Advertisement

ಕೆಡವಲು ಕಿಂಗ್‌ಪಿನ್‌ ಕಾಸು​​​​​​​

06:00 AM Sep 15, 2018 | |

ಬೆಂಗಳೂರು: ಮೈತ್ರಿ ಸರ್ಕಾರವನ್ನು ಕೆಡವಲು ವ್ಯರ್ಥ ಪ್ರಯತ್ನ ನಡೆಸುತ್ತಿರುವ ಬಿಜೆಪಿ, ಈ ಕಾರ್ಯಕ್ಕಾಗಿ ಹಣ ಸಂಗ್ರಹಕ್ಕೆ ನಾನಾ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಕಿಂಗ್‌ಪಿನ್‌ಗಳನ್ನು ಬಳಸಿಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Advertisement

ಅತೃಪ್ತ ಜಾರಕಿಹೊಳಿ ಸಹೋದರರು ಮೈತ್ರಿ ಸರ್ಕಾರಕ್ಕೆ ಸಂಚಕಾರ ತರುವ ಬೆಳವಣಿಗೆಗಳು ಸಂಭವಿಸುತ್ತಿವೆ ಎಂಬ ಮಾತುಕತೆ ಬೆನ್ನಲ್ಲೇ ಮೈತ್ರಿ ಸರ್ಕಾರವನ್ನು ಕೆಡವಲು ಬಿಜೆಪಿ ಹುನ್ನಾರ ನಡೆಸುತ್ತಿದೆ ಎಂಬುದಾಗಿ ಸ್ವತಃ ಮುಖ್ಯಮಂತ್ರಿಗಳೇ ಆರೋಪ ಮಾಡಿರುವುದು ಚರ್ಚೆಯ ದಿಕ್ಕನ್ನೇ ಬದಲಾಯಿಸಿದೆ. 

ಇದಕ್ಕೆ ಧ್ವನಿಗೂಡಿಸುವಂತೆ ಸಚಿವ ಡಿ.ಕೆ.ಶಿವಕುಮಾರ್‌ ಕೂಡ ಶಾಸಕರನ್ನು ಸೆಳೆಯಲು ಬಿಜೆಪಿ ಏನೆಲ್ಲಾ ಆಮಿಷ ಒಡ್ಡುತ್ತಿದೆ ಎಂಬುದು ಗೊತ್ತಿದೆ ಎಂದು ಮಾರ್ಮಿಕವಾಗಿ ನುಡಿದಿರುವುದು ಮಹತ್ವ ಪಡೆದುಕೊಂಡಿದೆ.

ಮುಖ್ಯಮಂತ್ರಿಗಳ ಗೃಹ ಕಚೇರಿ “ಕೃಷ್ಣಾ’ದಲ್ಲಿ ಕುಮಾರಸ್ವಾಮಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುವಾಗ ಈ ಆರೋಪ ಮಾಡಿದರು. ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ನಾಯಕರು ಪ್ರಯತ್ನ ನಡೆಸಿದ್ದಾರೆಯೇ ಎಂಬ ಪ್ರಶ್ನೆಗೆ ನಗುತ್ತಲೇ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅವರ ಕೆಲಸ ಅವರು ಮಾಡಲಿ. ಅದಕ್ಕೂ ನನಗೂ ಸಂಬಂಧವಿಲ್ಲ. ಯಾರಿಗೆಲ್ಲಾ ಆಮಿಷ ಒಡ್ಡುತ್ತಾರೆ ಎಂಬುದು ನನಗೆ ಗೊತ್ತಿಲ್ಲವೇ? ನಾನೇನು ಸುಮ್ಮನೆ ಕೂತಿದ್ದೇನೆಯೇ? ಎಲ್ಲೆಲ್ಲಿ ಹಣ ಸಂಗ್ರಹಿಸುತ್ತಿದ್ದಾರೆ, ಹಣ ಸಂಗ್ರಹದಲ್ಲಿ ತೊಡಗಿರುವ ಕಿಂಗ್‌ಪಿನ್‌ಗಳು ಯಾರು ಎಂಬುದೂ ಗೊತ್ತಿದೆ. ಅದರ ವಿರುದ್ಧ ಕಾನೂನು ಕ್ರಮ ಜರುಗಿಸುವ ಕಾರ್ಯವನ್ನು ಆರಂಭಿಸಿದ್ದೇನೆ ಎಂದು ಮಾರ್ಮಿಕವಾಗಿ ನುಡಿದರು.

