Advertisement

ತರಳಬಾಳು ಮಠದ ಸೇವಾ ಕಾರ್ಯಕ್ಕೆ ಕುಮಾರಸ್ವಾಮಿ ಮೆಚ್ಚುಗೆ

06:29 PM Oct 04, 2022 | Team Udayavani |

ಸಿರಿಗೆರೆ: ತರಳಬಾಳು ಜಗದ್ಗುರು ಬೃಹನ್ಮಠವು ಹಲವು ಸಾಮಾಜಿಕ ಸೇವಾ ಕಾರ್ಯಗಳು° ಹಿರಿಯ ಗುರುಗಳ ಕಾಲದಿಂದಲೂ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

Advertisement

ಬೆಂಗಳೂರಿನ ತರಳಬಾಳು ಕೇಂದ್ರದಲ್ಲಿ ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬಳಿಕ ಅವರು ಮಾತನಾಡಿದರು. ನನ್ನ ತಂದೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಕಾಲದಲ್ಲಿನ ರಾಜಕೀಯ ಕಾಲಘಟ್ಟದ ಘಟನೆಗಳನ್ನು ಹಲವು ಸಂದರ್ಭಗಳಲ್ಲಿ ಅಭಿಮಾನದಿಂದ ನೆನಪು ಮಾಡಿಕೊಳ್ಳುತ್ತಾರೆ. ಮಠವು ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನದೇ ವಿಶಿಷ್ಟ ಸೇವೆ ಸಲ್ಲಿಸಿದೆ ಎಂದರು.

ಶ್ರೀಗಳ ಮಾರ್ಗದರ್ಶನದಲ್ಲಿ ಜಾರಿಗೊಂಡಿರುವ ಹಲವು ಏತ ನೀರಾವರಿ ಯೋಜನೆಗಳಿಂದ ಮಧ್ಯ ಕರ್ನಾಟಕದ ನೂರಾರು ಕೆರೆಗಳು ಭರ್ತಿಯಾಗಿವೆ. ಇದರಿಂದ ಆ ಭಾಗದ ರೈತರ ಬಾಳಿಗೆ ಬೆಳಕಾಗಿದೆ. ಈ ಕಾರ್ಯವವನ್ನು ರೈತ ಸಮುದಾಯ ಯಾವತ್ತೂ ನೆನಪಿಸಿಕೊಳ್ಳುತ್ತದೆ. ಶ್ರೀಗಳು ಹಲವು ಭಾಷೆಗಳಲ್ಲಿ ಹೊರತಂದಿರುವ ಬಸವಾದಿ ಶರಣರ ವಚನಗಳ ಮೊಬೈಲ್‌ ಆ್ಯಪ್‌ ಕುರಿತು ತಮ್ಮೊಂದಿಗೆ ಮಾತನಾಡಿದರು. ಅದೊಂದು ಅಪೂರ್ವ ಕ್ಷಣವಾಗಿತ್ತು. 12ನೇ ಶತಮಾನದ ಶರಣರ ಸಾಹಿತ್ಯವನ್ನು ಜಗತ್ತಿಗೆ ಸಾರುವಲ್ಲಿ ಶ್ರೀಗಳು ಬಹು ದೊಡ್ಡ ಕೆಲಸ ಮಾಡಿದ್ದಾರೆ ಎಂದು ಬಣ್ಣಿಸಿದರು.

ಪ್ರಧಾನ ಮಂತ್ರಿ ಫಸಲ್‌ ಭೀಮಾ ಯೋಜನೆಯ ದೋಷಗಳನ್ನು ಸರಿಪಡಿಸಲು ಶ್ರಮಿಸಿದ್ದಾರೆ. ಭೂಮಿ ಆನ್‌ಲೈನ್‌ ತಂತ್ರಾಂಶ ರಚಿಸಿ ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರ ಖಾತೆಗಳಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಪಾವತಿ ಮಾಡುವ ಯೋಜನೆ ದೇಶಕ್ಕೆ ಮಾದರಿಯಾಗಿರುವುದರ ಬಗ್ಗೆ ಮಾಜಿ ಪ್ರಧಾನಿಯವರ ಮೆಚ್ಚುಗೆಯನ್ನು ಕುಮಾರಸ್ವಾಮಿಯವರು ಶ್ರೀಗಳ ಗಮನಕ್ಕೆ ತಂದರು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಲಿಂಗೈಕ್ಯ ಗುರುವರ್ಯರ ಕಾಲದಿಂದಲೂ ನಮ್ಮ ಮಠದಭಕ್ತರಾಗಿದ್ದಾರೆ. ಹಲವು ತರಳಬಾಳು ಹುಣ್ಣಿಮೆ ಮಹೋತ್ಸವಗಳನ್ನು ಗೌಡರಿಂದ ಉದ್ಘಾಟಿಸಿರುವುದು ನಮಗೆ ಸಂತೋಷ ತಂದಿದೆ ಎಂದು ತರಳಬಾಳು ಶ್ರೀಗಳು ಹೇಳಿದರು.

ದೇವೇಗೌಡರ ಆರೋಗ್ಯದ ಬಗ್ಗೆ ವಿಚಾರಿಸಿದ ಪೂಜ್ಯರಿಗೆ, ಇತ್ತೀಚೆಗೆ ವಯೋಸಹಜ ಅನಾರೋಗ್ಯ ದಿಂದ ಬಳಲುತ್ತಿದ್ದು ಈಗ ಸಂಪೂರ್ಣವಾಗಿ ಗುಣಮುಖರಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅನಾರೋಗ್ಯ ಮತ್ತು ಸೋಂಕಿನ ಕಾರಣದಿಂದ ಭಾಗಿಯಾಗದಂತೆ ಮನವಿ ಮಾಡಿರುವ ಬಗ್ಗೆ ಕುಮಾರಸ್ವಾಮಿ ತಿಳಿಸಿದರು. ಮಾಜಿ ಪ್ರಧಾನಿ ಎಚ್‌.ಡಿ. ದೇವೆಗೌಡರು ನಿರಂತರವಾಗಿ ಜಗದ್ಗುರುಗಳವರ “ಬಿಸಿಲು ಬೆಳದಿಂಗಳು’ ಅಂಕಣವನ್ನು ಓದುತ್ತಿರುವ ಬಗ್ಗೆ ತಿಳಿಸಿ ಸಂತಸ ಹಂಚಿಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next