Advertisement

ಕುಮಾರಸ್ವಾಮಿಯೇ ಸಿಎಂ; ಜನರ ಬಯಕೆ

10:57 AM Jan 12, 2018 | Team Udayavani |

ಬೀದರ: ಬಿಜೆಪಿ ಮತ್ತು ಕಾಂಗ್ರೆಸ್‌ ಸರ್ಕಾರದ ದುರಾಡಳಿತದಿಂದ ಬೇಸತ್ತಿರುವ ರಾಜ್ಯದ ಜನತೆ ಎಲ್ಲ ವರ್ಗಗಳ ಹಿತ ಬಯಸುವಂಥ, ಅಭಿವೃದ್ಧಿ ಕಾಳಿಜಿಯುಳ್ಳ ಕುಮಾರಸ್ವಾಮಿ ಅವರು ಮತ್ತೂಮ್ಮೆ ಮುಖ್ಯಮಂತ್ರಿ ಆಗಬೇಕೆಂಬ ಬಯಕೆ ಹೊಂದಿದ್ದಾರೆ. ಹಾಗಾಗಿ ಜೆಡಿಎಸ್‌ ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸಬೇಕಿದೆ ಎಂದು ಶಾಸಕ, ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಕರೆ ನೀಡಿದರು.

Advertisement

ನಗರದ ಎಂಎಸ್‌ ಪಾಟೀಲ ಕಲ್ಯಾಣ ಮಂಟಪದಲ್ಲಿ ಗುರುವಾರ ಜಿಲ್ಲಾ ಜೆಡಿಎಸ್‌ ಯುವ ಘಟಕ ಆಯೋಜಿಸಿದ್ದ ಕರ್ನಾಟಕಕ್ಕೆ ಕುಮಾರಣ್ಣ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನೆಲ, ಜಲ, ಭಾಷೆ ರಕ್ಷಣೆಗೆ ಪ್ರಾದೇಶಿಕ ಪಕ್ಷದ ಅಗತ್ಯವಿದೆ. ನೆರೆಯ ರಾಜ್ಯಗಳಲ್ಲಿ ಪ್ರಾದೇಶಿ ಪಕ್ಷಗಳು ಅಧಿ ಕಾರದಲ್ಲಿ ಇರುವುದರಿಂದಲೇ ಹೆಚ್ಚು ಅಭಿವೃದ್ಧಿ ಹೊಂದುತ್ತಿವೆ. ಬಂಗಾರಪ್ಪನವರ ಜನಪರ ಯೊಜನೆಗಳನ್ನು ಜಾರಿಗೆ ತರುವಂತಹ ಸಾಮರ್ಥ್ಯ ಜೆಡಿಎಸ್‌ಗೆ ಮಾತ್ರ ಇದೆ ಎಂದು ಹೇಳಿದರು.

ಕೋಮು ಗಲಭೆಯಲ್ಲಿ ಮುಸ್ಲಿಂ ಮೃತಪಟ್ಟರೆ ಕಾಂಗ್ರೆಸ್ಸಿನವರು, ಹಿಂದು ಕಾರ್ಯಕರ್ತರ ಸಾವನ್ನಪ್ಪಿದ್ದರೆ ಬಿಜೆಪಿಯವರು ಹೋಗಿ ಕಣ್ಣಿರು ಹಾಕುತ್ತಾರೆ. ಆದರೆ, ಎಲ್ಲೋ ಕೊಳಚೆ ಪ್ರದೇಶದ ದೇವದಾಸಿ ಸಮುದಾಯದ ರೇಣುಕಾ ಮೃತಪಟ್ಟರೆ ಅವರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳುವಂತ ಹೃದಯವಂತಿಕೆಯನ್ನು ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೊಂದಿದ್ದಾರೆ. ರಾಜ್ಯದ ಮೂರು ಪಕ್ಷಗಳಲ್ಲಿ ಯಾರು ಉತ್ತಮರು ಎಂಬುದನ್ನು ಜನ ನಿರ್ಧರಿಸಬೇಕು ಎಂದರು.

ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ಮಾತನಾಡಿ, ರಾಜ್ಯ ಸರ್ಕಾರ ಘೋಷಿಸಿರುವ 50 ಸಾವಿರ ರೂ. ಸಾಲ ಮನ್ನಾ ಲಾಬ ಯಾರೊಬ್ಬ ರೈತರಿಗೂ ಸಿಕ್ಕಿಲ್ಲ. ಸರ್ಕಾರ ಮನ್ನಾ ಭಾಗ್ಯ ಘೋಷಿಸಿ ರಾಜ್ಯದ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತ, ಒಂದು ಯೋಜನೆಗಳನ್ನೂ ಪೂರ್ಣಗೊಳಿಸದ ಕಾಂಗ್ರೆಸ್‌ ಉದ್ರಿ ಸರ್ಕಾರ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಕುರ್ಚಿಗೆ ಅಂಟಿಕೊಂಡು ಕೆಲಸ ಮಾಡುವ ಸಿಎಂ ಬೇಕಾಗಿಲ್ಲ. ನಿಂತು ಕೆಲಸ ಮಾಡುವ ಮುಖ್ಯಮಂತ್ರಿಗಳ ಅವಶ್ಯಕತೆ ಇದೆ. ಜೆಡಿಎಸ್‌ಗೆ ಆಶೀರ್ವದಿಸಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಗಳಾಗಿಸಿ ಉತ್ತಮ ಆಡಳಿತ ಪಡೆಯುವ ನಿರೀಕ್ಷೆಯಲಿದ್ದಾರೆ ಎಂದರು.

Advertisement

ವಿಧಾನ ಪರಿಷತ್‌ ಸದಸ್ಯ ಕಾಂತರಾಜ, ಜೆಡಿಎಸ್‌ ಜಿಲ್ಲಾಧ್ಯಕ್ಷ ರಮೇಶ ಪಾಟೀಲ ಸೋಲಪೂರ, ಮಾಜಿ ಅಧ್ಯಕ್ಷ ನಸಿಮುದ್ದೀನ್‌ ಪಟೇಲ್‌ ಮತ್ತು ಸಿದ್ರಾಮಪ್ಪ ಒಂಕೆ ಮಾತನಾಡಿದರು. ಸಮಾವೇಶದಲ್ಲಿ ಬೆಂಗಳೂರ ನಗರ ಅಧ್ಯಕ್ಷ ರಮೇಶ ಗೌಡ, ಮಹಾಪ್ರದಾನ ಕಾರ್ಯದರ್ಶಿ ಹರೀಶ, ನರಸಿಂಹಮೂರ್ತಿ, ದಾನಪ್ಪ, ಸುದರ್ಶನ, ರಾಜಶೇಖರ ಜವಳಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. ಯುವ ಘಟಕದ ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ ಸ್ವಾಗತಿಸಿದರು. ಚೆನ್ನಬಸವ ಹಂಗರಗಿ ವಂದಿಸಿದರು.

ಸಮಾವೇಶಕ್ಕೂ ಮುನ್ನ ನಗರದ ಬಸವೇಶ್ವರ ವೃತ್ತದಿಂದ ಎಂಎಸ್‌ ಪಾಟೀಲ ಕಲ್ಯಾಣ ಮಂಟಪದ ವರೆಗೆ ಮಧು ಬಂಗಾರಪ್ಪ ಅವರನ್ನು ಬೈಕ್‌ ರ್ಯಾಲಿ ಮೂಲಕ ಕರೆ ತರಲಾಯಿತು. 

ಕುಮಾರಸ್ವಾಮಿ ಅಧಿಕಾರದ ಅವಧಿಯಲ್ಲಿನ ಕೆಲಸವನ್ನು ಜನರು ಇಂದಿಗೂ ಸ್ಮರಿಸುತ್ತಾರೆ. ಅವರು ವಿಧಾನ
ಸೌಧದಲ್ಲಿ ಕುಳಿತು ಯೊಜನೆಗಳನ್ನು ರೂಪಿಸಲಿಲ್ಲ, ಬದಲಾಗಿ ಜನರ ಸಮಸ್ಯೆಗಳನ್ನು ಅರಿತುಕೊಳ್ಳಲು ಗ್ರಾಮ ವಾಸ್ತವ್ಯ ಮಾಡಿದರು. ಅಂದು ರೈತರ ಸಮಸ್ಯೆಗಳನ್ನು ಮನಗಂಡು ಕೂಡಲೇ 25 ಸಾವಿರ ರೂ. ಗಳ ಸಾಲ ಮನ್ನಾ ಮಾಡಿದರು. ಸಾಲದ ಹಣವನ್ನು ನಿಗದಿತ ಸಮಯದೊಳಗೆ ಸಹಕಾರಿ ಬ್ಯಾಂಕ್‌ಗಳಿಗೆ ಭರಿಸುವ ವ್ಯವಸ್ಥೆ ಮಾಡಿದ್ದರು ಎಂದು ಹೇಳಿದರು. 
 ಮಧು ಬಂಗಾರಪ್ಪ, ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next