“ಬೆಂಕಿ ಪ್ರಕರಣ’ ಪ್ರಸ್ತಾಪಿಸಿದ ಸಿಎಂ:
2009-10ರಲ್ಲಿ ಬಿಬಿಎಂಪಿಯಲ್ಲಿ ಕಡತವಿದ್ದ ಕಚೇರಿಗೆ ಬೆಂಕಿ ಹಚ್ಚಿದ ಕಿಂಗ್‌ಪಿನ್‌ ಒಬ್ಬರು ಸರ್ಕಾರವನ್ನು ಕೆಡವಲು ಹಣ ಹೊಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ರೆಸಾರ್ಟ್‌ ತೆರೆಯಲು ಹೋದ ಸಕಲೇಶಪುರದ ಕಾಫಿ ಪ್ಲಾಂಟರ್‌ ಒಬ್ಬರು ಕೊನೆಗೆ ಪತ್ನಿ, ಮಗುವನ್ನು ಕೊಂದು ಜೈಲಿನಲ್ಲಿದ್ದಾರೆ. ಅದಕ್ಕೆ ಕಾರಣಕರ್ತ ಕಿಂಗ್‌ಪಿನ್‌ ಈಗ ಯಾರೊಂದಿಗೆ ಸೇರಿ ಸರ್ಕಾರ ಕೆಡವಲು ಹಣ ಸಂಗ್ರಹಿಸುತ್ತಿದ್ದಾರೆಂದು ಗೊತ್ತಿದೆ ಎಂದರು.

Advertisement

ಇಸ್ಪೀಟ್‌ ದಂಧೆಯಿಂದ ನಿತ್ಯ ಗಳಿಸುತ್ತಿರುವ ಕೋಟ್ಯಂತರ ರೂ. ಹಣದಿಂದ ಸರ್ಕಾರವನ್ನು ಕೆಡವಲು ಹೊರಟಿರುವ ಕಿಂಗ್‌ಪಿನ್‌ ಹಿನ್ನಲೆ ಏನು ಎಂಬುದೂ ಗೊತ್ತಿದೆ. ನಾನೇನು ಸುಮ್ಮನಿಲ್ಲ. ನನಗೆ ಯಾವ ಅಡೆತಡೆಯೂ ಇಲ್ಲ. ನಾನು ಆರಾಮವಾಗಿದ್ದೇನೆ. ಅವರು ವ್ಯರ್ಥ ಕಸರತ್ತು ಮಾಡುತ್ತಿದ್ದಾರೆ. ನಾನೇಕೆ ಬೇಡ ಎನ್ನಲಿ ಎನ್ನುತ್ತಾ ಕುಮಾರಸ್ವಾಮಿ ನಕ್ಕರು.

ಸದ್ಯ ಅಡ್ವಾನ್ಸ್‌ ಪೇಮೆಂಟ್‌!:
ಬಿಜೆಪಿಯವರು ರೆಸಾರ್ಟ್‌ ಆದರೂ ಕಾಯ್ದಿರಿಸಲಿ, ಗುಡಿಸಲಾದರೂ ಸಿದ್ಧ ಮಾಡಲಿ. ನಾನು ಎಲ್ಲದಕ್ಕೂ ತಯಾರಿದ್ದೇನೆ. ಶಾಸಕರಿಗೆ ಹಣದ ಆಮಿಷ ಒಡ್ಡುತ್ತಿದ್ದಾರೆ. ಸದ್ಯ ಅಡ್ವಾನ್ಸ್‌ ಪೇಮೆಂಟ್‌ ನಡೆಯುತ್ತಿದೆ. ಅದೆಲ್ಲಾ ಈಗ ಬೇಡ. ಸತ್ಯ ಹೊರಗೆ ಬರಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮೈಸೂರು ಭಾಗದ ಬಿಜೆಪಿ ಮುಖಂಡರು ನನ್ನ ಸಂಪರ್ಕದಲ್ಲಿಲ್ಲ. ಆ ಭಾಗದವರ ಹೆಸರನ್ನು ಎಳೆದು ತರುವುದು ಸರಿಯಲ್ಲ. ನನ್ನೊಂದಿಗೆ ಸಂಪರ್ಕದಲ್ಲಿರುವವರ ಪಟ್ಟಿಯೇ ಬೇರೆ ಇದೆ. ನಾನು ರಾಜ್ಯದ ಅಭಿವೃದ್ಧಿಗೆ, ಜನರ ಕೆಲಸ ಮಾಡಲು ಒತ್ತು ನೀಡುತ್ತಿದ್ದೇನೆ. ಅವರೇನು ಮಾಡುತ್ತಾರೆ ಎಂಬ ಬಗ್ಗೆ ನಾನೇಕೆ ಗಮನ ನೀಡಲಿ. ಸರ್ಕಾರವನ್ನು ಉಳಿಸಿಕೊಳ್ಳುವುದು ನನ್ನ ಕರ್ತವ್ಯ. ಅದಕ್ಕೇನು ಮಾಡಬೇಕೋ ಅದನ್ನು ಮಾಡುತ್ತೇನೆ ಎನ್ನುವ ಮೂಲಕ ಬಿಜೆಪಿಯವರು ತಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಸಂದೇಶವನ್ನೂ ರವಾನಿಸಿದರು.

