ಜೋಯಿಡಾ: ವಿದ್ಯಾರ್ಥಿ ಶಿಕ್ಷಕರನ್ನು ಸ್ಮರಿಸುತ್ತಾನೋ ಅವನು ಉನ್ನತ ಮಟ್ಟದಲ್ಲಿ ಬೆಳೆಯುತ್ತಾನೆ. ಶಿಕ್ಷಕರನ್ನು ನೆನೆಸುವುದು, ಗೌರವಿಸಕೊಂಡು ಹೋಗುವುದು ಉತ್ತಮ ಸಮಾಜದ ಲಕ್ಷಣ. ಇದನ್ನು ಸದಾಕಾಲ ಮುಂದುವರೆಸಿಕೊಂಡು ಹೋಗಬೇಕೆಂದು ಎಂಎಲ್‌ಸಿ ಎಸ್.ಎಲ್. ಘೋಕ್ಲೃಕರ್ ಹೇಳಿದರು.
ಅವರು ಕುಂಬಾರವಾಡಾ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಉದ್ಘಾಟಿಸಿ ಮಾತನಾಡಿದರು. 111 ವರ್ಷಗಳ ಹಿಂದೆ ಕುಂಬಾರವಾಡಾ ಶಾಲೆಯನ್ನು ಯಾರು ಕಟ್ಟಿ ಬೆಳೆಸಿದ್ದಾರೋ ಅವರನ್ನು ಸ್ಮರಿಸುವುದು ಬಹುಮುಖ್ಯ. ಅವರನ್ನು ನಾನು ಗೌರವಿಸುತ್ತೇನೆ. ಕುಂಬಾರವಾಡಾ ಹಬ್ಬ ಈ ವರ್ಷದಿಂದ ಆರಂಭಗೊಂಡಿದೆ. ಇದನ್ನು ಪ್ರತಿವರ್ಷ ನಡೆಸಿಕೊಂಡು ಹೋಗಬೇಕು. ಇದಕ್ಕೆ ಬೇಕಾದ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷ ಪುರುಷೋತ್ತಮ ಕಾಮತ್, ಹಿಂದಿನ ಶಿಕ್ಷಣ ವ್ಯವಸ್ಥೆಯಷ್ಟು ಉತ್ತಮ ಈಗಿನ ದಿನಮಾನದಲ್ಲಿಲ್ಲ. ಹಿಂದೆ ನಮ್ಮ ಗುರುಗಳು ನೀಡಿದ ಕಠಿಣ ಶಿಕ್ಷಣ ಪದ್ಧತಿಯಿಂದಾಗಿ ಇಂದು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿದ್ದೇವೆ. ಶಿಕ್ಷಕರನ್ನು ಗೌರವಿಸಿ ಅವರ ಮಾರ್ಗದಲ್ಲಿ ನಡೆದು ಸಾಧನೆ ಮಾಡಿ. ಎಲ್ಲರೂ ಎತ್ತರಕ್ಕೆ ಏರಿ ಯಶಸ್ಸಿನ ಗುರಿ ಸಾಧಿಸಿ ಎಂದರು.
ಮುಖ್ಯ ಅತಿಥಿ ಡಾ| ಜಯಾನಂದ ಡೇರೆಕರ್ ಮಾತನಾಡಿ, ತಾಲೂಕು ಜೀವ ವೈವಿದ್ಯದಲ್ಲಿ ಜಗತ್ತಿನಲ್ಲಿ 7ನೇ ಸ್ಥಾನದಲ್ಲಿದೆ. ಇದು ಪ್ರವಾಸೋದ್ಯಮದ ಸ್ವರ್ಗ. ಕಾಳಿ ನದಿ ನಾಡಿಗೆಲ್ಲ ಬೆಳಕುನೀಡಿದ್ದು, ತಾಲೂಕಿನಲ್ಲಿ ಪ್ರವಾಸೋದ್ಯಮ ಬೆಳೆಯುತ್ತಿದೆ. ಇಲ್ಲಿನ ಪ್ರಕೃತಿ ದೇವರ ಕೊಡುಗೆ. ಹಾಗಾಗಿ ದೇವರು ನಮ್ಮೆಲ್ಲರಿಗೂ ಶಕ್ತಿ ಸಾಮರ್ಥ್ಯ ನೀಡಿದ್ದು, ಬೇರೆ ಎಲ್ಲಿಯೂ ಹೋಗದೆ ನಾವು ಇಲ್ಲಿಯೇ ಪ್ರಕೃತಿಯಡಿ ಬೆಳೆದು ಅಭಿವೃದ್ಧಿ ಹೊಂದುವ ಮೂಲಕ ತಾಲೂಕಿನ ಹೆಸರನ್ನು ಮುನ್ನಡೆಸೋಣ ಎಂದರು. ಬಿಇಒ ಹಿರೇಮಠ ಮಾತನಾಡಿ, ತಾಲೂಕು ಶಿಕ್ಷಣದಲ್ಲಿ ಸದಾ ಅಭಿವೃದ್ಧಿಯತ್ತ ಸಾಗುತ್ತಿದ್ದು, ಇದಕ್ಕೆ ಕುಂಬಾರವಾಡಾದಂತ ಶಾಲೆಗಳ ಕೊಡುಗೆ ಅಪಾರವಾಗಿದೆ. ಇಲ್ಲಿನ ಮುಂದಿನ ಪೀಳೆಗೆ ಶಿಕ್ಷಣ ಅಭಿವೃದ್ಧಿ ಪಥದತ್ತ ಸಾಗಲಿದೆ. ಇದಕ್ಕೆ ನಮ್ಮ ಇಲಾಖೆಯ ಸಹಕಾರ ಸದಾ ಇರಲಿದೆ ಎಂದರು. ಜಿ.ಪಂ ಸದಸ್ಯ ರಮೇಶ ನಾಯ್ಕ, ತಾಪಂ ಅಧ್ಯಕ್ಷೆ ನೈಮದಾ ಪಾಕ್ಲೃಕರ್, ತಾಪಂ ಸದಸ್ಯ ಸುರೇಶ ಬಂಗಾರೆ, ತಾಪಂ ಇಒ ತಾಲಾಜಿ ವಾಡಿಕರ್ ಮುಂತಾದವರು ಪಾಲ್ಗೊಂಡಿದ್ದರು.
ಕರ್ನಾಟಕ ಸರಕಾರ ಹೊಸ ಶಿಕ್ಷಣ ನೀತಿಯಡಿ ಈಗಾಗಲೇ ಘೋಷಿಸಿರುವ (ಸಂಯುಕ್ತ ಪ್ರೌಢಶಾಲೆ)
ಕರ್ನಾಟಕ ಪಬ್ಲಿಕ್ ಸ್ಕೂಲ್ ತಾಲೂಕಿನ ಕುಂಬಾರವಾಡಾದಲ್ಲಿ ನಡೆಯಲಿದೆ. ಇದರ ಅಭಿವೃದ್ಧಿಗಾಗಿ 3 ಕೋಟಿ ರೂ. ಸರಕಾರ ನೀಡಲಿದ್ದು, ಕುಂಬಾರವಾಡಾ ಶಿಕ್ಷಣ ಅಭಿವೃದ್ಧಿಗೆ ಪೂರಕವಾಗಲಿದೆ.
ಎಸ್.ಎಲ್. ಘೋಕ್ಲೃಕರ್, ಎಂಎಲ್‌ಸಿ