ಬೆಂಗಳೂರು: “ರಾಜ್ಯದ ಜನತೆ ನಮಗೆ ಬಹುಮತ ನೀಡದ ಕಾರಣ ನಾನು ಆರೂವರೆ ಕೋಟಿ ಜನರ ಮುಲಾಜಿನಲ್ಲಿಲ್ಲ. ಬದಲಾಗಿ ಜನ ಬಹುಮತ ಕೊಡದೇ ಇದ್ದರೂ ಬೆಂಬಲ ನೀಡಿದ ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ. ಆದರೂ, ರೈತರ ವಿಷಯದಲ್ಲಿ ನಾನು ಹಿಂದೆ ಆಡಿದ ಮಾತುಗಳಿಗೆ ಬದ್ಧನಾಗಿದ್ದೇನೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಮಾಜಿ ಪ್ರಧಾನಿ ಜವಾಹರಲಾಲ ನೆಹರು ಅವರ 54ನೇ ಪುಣ್ಯತಿಥಿ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ನೆಹರು ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ರೈತರ ಕೃಷಿ ಸಾಲ ಮನ್ನಾ ಮಾಡಲು ಒಂದು ವಾರ ಸಮಯಾವಕಾಶ ಕೊಡಿ. ನುಡಿದ ಮಾತಿನಂತೆ ನಡೆಯದಿದ್ದರೆ ನಾನೇ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುತ್ತೇನೆಂದು ಹೇಳಿದರು. “ರೈತರ ಸಾಲ ಮನ್ನಾ ವಿಚಾರದಲ್ಲಿ ನನಗೆ ಬದ್ಧತೆಯಿದೆ. ಹೀಗಾಗಿ, ಈ ಕುರಿತು ರೈತ ಸಂಘಟನೆಗಳು ಒತ್ತಡ ತರುವುದು ಬೇಡ. ನನಗೂ ರೈತರ ಬಗ್ಗೆ ಕಾಳಜಿಯಿದೆ. ನಾನು ಮುಖ್ಯಮಂತ್ರಿಯಾಗಿರುವುದೇ ರೈತರ ಕಲ್ಯಾಣಕ್ಕೆ. ಅದು ಸಾಧ್ಯವಾಗದಿದ್ದರೆ ಈ ಸ್ಥಾನದಲ್ಲಿ ಇರುವುದಿಲ್ಲ’ ಎಂದರು.
“ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಬಹುಮತ ಸಾಬೀತುಪಡಿಸಿ ಇನ್ನೂ ಎರಡು ದಿನವಾಗಿಲ್ಲ. ಸಂಪುಟ ವಿಸ್ತರಣೆ, ಖಾತೆಗಳ ಹಂಚಿಕೆಯೂ ನಡೆದಿಲ್ಲ. ಹಾಗೆಂದು ನೆಪ ಹೇಳಿಕೊಂಡು ನಾನು ಈ ವಿಚಾರದಲ್ಲಿ ಹಿಂದೆ ಸರಿಯುವುದಿಲ್ಲ. ಆದ್ದರಿಂದ ರೈತರ ಸಾಲಮನ್ನಾ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಬೇಕಿಲ್ಲ. ನಾನು ಕುರ್ಚಿಗೆ ಅಂಟಿಕೊಂಡು ಕುಳಿತಿಲ್ಲ. ರೈತರ ಸಾಲಮನ್ನಾ ಮಾಡದಿದ್ದರೆ ನಾನೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಹೇಳಿದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕಿಡಿಕಾರಿದ ಅವರು, ರೈತರ ಸಾಲಮನ್ನಾ ವಿಚಾರದಲ್ಲಿ ಅನಗತ್ಯವಾಗಿ ಯಡಿಯೂರಪ್ಪ ಅವರು ಪ್ರತಿಭಟನೆಗೆ ಕರೆ ಕೊಟ್ಟು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಸಾಲಮನ್ನಾ ಮಾಡುತ್ತೇನೆಂದು ಹೇಳಿದರೂ ಸಮಾಜದಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಈ ಮನುಷ್ಯನಿಗೆ ಕನ್ನಡ ಬರುವುದಿಲ್ಲವೇ? ಮೊದಲು ಕೀಳುಮಟ್ಟದಲ್ಲಿ ನಡೆದುಕೊಳ್ಳುವುದನ್ನು ಬಿಡಲಿ. ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸುವುದರಿಂದ ಹೊರಬರಲಿ ಎಂದು ವಾಗ್ಧಾಳಿ ನಡೆಸಿದರು.
ರೈತರು ಇಂತಹ ಯಾವುದೇ ಪ್ರಚೋದನೆಗೆ ಒಳಗಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಡಿ. ಇದರಿಂದ ರೈತರಿಗೆ ಯಾವುದೇ ಅನುಕೂಲವಿಲ್ಲ. ಬದಲಾಗಿ ರಾಜಕೀಯ ಲಾಭ ಮಾಡಿಕೊಳ್ಳುತ್ತಾರೆಂದು ರೈತರಲ್ಲಿ ಮನವಿ ಮಾಡಿದರು.