Advertisement
ದೇವೇಗೌಡ ಹಾಗೂ ಕುಮಾರಸ್ವಾಮಿ ದಂಪತಿ ಪ್ರತ್ಯೇಕ ಹೆಲಿಕಾಪ್ಟರ್‌ನಲ್ಲಿ ಧರ್ಮಸ್ಥಳದಿಂದ ಕೊರಡಕಲ್ಲಿನ ಹೆಲಿ ಪ್ಯಾಡ್‌ಗೆ ಬಂದು, ನಂತರ ಶ್ರೀಮಠಕ್ಕೆ ಆಗಮಿಸಿದರು. ದೇವೇಗೌಡರ ಕುಟುಂಬ ಸದಸ್ಯರೆಲ್ಲರೂ ಒಟ್ಟಾಗಿ ಶಾರದಾಂಬೆಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.ಅಲ್ಲದೆ, ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಏರ್ಪಡಿಸಿದ್ದ ಚಂಡಿಕಾಹೋಮದ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ದೇವೇ ಗೌಡರ ಕುಟುಂಬದ ಸಂಕಲ್ಪದಂತೆ ಪುರೋಹಿತರಾದ ಸೋಮ ಯಾಜಿಗಳ ನೇತೃತ್ವದಲ್ಲಿ ಮಠದ ಅರ್ಚಕ ಸೀತಾರಾಮ ಶರ್ಮ ನೇತೃತ್ವದಲ್ಲಿ ನವ ಚಂಡಿಕಾಯಾಗ ನೆರವೇರಿಸಲಾಯಿತು. ಯಾಗದ ಪೂರ್ಣಾಹುತಿ, ನಂತರ ಸುಹಾಸಿನಿ ಪೂಜೆಯ ಅಂಗವಾಗಿ ಮಹಿಳೆಯರಿಗೆ ಬಾಗೀನ ಅರ್ಪಿಸಲಾಯಿತು.
ಇದಕ್ಕೂ ಮೊದಲು ಕುಮಾರಸ್ವಾಮಿಯವರು, ಪತ್ನಿ ಸಹಿತರಾಗಿ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಬೆಳಗ್ಗೆ 9.30ರ ಸುಮಾರಿಗೆ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ಎಚ್‌ಡಿಕೆ ಆಗಮಿಸಿದರು. ಬಳಿಕ ದೇವರ ದರ್ಶನ ಪಡೆದು, ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರನ್ನು
ಭೇಟಿಯಾಗಿ, ಅವರನ್ನು ಸನ್ಮಾನಿಸಿ, ಆಶೀರ್ವಾದ ಪಡೆದರು. ಹೆಗ್ಗಡೆಯವರು ಎಚ್‌ಡಿಕೆ ಅವರನ್ನು ಗೌರವಿಸಿದರು. ಬಳಿಕ ಸನ್ನಿಧಿ ವಸತಿ ಗೃಹಕ್ಕೆ ತೆರಳಿ ಮುಖಂಡರೊಂದಿಗೆ ಮಾತುಕತೆ ನಡೆಸಿದರು. 11 ಗಂಟೆ ಸುಮಾರಿಗೆ ಹೆಲಿಕಾಪ್ಟರ್ ಮೂಲಕ ಶೃಂಗೇರಿಗೆ ಪ್ರಯಾಣ ಬೆಳೆಸಿದರು.