ಬೆಂಗಳೂರು : ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಇಂದಿನ ತಮ್ಮ ದಿಲ್ಲಿ ಭೇಟಿಯನ್ನು ರದ್ದು ಗೊಳಿಸಿದ್ದಾರೆ.
ಅಂತೆಯೇ ದಿಲ್ಲಿಯಲ್ಲಿಂದು ಇವಿಎಂ ವಿಚಾರದಲ್ಲಿ ಎಲ್ಲ ವಿರೋಧ ಪಕ್ಷಗಳು ನಡೆಸಲಿರುವ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಪಾಲ್ಗೊಳ್ಳುವುದಿಲ್ಲ. “ಮುಖ್ಯಮಂತ್ರಿಗಳ ಇಂದಿನ ದಿಲ್ಲಿ ಭೇಟಿ ರದ್ದಾಗಿದೆ’ ಎಂದು ಯಾವುದೇ ಕಾರಣ ನೀಡದೇ ಮುಖ್ಯಮಂತ್ರಿ ಕಾರ್ಯಾಲಯ ತಿಳಿಸಿದೆ.
ಈ ಮೊದಲಿನ ನಿಗದಿತ ಕಾರ್ಯಕ್ರಮದ ಪ್ರಕಾರ ಕುಮಾರಸ್ವಾಮಿ ಅವರು ಇಂದು ಮಂಗಳವಾರ ಬೆಳಗ್ಗೆ 11 ಗಂಟೆಗೆ ವಿಶೇಷ ವಿಮಾನದಲ್ಲಿ ದಿಲ್ಲಿಗೆ ಹೋಗುವವರಿದ್ದರು. ಹಾಗೆಯೇ ಸಂಜೆ ವೇಳೆಗೆ ನಗರಕ್ಕೆ ಮರಳುವವರಿದ್ದರು.
ಮೇ 23ರಂದು ಮತ ಎಣಿಕೆ ನಡೆಯುವ ಮುನ್ನ ವಿರೋಧ ಪಕ್ಷಗಳ ನಾಯಕರು ಚುನಾವಣಾ ಆಯೋಗವನ್ನು ಭೇಟಿಯಾಗಿ ಎಲ್ಲ ಇವಿಎಂ ಗಳನ್ನು ವಿವಿಪ್ಯಾಟ್ ಜತೆಗೆ ತಾಳೆ ಹಾಕಿ ನೋಡಬೇಕೆಂದು ಒತ್ತಾಯಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಸಿಎಂ ಕುಮಾರಸ್ವಾಮಿ ಅವರು ಕೂಡ ಇವಿಎಂ ಗಳ ಬಗ್ಗೆ ಈಗಾಗಲೇ ಅನುಮಾನ ವ್ಯಕ್ತಪಡಿಸಿದ್ದಾರೆ. ತಮ್ಮ ಸರಣಿ ಟ್ವೀಟ್‌ಗಳ ಮೂಲಕ ಮತಗಟ್ಟೆ ಸಮೀಕ್ಷೆ ಯನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ‘ಮೋದಿ ಅಲೆಯನ್ನು ಕೃತಕವಾಗಿ ಸೃಷ್ಟಿಸುವ ಮೂಲಕ ಮೇ 23ರ ಬಳಿಕದಲ್ಲಿ ಕಂಡುಬರುವ ಯಾವುದೇ ಕೊರತೆಯನ್ನುಈಗಲೇ ತುಂಬುವ ಬಿಜೆಪಿಯ ಹುನ್ನಾರ ಇದರಲ್ಲಿ ಅಡಗಿದೆ’ ಎಂದವರು ಟೀಕಿಸಿದ್ದಾರೆ.
ಮತಗಟ್ಟೆ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ 28ರಲ್ಲಿ 21 ಸ್ಥಾನ ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಗೊತ್ತಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕದಲ್ಲಿ 17 ಸ್ಥಾನಗಳನ್ನು ಗೆದ್ದಿತ್ತು.