ಸಿಎಂಗೆ ಎಲ್ಲವೂ ಗೊತ್ತಿದೆ: ಡಿಕೆಶಿ
ಮುಖ್ಯಮಂತ್ರಿಗಳ ಗೃಹ ಕಚೇರಿ “ಕೃಷ್ಣಾ’ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್‌ ಇದೇ ಧಾಟಿಯಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದರು. ಮೈತ್ರಿ ಸರ್ಕಾರಕ್ಕೆ ಅಪಾಯವಾದರೆ ಅದಕ್ಕೆ ಸಚಿವ ಡಿ.ಕೆ.ಶಿವಕುಮಾರ್‌, ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್‌, ಸಚಿವ ರಮೇಶ್‌ ಜಾರಕಿಹೊಳಿ, ಶಾಸಕ ಸತೀಶ್‌ ಜಾರಕಿಹೊಳಿಯವರೇ ಕಾರಣ ಎಂಬುದಾಗಿ ಬಿಜೆಪಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್‌, ನನ್ನ ಹೆಸರನ್ನು ಉಪಯೋಗಿಸಿಕೊಂಡು ಯಾರು ಏನು ಬೇಕಾದರೂ ಮಾತನಾಡಲಿ. ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.

“ನಮಗೇನು ಗೊತ್ತಿಲ್ಲ ಎಂದು ಬಿಜೆಪಿಯವರು ತಿಳಿದುಕೊಂಡಿದ್ದಾರೆ. ಯಾರು, ಯಾರಿಗೆ ಏನೆಲ್ಲಾ ಆಮಿಷ ಒಡ್ಡಿದ್ದಾರೆ, ಯಾರ್ಯಾರ ಬಳಿ ಏನೇನು ಮಾತನಾಡಿದ್ದಾರೆ ಎಂಬುದು ಪಕ್ಷದ ಅಧ್ಯಕ್ಷರು, ಉಪಮುಖ್ಯಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳಿಗೆ ಗೊತ್ತಿದೆ ಎಂದರು.

ಸರ್ಕಾರ ಕೆಡವಲು ಕಿಂಗ್‌ಪಿನ್‌ಗಳು ಹಣ ಸಂಗ್ರಹಿಸುತ್ತಿದ್ದಾರೆ ಎಂಬುದಾಗಿ ಮುಖ್ಯಮಂತ್ರಿಗಳ ಆರೋಪ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮಗಿಂತ, ನಿಮಗಿಂತ (ಮಾಧ್ಯಮ) ಮುಖ್ಯಮಂತ್ರಿಗಳಿಗೆ ಹೆಚ್ಚು ಮಾಹಿತಿ ಇರುತ್ತದೆ. ಮುಖ್ಯಮಂತ್ರಿಗಳೇ ಹೇಳಿದ್ದಾರೆ ಎಂದ ಮೇಲೆ ಅವರೇನು ಮಾಹಿತಿ ಇಲ್ಲದೇ ಮಾತನಾಡಿರುತ್ತಾರೆಯೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿ ಹೊರಟರು.

ಕಿಂಗ್‌ ಪಿನ್‌ಗಳಾರು?
ಬೆಂಗಳೂರು
: ಸರ್ಕಾರ ಉರುಳಿಸಲು ಪ್ರಯತ್ನಿಸುತ್ತಿರುವ ಕಿಂಗ್‌ಪಿನ್‌ಗಳ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಾಲ್ವರ ಹೆಸರು ಕೇಳಿಬಂದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಸೋಮಶೇಖರ ಜಯರಾಜ್‌ ಅಲಿಯಾಸ್‌ ನಾರ್ವೆ ಸೋಮಶೇಖರ್‌, ಫೈಟರ್‌ ರವಿ, ಕ್ಲಬ್‌ ಉದಯ್‌ ಗೌಡ ಮತ್ತು ಚಿತ್ರ ನಿರ್ಮಾಪಕ ವಿಜಯ್‌ ಕಿರಗಂದೂರು ಅವರು ಈ ಕಿಂಗ್‌ಪಿನ್‌ಗಳು ಎಂಬ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ.

ಈ ಕುರಿತಂತೆ ಸ್ಪಷ್ಟನೆ ನೀಡಿರುವ ಸೋಮಶೇಖರ ಜಯರಾಜ್‌, ಸರ್ಕಾರ ಉರುಳಿಸುವ ಯಾವುದೇ ಪ್ರಯತ್ನದಲ್ಲಿ ನಾನು ಭಾಗಿಯಾಗಿಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿದ್ದವರು ನನ್ನ ಬಗ್ಗೆ ವೃಥಾ ಆರೋಪ ಮಾಡಿದ್ದು, ಇದನ್ನು ಸಾಬೀತುಪಡಿಸುವಂತೆ ಸವಾಲು ಹಾಕಿದ್ದಾರೆ. ಉಳಿದವರಾರು ಪ್ರತಿಕ್ರಿಯೆಗೆ ಸಿಕ್ಕಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next