Advertisement

ಸಿಎಂ ಕಚೇರಿಯಲ್ಲೇ 30 ಲ. ರೂ.ಗೆ ಬೇಡಿಕೆ

11:00 PM Jul 03, 2023 | Team Udayavani |

ಬೆಂಗಳೂರು: ವರ್ಗಾವಣೆ ದಂಧೆ ವಿಚಾರದಲ್ಲಿ ಸರಕಾರದ ವಿರುದ್ಧ ಆರೋಪ ಸರಣಿ ಮುಂದುವರಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಕಾಂಗ್ರೆಸ್‌ ಸರಕಾರ ಬಂದ ಮೇಲೆ ರಾಜ್ಯದಲ್ಲಿ “ವೈಎಸ್‌ಟಿ ತೆರಿಗೆ’ ಜಾರಿಗೆ ಬಂದಿದೆ ಎಂದು ಹೇಳಿದ್ದ ಅವರು, ಈಗ ವರ್ಗಾವಣೆಗೆ ಮುಖ್ಯಮಂತ್ರಿಯವರ ಕಚೇರಿ ಯಲ್ಲೇ 30 ಲಕ್ಷ ರೂ.ಗೆ ಬೇಡಿಕೆ ಇಡಲಾಗುತ್ತಿದೆ ಎಂದು ಗಂಭೀರ ಆಪಾದನೆ ಮಾಡಿದ್ದಾರೆ.

Advertisement

ಅಲ್ಲದೆ ವರ್ಗಾವಣೆ ದಂಧೆ ನಿರ್ವಹಣೆಗೆ ಸಿಂಡಿಕೇಟ್‌ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿದೆ. ವರ್ಗಾವಣೆ ದಂಧೆ ಮತ್ತು ಭ್ರಷ್ಟಾಚಾರ ಇಲಾಖಾವಾರು ದೊಡ್ಡ ಪ್ರಮಾಣದಲ್ಲಿ ವಿಸ್ತರಣೆ ಆಗುತ್ತಿದೆ. ಸಾರಿಗೆ, ಕಂದಾಯ ಇಲಾಖೆಗಳ ಬಳಿಕ ಈಗ ವಾಣಿಜ್ಯ ತೆರಿಗೆ ಇಲಾಖೆಗೆ ವರ್ಗಾವಣೆ ದಂಧೆ ವಿಸ್ತರಣೆಯಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.

“ಕಾಸಿಲ್ಲದೆ ಪೋಸ್ಟ್‌ ಇಲ್ಲ’ ಎನ್ನುವುದನ್ನು ಈ ಸರಕಾರ ನೀತಿಯನ್ನಾಗಿ ಮಾಡಿಕೊಂಡಿದೆ. ಸದಾ ಮುಖ್ಯಮಂತ್ರಿ ಹಿಂದೆ ಮುಂದೆ ಹಾಗೂ ಸಿಎಂ ಕಚೇರಿ ಸುತ್ತಮುತ್ತ ಓಡಾಡಿಕೊಂಡಿರುವ ಶಾಸಕರೊಬ್ಬರು ಮುಖ್ಯಮಂತ್ರಿಗೆ ಪತ್ರ ಕೊಟ್ಟರೆ, “ಬರೀ ಪತ್ರ ಬೇಡ. 30 ಲಕ್ಷ ರೂ.ಕೊಡಬೇಕು’ ಎಂದು ಹೇಳುತ್ತಾರಂತೆ ಸಿಎಂ ಕಚೇರಿ ಯಲ್ಲಿರುವ ಮಹಾಶಯರು. ಇದು ಈ ಸರಕಾರದ ಹಣೆಬರಹ ಎಂದು ಕುಮಾರಸ್ವಾಮಿ ಹೇಳಿದರು.

