ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸಮಾಲೋಚನೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಪದ್ಮನಾಭನಗರದ ಗೌಡರ ನಿವಾಸಕ್ಕೆ ಆಗಮಿಸಿದ ಕುಮಾರಸ್ವಾಮಿ ಹಾಗೂ ಇಬ್ರಾಹಿಂ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು. ವಿಧಾನಮಂಡಲದ ಬಜೆಟ್ ಅಧಿವೇಶನ, ಮುಂದಿನ ಹಂತದ ಪಂಚರತ್ನ ಯಾತ್ರೆ, ಎರಡನೇ ಪಟ್ಟಿ ಬಿಡುಗಡೆ ಮತ್ತಿತರ ವಿಚಾರಗಳು ಚರ್ಚೆಗೆ ಬಂದವು ಎಂದು ಹೇಳಲಾಗಿದೆ.
ಇದೇ ಸಂದರ್ಭದಲ್ಲಿ ಹಾಸನ ಟಿಕೆಟ್ ವಿಚಾರವೂ ಪ್ರಸ್ತಾಪವಾಯಿತು. ಹೊಳೇನರಸೀಪುರದಲ್ಲಿ ಭವಾನಿ ಸ್ಪರ್ಧೆ ಮಾಡಿ, ರೇವಣ್ಣ ಹಾಸನದಲ್ಲಿ ಸ್ಪರ್ಧೆ ಮಾಡಿದರೂ ಅಥವಾ ಕೆ.ಆರ್.ಪೇಟೆಯಲ್ಲಿ ಟಿಕೆಟ್ ಕೊಟ್ಟರೂ ಬೇರೆ ಸಂದೇಶ ಹೋಗಲಿದೆ ಎಂಬ ಆತಂಕ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.
ಭೇಟಿ ಕುರಿತು ಪ್ರತಿಕ್ರಿಯಿಸಿದ ಇಬ್ರಾಹಿಂ, ಶಿವರಾತ್ರಿ ಹಿನ್ನೆಲೆಯಲ್ಲಿ ಕುಮಾರಸ್ವಾಮಿಯವರು ದೇವೇಗೌಡರ ಆಶೀರ್ವಾದ ಪಡೆಯಲು ಬಂದಿದ್ದರು. ನಾನೂ ಜತೆಗೆ ಬಂದಿದ್ದೆ. ಬೇರೆ ಯಾವುದೇ ರಾಜಕೀಯ ವಿಚಾರ ಚರ್ಚೆಯಾಗಿಲ್ಲ ಎಂದು ಹೇಳಿದರು.