Advertisement

ಕುಮಾರಿಯ ಮಸಾಲ ಚುರುಮುರಿ

06:42 PM Aug 03, 2018 | |

“ಪ್ರತಿ ಕಥೆ ಹಿಂದೆ ಒಂದು ಕ್ರೈಮ್‌ ಇರುತ್ತೆ. ಆ ಕ್ರೈಮ್‌ ಹಿಂದೆ ಹುಡುಗಿಯರು ಇರ್ತಾರೆ…’ ಈ ಡೈಲಾಗ್‌ನೊಂದಿಗೆ ಫ್ಲ್ಯಾಶ್‌ಬ್ಯಾಕ್‌ಗೆ ಹೋದರೆ, ಗೆಳೆತನ, ಮೋಸ, ಹುಚ್ಚಾಟ, ಪ್ರೀತಿ, ಹುಡುಗಿ, ಕ್ರೈಮ್‌ ಇತ್ಯಾದಿ ವಿಷಯಗಳು ಅನಾವರಣಗೊಳ್ಳುತ್ತವೆ. ಒಂದು ಕಮರ್ಷಿಯಲ್‌ ಚಿತ್ರದಲ್ಲಿ ಏನೆಲ್ಲಾ ಇರಬೇಕೋ ಅದೆಲ್ಲವನ್ನೂ ಒಳಗೊಂಡಿರುವ “ಕುಮಾರಿ 21 ಎಫ್’, ಈಗಿನ ವಾಸ್ತವತೆಯ ಚಿತ್ರಣವನ್ನು ಉಣಬಡಿಸಿದೆ. ಪಕ್ಕಾ ಯೂಥ್‌ ಸಿನಿಮಾ ಎನಿಸಿಕೊಳ್ಳುವ “ಕುಮಾರಿ’ಯಲ್ಲಿ ಎಲ್ಲವೂ ವಿಶೇಷ ಅನ್ನುವಂಥದ್ದೇನಿಲ್ಲ.

Advertisement

ಆದರೆ, “ನಂಬಿಕೆ ಮತ್ತು ದ್ರೋಹ’ ಈ ಎರಡರ ನಡುವಿನ ಕಪಟವನ್ನು ಬಿಡಿಸಿಡುವ ಮೂಲಕ ಸಣ್ಣದ್ದೊಂದು ಸಂದೇಶ ಸಾರಿರುವ ನಿರ್ದೇಶಕರ ಪ್ರಯತ್ನ ಸಾರ್ಥಕ. ಕಮರ್ಷಿಯಲ್‌ ಅಂದಮೇಲೆ ರಂಗು ರಂಗಿನ ಹಾಡುಗಳಿರಬೇಕು, ಮಜವೆನಿಸುವ ದೃಶ್ಯಗಳಿರಬೇಕು, ಡೈಲಾಗ್‌ಗಳಿಗೆ ಶಿಳ್ಳೆ ಬೀಳುವಂತಿರಬೇಕು. ಅದಕ್ಕಿಲ್ಲಿ ಕೊರತೆ ಇಲ್ಲ. ಮೊದಲರ್ಧ ಹಾಡು, ಕುಣಿತ ಮತ್ತು ಕುಡಿತ ಇದರ ಜೊತೆಗೆ ಕಣ್ತುಂಬೋ ಗ್ಲಾಮರ್ರು ನೋಡುಗರನ್ನು ಅತ್ತಿತ್ತ ಅಲ್ಲಾಡಿಸೋದಿಲ್ಲ.

ಕಾರಣ, ಬ್ಯಾಂಕಾಕ್‌ನ ಹಾಡು, ಅಲ್ಲಿನ ಬೆಡಗಿಯರ ಸೌಂದರ್ಯ, ಬೋಲ್ಡ್‌ ಆಗಿ ಮಾತಾಡುವ ಜೊತೆಗೆ ಅಷ್ಟೇ ಗ್ಲಾಮರಸ್‌ ಆಗಿ ಮಿಂಚಿರುವ ನಾಯಕಿ, ಅಡ್ಡ ದಾರೀಲಿ ನಡೆಯೋ ಗೆಳೆಯರು, ಇವುಗಳ ಮಧ್ಯೆ ಇಕ್ಕಟ್ಟಿಗೆ ಸಿಲುಕಿ, ಗ್ಲಾಮರ್‌ ಹುಡುಗಿಯ ರುಚಿ ನೋಡೋ ನಾಯಕನ ತಳಮಳ. ಇವಿಷ್ಟರ ನಡುವೆ ಮೊದಲರ್ಧ ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ. ದ್ವಿತಿಯಾರ್ಧದಲ್ಲಿ “ಕುಮಾರಿ’ಗೊಂದು ತಿರುವು ಸಿಗುತ್ತೆ. ಅದೇ ಚಿತ್ರದ ಕುತೂಹಲ. ಇದು ತೆಲುಗಿನ ಅವತರಣಿಕೆ.