ಸಾಕ್ಷಿ ನೀಡಿ ಅಂತಾರೆ. ದುಡ್ಡು ಕೊಟ್ಟವನು ಸಾಕ್ಷಿ ಕೊಡುತ್ತಾನಾ? ಅವನಿಗೆ ಕೆಲಸ ಆದರೆ ಸಾಕು. ಇವರು ಪರಿಸ್ಥಿತಿಯ ದುರ್ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದ ಕುಮಾರಸ್ವಾಮಿ, ನಾನು ಏನೇ ಮಾತಾಡಿದರೂ ಅದರಲ್ಲಿ ವಿಷಯ ಇರುತ್ತದೆ. ಇಲ್ಲವಾದರೆ ಮೌನವಾಗಿ ಇರುತ್ತೇನೆ. ರಾಜ್ಯಪಾಲರ ಭಾಷಣ ದಲ್ಲಿ ವೀರಾವೇಶ ತೋರುವ ಇವರು, ಅಧಿಕಾರಕ್ಕೆ ಒಂದು ತಿಂಗಳ ಮೇಲಾ ಯಿತು. ಇದುವರೆಗೆ ಲಂಚಾವತಾರದ ಈ ಸರಕಾರ ಏನು ಕ್ರಮ ಕೈಗೊಂಡಿದೆ. ಜನರಿಗೆ ಹೇಳಬೇಕಲ್ಲವೇ?.

ರಾಜ್ಯಪಾಲರ ಭಾಷಣದಲ್ಲಿ ಭ್ರಷ್ಟಾಚಾರವನ್ನು ಮೂಲೋತ್ಪಾಟನೆ ಮಾಡುವುದಾಗಿ ಹೇಳಿಸಿದ ಈ ಸರಕಾರದಲ್ಲಿ ಕಾಸಿಗಾಗಿ ಪೋಸ್ಟಿಂಗ್‌ ಅವ್ಯಾಹತವಾಗಿ ನಡೆಯುತ್ತಿದೆ. ಪ್ರತಿ ಹು¨ªೆಗೂ ದರ ನಿಗದಿ ಮಾಡಲಾಗಿದೆ. ಇವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸಿಂಡಿಕೇಟ್‌ ಸಿದ್ಧ ಮಾಡಿಕೊಟ್ಟಿರುವ ಪಟ್ಟಿಯ ಕಡತ ಇಲಾಖೆಯ ಆಯುಕ್ತರ ಮುಂದೆ ಸಹಿಗಾಗಿ ಕಾಯುತ್ತಾ ಬಿದ್ದಿದೆ ಎಂದು ಕುಮಾರಸ್ವಾಮಿ ಹೇಳಿದರು.

Advertisement

ಬೆಂಕಿ ಇಲ್ಲದೆ ಹೊಗೆಯಾಡದು: ಬಸವರಾಜ ಬೊಮ್ಮಾಯಿ
ಸಿಎಂ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಮಾಡಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಅದು ಯಾವುದೋ ಸಣ್ಣ ಹುದ್ದೆ ಇರಬೇಕು ಅದಕ್ಕೆ 30 ಲಕ್ಷ ರೂ. ಕೇಳಿದ್ದಾ ರೆ. ಅಲ್ಲಿ ಕೋಟ್ಯಂತರ ರೂಪಾಯಿ ಕೇಳುತ್ತಿದ್ದಾ ರೆ. ವರ್ಗಾವಣೆ ರದ್ದು ಆಗುವುದು, ಮತ್ತೆ ಅಧಿಕಾರಿ ಬಂದು ವರ್ಗಾವಣೆ ಮಾಡಿಸುವುದು. ಐಎಎಸ್‌, ಐಪಿಎಸ್‌ ಅಧಿಕಾರಿಗಳ ಮಾತೇ ಸಾಕ್ಷಿ, ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ. ಸಿಎಂ ಸಿದ್ದರಾಮಯ್ಯ ಪ್ರಾಮಾಣಿಕತೆ ಬಗ್ಗೆ ಮಾತನಾಡುತ್ತಾರೆ. ಸಿಎಂ ಕಚೇರಿ ನಡೆದುಕೊಳ್ಳುವ ರೀತಿ ನೋಡಿದರೆ ಭಯ ಆಗುತ್ತಿದೆ ಎಂದರು.

