Advertisement

ಸಮ್ಮಿಶ್ರ ರಕ್ಷಣೆಗೆ ಕುಮಾರ ಸೂತ್ರ

06:00 AM Dec 04, 2018 | Team Udayavani |

ಬೆಂಗಳೂರು: ಆಪರೇಷನ್‌ ಕಮಲ ಭೀತಿಯಿಂದ ಪಾರಾಗುವುದು, ಒಂದೊಮ್ಮೆ ಸಂಪುಟ ವಿಸ್ತರಣೆಯಾದರೂ ಅಸಮಾಧಾನಿತರನ್ನು ಹಿಡಿದಿಟ್ಟುಕೊಂಡು ಸಮ್ಮಿಶ್ರ ಸರ್ಕಾರಕ್ಕೆ ಸಂಕಷ್ಟ ಉಂಟಾಗದಂತೆ ನೋಡಿಕೊಳ್ಳಲು ಮೈತ್ರಿ ಪಕ್ಷಗಳು ಹೊಸ “ಸೂತ್ರ’ ರೂಪಿಸಿವೆ. ಸಮ್ಮಿಶ್ರ ಸರ್ಕಾರದಲ್ಲಿ ತಮ್ಮ ಕ್ಷೇತ್ರಗಳ ಕೆಲಸ ಕಾರ್ಯಗಳು ಆಗುತ್ತಿಲ್ಲ, ವರ್ಗಾವಣೆ ವಿಚಾರದಲ್ಲಿ ನಮ್ಮ ಶಿಫಾರಸು ನಡೆಯುತ್ತಿಲ್ಲ ಎಂಬ ಕಾಂಗ್ರೆಸ್‌ ಶಾಸಕರ ಅಸಮಾಧಾನ ಶಮನ ಮಾಡಲು ಕಾರ್ಯಯೋಜನೆಯನ್ನೂ ರೂಪಿಸಲಾಗಿದೆ.

Advertisement

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ನಡುವಿನ ಮಾತು ಕತೆ ಬಳಿಕ ಇಂಥದ್ದೊಂದು ಸೂತ್ರ ಸಿದ್ಧವಾಗಿದ್ದು ಡಿಸೆಂಬರ್‌ 8 ರಂದು ನಡೆಯಲಿರುವ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಖುದ್ದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಈ ಬಗ್ಗೆ ಶಾಸಕರಿಗೆ ಮಾಹಿತಿ ನೀಡಲಿದ್ದಾರೆ. ಇದಾದ ನಂತರ ಬೆಳಗಾವಿ ವಿಧಾನಮಂಡಲ ಅಧಿವೇಶನಕ್ಕೆ ಮುಂಚೆ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆ ಕರೆದು ಜೆಡಿಎಸ್‌ ಸಚಿವರು ಹಾಗೂ ಶಾಸಕರಿಗೆ ಹೊಸ
“ಸೂತ್ರ’ದಂತೆ ಕೆಲಸ ಮಾಡಲು ನಿರ್ದೇಶನ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎಚ್‌.ಡಿ. ರೇವಣ್ಣ ಸೇರಿ ಜೆಡಿಎಸ್‌ನ ಕೆಲವು ಸಚಿವರು ಕಾಂಗ್ರೆಸ್‌ ಶಾಸಕರ ಶಿಫಾರಸುಗಳಿಗೆ ಆದ್ಯತೆ ನೀಡುತ್ತಿಲ್ಲ ಎಂಬ ಆರೋಪ ಇರುವು  ದರಿಂದ ಅಂತಹ ಸಚಿವರಿಗೆ ನಿರ್ದೇಶನ ನೀಡುವುದೂ ಕುಮಾರಸೂತ್ರದಲ್ಲಿದೆ ಎಂದು ಹೇಳಲಾಗುತ್ತಿದೆ.

