ತೆಕ್ಕಟ್ಟೆ: ಪುರಾಣ ಪ್ರಸಿದ್ಧ ಸಪ್ತಕ್ಷೇತ್ರಗಳಲ್ಲಿ ಒಂದಾದ ಕುಂಭಾಸಿ ಶ್ರೀ ಮಹಾಲಿಂಗೇಶ್ವರ (ಹರಿಹರ) ದೇವರ ದಿವ್ಯ ಸನ್ನಿಧಿಯಲ್ಲಿ ಜ.16 ರಂದು ಶ್ರೀ ಮನ್ಮಹಾ ರಥೋತ್ಸವವು ಕೋವಿಡ್ 19 ನಿಯಮಾನುಸಾರವಾಗಿ ಸಂಭ್ರಮದಿಂದ ಜರಗಿತು.
ಶ್ರೀಸನ್ನಿಧಿಯಲ್ಲಿ ದೇವಳದ ತಂತ್ರಿಗಳಾದ ಕೆ.ವೆಂಕಟೇಶ್ ಭಟ್ ಅವರ ಮಾರ್ಗದರ್ಶನದಂತೆ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು. ಈ ಬಾರಿ ವಿಶೇಷವಾಗಿ ದೇವರ ಉತ್ಸವ ಮೂರ್ತಿಯನ್ನು ನಂದಳಿಕೆ ರವಿರಾಜ್ ಭಟ್ ಅವರು ಹೊತ್ತು ನರ್ತಿಸುವ ದೃಶ್ಯ ನೆರೆದಿದ್ದ ಭಾವುಕ ಭಕ್ತರನ್ನು ಮಂತ್ರ ಮುಗ್ಧರನ್ನಾಗಿಸಿತು.
ಆಕರ್ಷಕ ಚಂಡೆ ವಾದನ ಹಾಗೂ ನಾದಸ್ವರ ಗಮನ ಸೆಳೆಯಿತು. ರಥೋತ್ಸವದ ಅಂಗವಾಗಿ ಭಕ್ತರಿಗೆ ಲಘು ಉಪಹಾರದ ವ್ಯವಸ್ಥೆಯನ್ನು ಕಳೆದ 9 ವರ್ಷದಿಂದ ನಡೆಸಿಕೊಂಡು ಬಂದಿರುವ ದಿ| ನಾರಾಯಣ ಪ್ರಭು ರವರ ಪುತ್ರರಾದ ಪುರುಷೋತ್ತಮ ಪ್ರಭು ಮತ್ತು ಕೆ.ರಾಧಾಕೃಷ್ಣ ಪ್ರಭು ಕುಂಭಾಸಿ ಹಾಗೂ ಕೆ.ಆರ್.ನಗರದ ದಿ| ಜಿ.ಎಮ್. ಕೃಷ್ಣ ರಾವ್ ಸ್ಮರಣಾರ್ಥ ಮಕ್ಕಳಿಂದ ಭಕ್ತರಿಗೆ ಪಾನಕ ಸೇವೆ ನಡೆಯಿತು.
ಈ ಸಂದರ್ಭದಲ್ಲಿ ದೇವಳದ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ಕೆ.ವೆಂಕಟೇಶ್ ಭಟ್, ಪರ್ಯಾಯ ಅರ್ಚಕರಾದ ಗುರುರಾಜ್ ಭಟ್ ಮಾಲಾಡಿ ಹಾಗೂ ಕುಟುಂಬಸ್ಥರು, ವಿದ್ವಾನ್ ಶ್ರೀಪತಿ ಉಪಾಧ್ಯಾಯ, ದೇವಳದ ವ್ಯವಸ್ಥಾಪಕ ಕೆ.ರಾಘವೇಂದ್ರ ರಾವ್ ಕುಂಭಾಸಿ, ಜಿ.ಶ್ರೀನಿವಾಸ್ ರಾವ್, ಕೊರ್ಗಿ ವಿಠಲ ಶೆಟ್ಟಿ ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್(ರಿ.) ಇದರ ಪ್ರವರ್ತಕ ಕೊರ್ಗಿ ವಿಠಲ ಶೆಟ್ಟಿ, ಗಣೇಶ ಪ್ರಭು ಕುಂಭಾಸಿ, ಹಾಗೂ ಅಪಾರ ಸಂಖ್ಯೆಯ ಭಕ್ತರು ನೆರೆದಿದ್ದರು.