ಮೂಲ ಚಿತ್ರ ನೋಡಿದವರಿಗೆ ಇದು ಅಷ್ಟಾಗಿ ರುಚಿಸದಿರಬಹುದು. ಆದರೆ, ಕನ್ನಡದಲ್ಲಿ ಅಷ್ಟಾಗಿ ಬೋಲ್ಡ್‌ ಹುಡುಗಿಯರಿಲ್ಲ, ಗ್ಲಾಮರಸ್‌ನಲ್ಲಿ ಹಿಂದಿದ್ದಾರೆ, ಪೋಲಿ ಮಾತುಗಳಿಂದ ದೂರವಿದ್ದಾರೆ ಎಂಬ ಮಾತಿಗೆ ಅಪವಾದ ಎಂಬಂತೆ, ಇಲ್ಲಿನ ನಾಯಕಿ ಪಕ್ಕಾ ಬೋಲ್ಡ್‌ ಹುಡುಗಿಯಾಗಿ, ಸಖತ್‌ ಗ್ಲಾಮರಸ್‌ ಆಗಿ, ತುಂಟ ಮಾತುಗಳ ಜೊತೆ ಒಂದಷ್ಟು ಎಮೋಷನಲ್‌ ಆಗಿಯೂ ನಟಿಸಿರುವುದು ವಿಶೇಷ. ಆ ಕಾರಣಕ್ಕೆ “ಕುಮಾರಿ’ಯನ್ನು ಕೊಂಚ ಇಷ್ಟಪಡಲ್ಲಡ್ಡಿಯಿಲ್ಲ.

ಪ್ರಣಾಮ್‌ ದೇವರಾಜ್‌ಗೆ ಇದು ಮೊದಲ ಚಿತ್ರ. ಸಾಮಾನ್ಯವಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಯಾವುದೇ ಹೊಸ ಹೀರೋ ಇರಲಿ, ಆ್ಯಕ್ಷನ್‌ಗೆ ಒತ್ತು ಕೊಡುತ್ತಾರೆ. ಆದರೆ, ಪ್ರಣಾಮ್‌ಗಿಲ್ಲಿ ಅಂತಹ ಯಾವುದೇ ಆ್ಯಕ್ಷನ್‌ ಇಲ್ಲ, ರಗಡ್‌ ಲುಕ್‌ ಇಲ್ಲ. ಅವರ “ಕುಮಾರಿ’ ಆಯ್ಕೆ ಪರ್ಫೆಕ್ಟ್ ಆಗಿದೆ. ಚಿತ್ರದಲ್ಲಿ ಆಡಂಬರವಿಲ್ಲ. ಆದರೆ, ಹಾಡುಗಳ ಅಬ್ಬರವಿದೆ. ಅಲ್ಲಲ್ಲಿ ತಗ್ಗು-ದಿನ್ನೆ ಇದೆ. ಎಲ್ಲವೂ ಸಲೀಸಾಗಿದೆ ಅಂತ ಹೇಳುವುದು ಕಷ್ಟ.

Advertisement

ಕಥೆಯಲ್ಲಿ ತಕ್ಕಮಟ್ಟಿಗೆ ಗಟ್ಟಿತನವಿದೆ. ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿ ಹಿಡಿತ ಇದ್ದಿದ್ದರೆ, “ಕುಮಾರಿ’ ಇನ್ನಷ್ಟು ಮನಸ್ಸಿಗೆ ಹತ್ತಿರವಾಗುತ್ತಿದ್ದಳು. ಆದರೆ, ನಿರ್ದೇಶಕರ ಪ್ರಯತ್ನ ಅಷ್ಟಕ್ಕೇ ಸಾಕಾದಂತಿದೆ. ಚಿತ್ರದಲ್ಲಿ ಕೆಲ ದೃಶ್ಯಗಳು ಪಡ್ಡೆಗಳಿಗೆ ಇಷ್ಟವಾಗದೇ ಇರದು. ಅದಕ್ಕೆ ಕಾರಣ ನಾಯಕಿಯ ಬೋಲ್ಡ್‌ ಮಾತು ಮತ್ತು ಹಸಿಬಿಸಿ ಎನಿಸುವ ದೃಶ್ಯಗಳು. ಕೆಲವೆಡೆ ಸಂಕಲನದ ಎಡವಟ್ಟು ಅನ್ನೋದು ಬಿಟ್ಟರೆ, “ಕುಮಾರಿ’ ಅತೀ ಸುಂದರಿ!