ಈ ಸರಕಾರದಲ್ಲೂ “ಪೇಸಿಎಂ’: ಬಸನಗೌಡ ಪಾಟೀಲ್‌ ಯತ್ನಾಳ್‌
ಬೆಂಗಳೂರು: ರಾಜ್ಯ ಸರಕಾರದ ವಿರುದ್ಧ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಬಿಜೆಪಿ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕೂಡ ದನಿ ಸೇರಿಸಿದ್ದು, ಈ ಸರಕಾರದಲ್ಲಿ ಪೇಸಿಎಂ, ಪೇ ಸೋನಿಯಾ, ಪೇ ವೇಣುಗೋಪಾಲ್‌ ಎಲ್ಲ ಇದೆ ಎಂದು ವ್ಯಂಗ್ಯವಾಡಿದ್ದಾರೆ. ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಹತ್ತು ಜನ ಸಿಎಂ ಯಾರು ಎಂಬುದು ನನಗೆ ಗೊತ್ತಿಲ್ಲ. ಕುಮಾರಸ್ವಾಮಿ ಅವರದ್ದೇ ಆದ ಮೂಲದಿಂದ ಮಾಹಿತಿ ಸಂಗ್ರಹಿಸಿರುತ್ತಾರೆ. ಕ್ಯಾಬಿನೆಟ್‌ ಅಜೆಂಡಾ ಎಲ್ಲರಿಗಿಂತ ಮೊದಲು ಅವರಿಗೆ ಸಿಗುತ್ತದೆ ಎಂದು ಹೇಳಿದರು. ಯಾರೇ ವಿಪಕ್ಷ ನಾಯಕನಾದರೂ ನಾನು ಸ್ವಾಗತಿಸುತ್ತೇನೆ. ಹೈಕಮಾಂಡ್‌ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ. ನಾನು ರೇಸ್‌ನಲ್ಲಿ ಇದ್ದೇನೆ ಎಂದು ನೀವೇ ತೋರಿಸಿ ನಮ್ಮ ಮಧ್ಯೆ ಬೆಂಕಿ ಹಚ್ಚಬೇಡಿ ಎಂದರು.

ನಾವು ಬಿಜೆಪಿ ವಿರುದ್ಧ ಮಾಡಿದ್ದ ಆರೋಪಗಳಿಗೆ ಸಾಕ್ಷಿ ಒದಗಿಸಿದ್ದೇವೆ. ಕೆಲ ಪ್ರಕರಣಗಳನ್ನು ತನಿಖೆಗೂ ಒಳಪಡಿ ಸುತ್ತಿದ್ದೇವೆ. ಕುಮಾರಸ್ವಾಮಿ ನಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ಸಾಕ್ಷ್ಯ ಒದಗಿಸಲಿ. ಸುಮ್ಮನೆ ಹಿಟ್‌ ಆ್ಯಂಡ್‌ ರನ್‌ ಮಾಡುವುದು ಬೇಡ
– ಪ್ರಿಯಾಂಕ್‌ ಖರ್ಗೆ, ಸಚಿವ

ಸರಕಾರದ ಬಗ್ಗೆ ಟೀಕಿಸಲು ಎಚ್‌.ಡಿ. ಕುಮಾರಸ್ವಾಮಿಗೆ ವಿಷಯಗಳಿಲ್ಲ. ಹೀಗಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇಷ್ಟು ಬೇಗ ಅವರು ಮೈಪರಚಿಕೊಳ್ಳುವುದು ಬೇಡ.
-ದಿನೇಶ್‌ ಗುಂಡೂರಾವ್‌, ಆರೋಗ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next