Advertisement

ಮಕ್ಕಳಿಗೆ ಕುಮಾರೇಶ್ವರ ಆಸ್ಪತ್ರೆ ಸಂಜೀವಿನಿ

07:31 PM May 27, 2021 | Team Udayavani |

ವಿಶೇಷ ವರದಿ

Advertisement

ಬಾಗಲಕೋಟೆ: ಕೊರೊನಾ ಸೃಷ್ಟಿಸಿರುವ ಈ ಸಂಕಷ್ಟದ ಸಮಯದಲ್ಲಿ ಕೋವಿಡ್‌ ಎನ್ನುವ ಸಾಂಕ್ರಾಮಿಕ ರೋಗ ಮಕ್ಕಳ ಬಾಲ್ಯ ಮತ್ತು ಬದುಕನ್ನು ಕಸಿದುಕೊಳ್ಳುತ್ತಿದೆಯೇನೋ ಎನ್ನುವ ಆತಂಕ ಎದುರಾಗಿದೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ಬಿವಿವಿ ಸಂಘದ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿನಿಂದ ಬಳಲುತ್ತಿದ್ದ ಐದು ಮಕ್ಕಳು ಮತ್ತು ಮೂರು ನವಜಾತ ಶಿಶುಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಿದ್ದು, ಭರವಸೆಯ ಬೆಳಕಾಗಿ ಗೋಚರಿಸುತ್ತಿದೆ.

ಒಂಬತ್ತು ದಿನಗಳ ಮಗುವಿಗೆ ಚಿಕಿತ್ಸೆ: ಕೋಲಾರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನಿಸಿದ ಒಂಬತ್ತು ದಿನಗಳ ಮಗುವನ್ನು ಉಸಿರಾಟದ ತೊಂದರೆಯ ಕಾರಣದಿಂದ ದಿನಾಂಕ 20-05-2021ರಂದು ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ತಪಾಸಣೆ ನಂತರ ಮಗುವಿಗೆ ಕೋವಿಡ್‌ ಸೋಂಕು ತಗುಲಿರುವುದು ದೃಢಪಟ್ಟಿತು. ಆಸ್ಪತ್ರೆಯ ಚಿಕ್ಕ ಮಕ್ಕಳ ವಿಭಾಗದಲ್ಲಿ ಮಗುವಿಗೆ ಎಚ್‌.ಎಫ್‌. ಎನ್‌.ಸಿ ಯಂತ್ರ ಅಳವಡಿಸಿ ಚಿಕಿತ್ಸೆ ನೀಡಲಾಯಿತು. ಸರಿಯಾದ ಸಮಯದಲ್ಲಿ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದು ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡಿದ ಫಲವಾಗಿ ಮಗು ಚೇತರಿಸಿಕೊಂಡಿದ್ದು, ಕಳೆದ ಮೇ 24ರಂದು ಪಾಲಕರು ತಮ್ಮ ಒಡಲ ಕುಡಿಯೊಂದಿಗೆ ಹರ್ಷಚಿತ್ತರಾಗಿ ಮನೆಗೆ ಮರಳಿರುವರು.ಮಗುವಿನ ಪ್ರಾಣ ಉಳಿಸಿ ಪಾಲಕರ ಆತಂಕ ದೂರ ಮಾಡಿದ ಆ ಕ್ಷಣ ಡಾ| ವೀರಣ್ಣ ಚರಂತಿಮಠ ಅವರನ್ನೊಳಗೊಂಡು ಆಡಳಿತ ಮಂಡಳಿ ಹಾಗೂ ಚಿಕಿತ್ಸೆ ನೀಡಿದ ವೈದ್ಯರಲ್ಲಿ ಸಾರ್ಥಕ ಮತ್ತು ಧನ್ಯತೆಯ ಭಾವ.