ಸಿದ್ದು (ಪ್ರಣಾಮ್‌)ಗೆ ಶಿಪ್‌ನಲ್ಲಿ ಶೆಫ್ ಆಗುವಾಸೆ. ಅದಕ್ಕಾಗಿ ಹಣ ಬೇಕು. ಹೊಂದಿಸಲು ಹರಸಾಹಸ. ಅವನಿಗೆ ಅಲ್ಲಿ ಇಲ್ಲಿ ಬೆದರಿಸಿ, ಚಿಲ್ಲರೆ ಕಾಸು ಕಿತ್ತುಕೊಂಡು ಬದುಕು ನಡೆಸೋ ಮೂವರ ಗೆಳೆಯರ ಸಹವಾಸ. ಬಂದಿದ್ದರಲ್ಲಿ ಸಿದ್ದುಗೂ ಒಂದು ಭಾಗ. ಈ ಮಧ್ಯೆ ಕುಮಾರಿ ಎಂಬ ಮಾಡೆಲ್‌ ಆಕಸ್ಮಿಕವಾಗಿ ಸಿದ್ದುಗೆ ಪರಿಚಯವಾಗ್ತಾಳೆ. ಅವಳು ಬೋಲ್ಡ್‌ ಹುಡುಗಿ, ಅವನೋ ಅವಳನ್ನು ಮುಟ್ಟೋಕು ಮುಜುಗರ ಪಡುವಂಥ ಹುಡುಗ.

ಇಬ್ಬರ ನಡುವೆ ಪ್ರೀತಿ ಶುರುವಾಗುತ್ತೆ. ಅವನಿಗೆ ಮಾತ್ರ ಅವಳ ಬಗ್ಗೆ ಎಲ್ಲೋ ಒಂದು ಕಡೆ ಅನುಮಾನದ ಭೂತ ಮೆತ್ತಿಕೊಳ್ಳುತ್ತೆ. ಅವಳ ಬಗ್ಗೆ ಸಾಕಷ್ಟು ಅನುಮಾನ ಪಟ್ಟು, ಇನ್ನೇನು, ತನ್ನ ತಪ್ಪಿನ ಅರಿವಾಗಿ ಅವಳ ಬಳಿ ಹೋಗುವ ಹೊತ್ತಿಗೆ, ಅಲ್ಲೊಂದು ಘಟನೆ ನಡೆದಿರುತ್ತದೆ. ಆ ನಂತರ ಏನೆಲ್ಲಾ ಆಗುತ್ತೆ ಎಂಬುದೇ ಕಥೆ. ಆ ಕುತೂಹಲವಿದ್ದರೆ, ಒಮ್ಮೆ “ಕುಮಾರಿ’ಯನ್ನು ಮೀಟ್‌ ಮಾಡಬಹುದು. ಪ್ರಣಾಮ್‌ಗೆ ಇದು ಮೊದಲ ಚಿತ್ರ ಅನಿಸಲ್ಲ.

ಲುಕ್ಕು ಮತ್ತು ಡ್ಯಾನ್ಸ್‌ನಲ್ಲಿ ಇಷ್ಟವಾಗುವ ಪ್ರಣಾಮ್‌, ನಟನೆಯಲ್ಲಿ ಇನ್ನಷ್ಟು ಪಳಗುವ ಅಗತ್ಯವಿದೆ. ನಿಧಿ ಕುಶಾಲಪ್ಪ “ಬೋಲ್ಡ್‌’ ಹುಡುಗಿಯಾಗಿ ಗಮನಸೆಳೆಯುತ್ತಾರೆ. ರಿತೀಶ್‌, ಮನೋಜ್‌, ಅಕ್ಷಯ್‌ ಸಿಕ್ಕ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಸಂಗೀತ, ಅವಿನಾಶ್‌, ಚಿದಾನಂದ್‌ ಇದ್ದಷ್ಟು ಸಮಯ ಇಷ್ಟವಾಗುತ್ತಾರೆ. ಸಾಗರ್‌ ಮಹತಿ ಸಂಗೀತದಲ್ಲಿ ಎರಡು ಹಾಡುಗಳು ಗುನುಗುವಂತಿವೆ. ರಾಮಿ ರೆಡ್ಡಿ ಕ್ಯಾಮೆರಾದಲ್ಲಿ “ಕುಮಾರಿ’ಯ ಸೌಂದರ್ಯ ಅರಳಿದೆ.

ಚಿತ್ರ: ಕುಮಾರಿ 21 ಎಫ್
ನಿರ್ಮಾಣ: ಸಂಪತ್‌ ಕುಮಾರ್‌, ಶ್ರೀಧರ್‌ ರೆಡ್ಡಿ
ನಿರ್ದೇಶನ: ಶ್ರೀಮನ್‌ ವೇಮುಲ
ತಾರಾಗಣ: ಪ್ರಣಾಮ್‌, ನಿಧಿ ಕುಶಾಲಪ್ಪ, ರವಿಕಾಳೆ, ಅಕ್ಷಯ್‌, ಮನೋಜ್‌, ರಿತೀಶ್‌, ಅವಿನಾಶ್‌, ಸಂಗೀತ ಮುಂತಾದವರು

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next