ಸೇಡಂ: ತಾಲೂಕಿನ ಮಳಖೇಡ ಗ್ರಾಮಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಏ.23ರಂದು ಆಗಮಿಸಲಿದ್ದಾರೆ ಎಂದು ಜೆಡಿಎಸ್ ರಾಜ್ಯ ಸಮಿತಿ ಸದಸ್ಯ ಆರ್.ಆರ್. ಪಾಟೀಲ ತಿಳಿಸಿದರು. ಜೆಡಿಎಸ್ ಕಾರ್ಯಾಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಾಂತ ಜನತಾ ಜಲಧಾರೆ ಹಮ್ಮಿಕೊಳ್ಳಲಾಗಿದ್ದು, ತಾಲೂಕಿನ ಮಳಖೇಡದ ಪ್ರಮುಖ ಕಾಗಿಣಾ ನದಿಯಲ್ಲಿ ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ ಎಂದರು.
ರಾಜ್ಯದ ಪ್ರಮುಖ ನದಿಗಳ ಪೈಕಿ ಕಾಗಿಣಾ ಕೂಡಾ ಒಂದಾಗಿದೆ. ಪ್ರತಿ ಗ್ರಾಮಕ್ಕೆ, ರೈತರ ಹೊಲಗಳಿಗೆ ಉಪಯೋಗವಾಗಬೇಕು ಎಂಬ ಉದ್ದೇಶ ಹೊಂದಲಾಗಿದ್ದು, ಕೆರೆ ಕಟ್ಟೆಗಳನ್ನು ನಿರ್ಮಿಸುವ ಮೂಲಕ ರೈತನ ಬದುಕು ಹಸನಾಗಿಸುವ ಬಹುದೊಡ್ಡ ಯೋಜನೆ ಜನತಾ ಜಲಧಾರೆಯಾಗಿದೆ. ಇದನ್ನು ಈಗಾಗಲೇ ರಾಜ್ಯಾದ್ಯಂತ ಅನೇಕ ಕಡೆಗಳಲ್ಲಿ ಮಾಡಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕನಸಿನಂತೆ ಜನತಾ ಜಲಧಾರೆ ವಾಹನ ಸಂಚರಿಸುತ್ತಿದೆ ಎಂದು ಹೇಳಿದರು.
ಮಳಖೇಡದ ಗುರು ಗಂಗಾಧರೇಶ್ವರ ಕಲ್ಯಾಣ ಮಂಟಪದ ಆವರಣದಲ್ಲಿ ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ ನೇತೃತ್ವದಲ್ಲಿ ನಡೆಯುವ ಬೃಹತ್ ಸಮಾವೇಶವನ್ನು ಕುಮಾರಸ್ವಾಮಿ ಉದ್ಘಾಟಿಸುವರು. ಈ ವೇಳೆ ಜೆಡಿಎಸ್ ರಾಜ್ಯ ಅಧ್ಯಕ್ಷರಾದ ಸಿ.ಎಂ. ಇಬ್ರಾಹಿಂ, ಪಕ್ಷದ ಅನೇಕ ಶಾಸಕರು, ಮುಖಂಡರು ಭಾಗಿಯಾಗಲಿದ್ದಾರೆ. ತಾಲೂಕು ಸೇರಿದಂತೆ ವಿವಿದೆಢೆಯಿಂದ ಸುಮಾರು 6ರಿಂದ 8 ಸಾವಿರ ಜನ ಭಾಗಿಯಾಗಲಿದ್ದಾರೆ ಎಂದು ಹೇಳಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಎಕ್ಬಾಲಖಾನ್ ಮಾತನಾಡಿ, ಐತಿಹಾಸಿಕ ಸಮಾವೇಶ ಮಳಖೇಡದಲ್ಲಿ ಜರುಗಲಿದೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಮಾಜಿ ಅಧ್ಯಕ್ಷ ಜಗನ್ನಾಥರೆಡ್ಡಿ ಗೋಟೂರ, ಮಹಿಳಾ ಘಟಕ ಅಧ್ಯಕ್ಷೆ ಪುಷ್ಪಾವತಿ ಗೊಬ್ಬೂರ, ಹಣಮಯ್ಯ ಗುತ್ತೇದಾರ, ನೀಲಮ್ಮ ಡೊಣ್ಣುರ, ಮಹಾದೇವಿ ಹಲಕರ್ಟಿ ಇತರರು ಇದ್ದರು.