ಆರು ತಿಂಗಳ ಮಗುವಿಗೆ ಸೋಂಕು: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಆರು ತಿಂಗಳ ವಯಸ್ಸಿನ ಮಗುವನ್ನು ಉಸಿರಾಟದ ತೊಂದರೆ ಕಾರಣದಿಂದ ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯಕೀಯ ಪರೀಕ್ಷೆ ನಂತರ ಮಗು ಕೋವಿಡ್‌ ನ್ಯುಮೋನಿಯಾದಿಂದ ಬಳಲುತ್ತಿರುವುದು ದೃಢಪಟ್ಟಿತು. ಪ್ರಸ್ತುತ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದಲ್ಲಿ ಎಚ್‌ಎಫ್‌ಎನ್‌ಸಿ ಯಂತ್ರ ಅಳವಡಿಸಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಗು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಚೇತರಿಸಿಕೊಳ್ಳುತ್ತಿದೆ. ಪುಟ್ಟ ಕಂದಮ್ಮನ ಪುಟ್ಟ ತುಟಿಗಳ ಮೇಲೆ ಮೂಡುತ್ತಿರುವ ಮುಗುಳ್ನಗೆ ಪಾಲಕರಲ್ಲಿ ಹರ್ಷ ಉಕ್ಕಿಸುತ್ತಿದೆ. ಕೋವಿಡ್‌ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಇನ್ನುಳಿದ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಮಕ್ಕಳು ಸ್ಪಂದಿಸುತ್ತಿರುವರು. ಈ ಎಲ್ಲ ಎಂಟು ಮಕ್ಕಳಲ್ಲಿ ಕಾಣಿಸಿಕೊಂಡಿರುವ ಕೋವಿಡ್‌ ಸೋಂಕು ಅದು ತಾಯಂದಿರಿಂದ ಮಕ್ಕಳಿಗೆ ಹರಡಿರುವುದು ದೃಢಪಟ್ಟಿದೆ. ಕೋವಿಡ್‌ ಸೋಂಕು ತಗುಲಿದ ಬಾಣಂತಿಯರು ಮಾಸ್ಕ್ ಧರಿಸಿ, ಕೈ ತೊಳೆದು ನವಜಾತ ಶಿಶುವಿಗೆ ಎದೆಹಾಲು ಉಣಿಸಬೇಕು. ಪಾಲಕರು ಕೋವಿಡ್‌ ಸೋಂಕಿನಿಂದ ಬಳಲುತ್ತಿದ್ದಲ್ಲಿ ಅಂಥವರು ಸರಿಯಾದ ಚಿಕಿತ್ಸೆ ಪಡೆಯಬೇಕು ಮತ್ತು ಸೋಂಕು ಮಕ್ಕಳಿಗೆ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕೆನ್ನುವುದು ವೈದ್ಯರ ಸಲಹೆಯಾಗಿದೆ.

ಮೂರನೇ ಅಲೆಯ ಆತಂಕ: ಮುಂದಿನ ದಿನಗಳಲ್ಲಿ ಕೋವಿಡ್‌ ಸೋಂಕಿನ ಮೂರನೇ ಅಲೆ ಕಾಣಿಸಿಕೊಳ್ಳಲಿದ್ದು ಅದು ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರಬಹುದೆಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಅಂಥದ್ದೊಂದು ಆತಂಕ ನಿಜವಾದಲ್ಲಿ ಮಕ್ಕಳನ್ನು ಆ ಒಂದು ಸಂಕಷ್ಟದಿಂದ ಪಾರು ಮಾಡುವುದೇ ಸದ್ಯದ ತುರ್ತು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಶಾಸಕ ಮತ್ತು ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷ ಡಾ|ವೀರಣ್ಣ ಚರಂತಿಮಠ ಅವರ ಮಾರ್ಗದರ್ಶನದಲ್ಲಿ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯಲ್ಲಿ 30 ಐಸಿಯು ಮತ್ತು 30 ಆಕ್ಸಿಜನ್‌ ಬೆಡ್‌ಗಳ ಸೌಲಭ್ಯದ ಚಿಕ್ಕಮಕ್ಕಳ ಕೋವಿಡ್‌ ಚಿಕಿತ್ಸಾ ಕೇಂದ್ರ ಆರಂಭಿಸಲಾಗಿದೆ. ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ವೈದ್ಯಕೀಯ ಉಪಕರಣಗಳು ಮತ್ತು ಔಷಧಿಗಳನ್ನು ಖರೀದಿಸಲಾಗಿದೆ.

Advertisement

ಪ್ರಾಚಾರ್ಯ ಡಾ|ಅಶೋಕ ಮಲ್ಲಾಪುರ, ಚಿಕ್ಕಮಕ್ಕಳ ತಜ್ಞೆ ಮತ್ತು ವೈದ್ಯಕೀಯ ಅಧೀಕ್ಷಕಿ ಡಾ|ಭುವನೇಶ್ವರಿ ಯಳಮಲಿ, ಸ್ತ್ರೀ ರೋಗ ಮತ್ತು ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ|ಆಶಾಲತಾ ಮಲ್ಲಾಪುರ ಹಾಗೂ ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ|ಅಶೋಕ ಬಡಕಲಿ ಅವರ ನೇತƒತ್ವದ ತಂಡ ಕಾರ್ಯೋನ್ಮುಖವಾಗಿದೆ ಎಂದು ಬಿವಿವಿ ಸಂಘದ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next