ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡ ಕಲ್ಲಪ್ಪ ಹಂಡೀಬಾಗ್ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿದೆ ಮಾತನಾಡಿದ್ದೇನೆ ಎಂದು ರಾಜಕೀಯ ಕಾರಣಕ್ಕಾಗಿ ನನ್ನ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುರುಬ ಸಮುದಾಯದ ಕೆಲವು ಮುಖಂಡರು ಹಂಡೀಬಾಗ್ ಕುಟುಂಬ ಸಂಕಷ್ಟದಲ್ಲಿರುವಾಗ ಎಲ್ಲಿ ಹೋಗಿದ್ದರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ನಾನು ಎಲ್ಲಾ ಸಮುದಾಯದವರನ್ನು ಗೌರವವಾಗಿ ಕಾಣುತ್ತೇನೆ. ಯಾರ ಬಗ್ಗೆಯೂ ಕೇವಲವಾಗಿ ಮಾತನಾಡುವುದಿಲ್ಲ. ಕಲ್ಲಪ್ಪ ಹಂಡೀಬಾಗ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ ಎಂಬುದನ್ನು ತಿಳಿದು ಅವರ ಮನೆಗೆ ಹೋಗಿ ಹಂಡೀಬಾಗ್ ಪತ್ನಿಯೊಂದಿಗೆ ಮಾತನಾಡಿದ್ದೆ. ಆ ಸಂದರ್ಭದಲ್ಲಿ ಕುಟುಂಬದ ಸಂಕಷ್ಟದ ಬಗ್ಗೆ ಮಾತನಾಡಿದ್ದೆ. ಇದನ್ನೇ ತಪ್ಪಾಗಿ ಅರ್ಥೈಸಿಕೊಂಡು ನನ್ನ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ನನ್ನ ವಿರುದ್ಧ ರಾಜಕೀಯ ಕಾರಣಕ್ಕೆ ಪ್ರತಿಭಟನೆ ಮಾಡುತ್ತಿರುವ ಸಮುದಾಯದ ಕೆಲವು ಮುಖಂಡರು ಕಲ್ಲಪ್ಪ ಹಂಡೀಬಾಗ್ ಆತ್ಮಹತ್ಯೆ ಮಾಡಿಕೊಂಡಾಗ ಎಲ್ಲಿ ಹೋಗಿದ್ದರು? ಅವರ ಕುಟುಂಬ ಸಂಕಷ್ಟದಲ್ಲಿದ್ದಾಗ ಏಕೆ ನೆರವಿಗೆ ಬರಲಿಲ್ಲ? ಅವರಿಗೆ ನಿಜವಾಗಿಯೂ ಆ ಕುಟುಂಬದ ಬಗ್ಗೆ ಗೌರವ ಇದ್ದರೆ ಕುಟುಂಬಕ್ಕೆ ನೆರವು ನೀಡದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕೇ ಹೊರತು ರಾಜಕೀಯ ಕಾರಣಕ್ಕಾಗಿ ನನ್ನ ವಿರುದ್ಧ ಪ್ರತಿಭಟನೆ ಮಾಡುವುದರಲ್ಲಿ ಅರ್ಥವಿಲ್ಲ. ಇಂತಹ ಕೆಲವು ಮುಖಂಡರಿಂದ ಸಮುದಾಯಕ್ಕೇ ಅಗೌರವ ಉಂಟಾಗುತ್ತದೆ ಎಂದರು.
ಸಿಎಂ ಸಿದ್ದರಾಮಯ್ಯ ಎರಡಲ್ಲ,ನಾಲ್ಕು ಕ್ಷೇತ್ರಗಳಲ್ಲಿ ಬೇಕಾದರೂ ನಿಲ್ಲಲಿ.ಅದು ಅವರಿಗೆ ಸಂಬಂಧಿಸಿದ ವಿಚಾರ. ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವುದರ ಮೇಲಷ್ಟೇ ನನ್ನ ಗಮನ.
– ಎಚ್.ಡಿ.ಕುಮಾರಸ್ವಾಮಿ,ಜೆಡಿಎಸ್ ರಾಜ್ಯಾಧ್ಯಕ್ಷ