ಲಾಗುತ್ತಿದೆ ಎಂದು ಸಚಿವ ನಾರಾಯಣಗೌಡ ಹೇಳಿದರು.
ಅದ್ದೂರಿ ಕಾರ್ಯಕ್ರಮ: ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸಲು ಚರ್ಚಿಸಲಾಯಿತು. ನಾಗಸಾಧು ಸಂತರು ಸೇರಿದಂತೆ ಎಲ್ಲಾ ಧಾರ್ಮಿಕ ಪ್ರತಿನಿಧಿಗಳು, ಜನಪ್ರತಿನಿಧಿಗಳನ್ನು ಒಳಗೊಂಡಂತೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಜಿಲ್ಲಾಧಿಕಾರಿ ಎಸ್.ಅಶ್ವಥಿ, ಎಸ್ಪಿ ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜ್, ಉಪ ವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಶೀಲ್ದಾರ್ ಎಂ.ವಿ.ರೂಪಾ, ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್, ಕುಂಭಮೇಳದ ಸಂಚಾಲಕ ಅಂಚಿ ಸಣ್ಣಸ್ವಾಮಿಗೌಡ, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ ಸೇರಿ ವಿವಿಧ ಜಿಲ್ಲೆಗಳಲ್ಲಿ ಮಲೆ ಮಹದೇಶ್ವರ ಜ್ಯೋತಿ ಸಂಚರಿಸಲಿದೆ. ಕುಂಭ ಮೇಳಕ್ಕೆ ಆಗಮಿಸುವ ಎಲ್ಲಾ ಸಾಧುಸಂತರು, ಜನರಿಗೆ ತೊಂದರೆ ಆಗದಂತೆ ವ್ಯವಸ್ಥೆ ಒದಗಿಸಿಕೊಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಮಠದಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದು.
– ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