ಬೆಂಗಳೂರು: ಮಳೆ ಹಾಗೂ ಪ್ರವಾಹದಿಂದ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ, ಜಿಲ್ಲಾ ಪ್ರಮುಖ ರಸ್ತೆಗಳು ಸೇರಿ 2,910 ಕಿ.ಮೀ. ಹಾಳಾಗಿರುವುದರಿಂದ 2,078.88 ಕೋಟಿ ರೂ. ನಷ್ಟವಾಗಿದ್ದು, ಕೇಂದ್ರ ಸರ್ಕಾರ ನೆರವಿಗೆ ಬರಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜತೆ ಶುಕ್ರವಾರ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ ಅವರು, ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಮಲೆನಾಡು ಭಾಗದ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಹೀಗಾಗಿ ಕೇಂದ್ರ ಸರ್ಕಾರ ನೆರವಾಗಬೇಕು ಎಂದು ಮನವಿ ಮಾಡಿಕೊಂಡರು.
ಮಳೆಯಿಂದ ರಸ್ತೆಯಷ್ಟೇ ಅಲ್ಲದೆ 419 ಸೇತುವೆ, 72 ಸಾರ್ವಜನಿಕ ಕಟ್ಟಡಗಳಿಗೂ ಹಾನಿಯಾಗಿದೆ. 512.45 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಹಾನಿಯಾಗಿದ್ದು, ದುರಸ್ಥಿಗೆ 781 ಕೋಟಿ ರೂ. ಅಗತ್ಯವಿದೆ. ರಾಜ್ಯ ಸರ್ಕಾರವು ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಪ್ರಮುಖ ರಸ್ತೆಗಳ ದುರಸ್ಥಿ, ಸೇತುವೆ, ಕಟ್ಟಡಗಳ ಪುನರ್ ನಿರ್ಮಾಣಕ್ಕೆ 1,329.88 ಕೋಟಿ ರೂ. ವೆಚ್ಚ ಮಾಡಬೇಕಾಗಿದೆ. ಹೀಗಾಗಿ, ರಾಜ್ಯ ಸರ್ಕಾರದಿಂದ ಹೆಚ್ಚು ಭರಿಸಲು ಸಾಧ್ಯವಾಗದು. ಕೇಂದ್ರ ಸರ್ಕಾರದಿಂದ ತಕ್ಷಣಕ್ಕೆ ರಾಷ್ಟ್ರೀಯ ಹೆದ್ದಾರಿಗಳ ದುರಸ್ಥಿಗೆ 250 ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.
ನಂತರ ಸುದ್ದಿಗಾರರ ಜತೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಅತಿವೃಷ್ಟಿ-ಆನಾವೃಷ್ಟಿ ಎರಡೂ ರೀತಿಯ ಸಮಸ್ಯೆ ಎದುರಿಸುತ್ತಿದ್ದೇವೆ. ಕೇಂದ್ರ ನೆರವಿಗೆ ಬರಬೇಕು ಎಂದು ಕೋರಲಾಗಿದೆ. ರಾಜ್ಯದಲ್ಲಿ ಪ್ರಕೃತಿ ವಿಕೋಪದಲ್ಲಿ ಆಗಿರುವ ಮೂಲ ಸೌಕರ್ಯ ಕಾಫಿ ಬೆಳೆಗಾರರು ಸಂಕಷ್ಟ ಬೆಳೆ ನಾಶ, ರಸ್ತೆ ನಷ್ಟಕ್ಕೆ ಹೆಚ್ಚಿನ ನೆರವು ಕೊಡಬೇಕು ಎಂದು ಮನವಿ ಸಲ್ಲಿಸಿದ್ದೇವೆ. ಅದಕ್ಕೆ ಅವರು ಸ್ಪಂದಿಸಿದ್ದಾರೆ ಎಂದು ಹೇಳಿದರು.
ಮೊನ್ನೆ ಪ್ರಧಾನಿ ಸಮಯ ಕೇಳಿದ್ದೆವು. ಪ್ರಧಾನಿ ಬಿಡುವಿಲ್ಲದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗೃಹ ಸಚಿವರಿಗೆ ಭೇಟಿ ಮಾಡಿ, ರಾಜ್ಯದ ಮಾಹಿತಿ ಕೊಡಲು ಹೇಳಿದ್ದರು. ಆ ಕಾರಣ ಭೇಟಿ ಮಾಡಿ ಮಾಹಿತಿ ನೀಡಿದ್ದೇವೆ. ಈಹಿಂದೆಯೂ ಹಲವು ಬಾರಿ ಭೇಟಿ ಮಾಡಿ ರಾಜ್ಯಕ್ಕೆ ನೆರವು ಕೊಡಲು ಮನವಿ ಮಾಡಿದ್ದೆವು ಎಂದು ತಿಳಿಸಿದರು.