ಸಮಾನ ಅವಕಾಶ: ಎಪಿಎಂಸಿ ಸೇರಿದಂತೆ ವಿಧಾನಸಭೆ ಕ್ಷೇತ್ರ ಹಾಗೂ ಜಿಲ್ಲಾ ಮಟ್ಟದ ನಾಮನಿರ್ದೇಶನಗಳಲ್ಲಿ ಎರಡು ಪಕ್ಷಗಳಿಗೂ ಸಮಾನ ಅವಕಾಶ ಕಲ್ಪಿಸುವುದು ಸೂತ್ರದಲ್ಲಿ ಸೇರಿದೆ ಎಂದು ಹೇಳಲಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರು ಹಾಗೂ ಸ್ಥಳೀಯ ಮಟ್ಟದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರ ನಡುವಿನ ಸಂಘರ್ಷ ತಪ್ಪಿಸಲು ಕೆಪಿಸಿಸಿ ಅಧ್ಯಕ್ಷರು ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷರ ಮಟ್ಟದಲ್ಲಿ ಸಮನ್ವಯ ಸಮಿತಿ ರಚಿಸಿ ಜಿಲ್ಲಾ ಮಟ್ಟದಲ್ಲೂ ಅದನ್ನು ವಿಸ್ತರಿಸಿ ಎರಡೂ ಪಕ್ಷಗಳ ಜಿಲ್ಲಾಧ್ಯಕ್ಷ 
ಸಮಿತಿ ರಚಿಸುವುದು ಸೂತ್ರದಲ್ಲಿ ಸೇರಿದೆ ಎಂದು ತಿಳಿದು ಬಂದಿದೆ. 

ಪರ್ಸನಲ್‌ ಕಮಿಟ್‌ಮೆಂಟ್‌ : ಸಮ್ಮಿಶ್ರ ಸರ್ಕಾರ ಕೆಡವಲು ಬಿಜೆಪಿ ನಿರಂತರ ಪ್ರಯತ್ನದಲ್ಲಿರುವುದರಿಂದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ಸಾಹಸದ ಕೆಲಸವಾಗಿದೆ. ಕ್ಷೇತ್ರದ ಕೆಲಸ ಕಾರ್ಯಗಳಷ್ಟೇ ಅಲ್ಲದೆ ಕೆಲವರು ವೈಯಕ್ತಿಕ ಸಮಸ್ಯೆಗಳನ್ನು (“ಪರ್ಸನಲ್‌ ಕಮಿಟ್‌ಮೆಂಟ್‌’)ಮುಂದಿಟ್ಟು ಪರಿಹರಿಸಲು ಭಾವನಾತ್ಮಕ ಒತ್ತಡ ಹಾಕುತ್ತಿರುವುದು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ತಲೆಬಿಸಿಯಾಗಿದೆ. ಆಪರೇಷನ್‌ ಕಮಲ ಕಾರ್ಯಾಚರಣೆಯನ್ನೇ ನೆಪವಾಗಿಟ್ಟುಕೊಂಡಿರುವ ಕೆಲವು ಕಾಂಗ್ರೆಸ್‌ ಶಾಸಕರು ಬಿಜೆಪಿ ನಾಯಕರನ್ನು ತಾವೇ ಸಂಪರ್ಕಿಸಿ ತಮ್ಮನ್ನು ಬಿಜೆಪಿ ನಾಯಕರು ಸಂಪರ್ಕಿಸಿದಂತೆ ಬಿಂಬಿಸಿಕೊಂಡು ತಮ್ಮ ಬೇಡಿಕೆಗಳ ಪಟ್ಟಿ ಇಡುತ್ತಿದ್ದಾರೆ ಎಂದು ಹೇಳಲಾಗಿದೆ.

ಮೊದಲು ನಿಗಮ ಮಂಡಳಿ ನೇಮಕ
ಒಂದೊಮ್ಮೆ ಸಂಪುಟ ವಿಸ್ತರಣೆ ತಡವಾದರೂ ನಿಗಮ-ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಲು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ತೀರ್ಮಾನಿಸಿದೆ. ಆ ಮೂಲಕ ಕನಿಷ್ಠ 50 ಶಾಸಕರನ್ನು ಸಮಾಧಾನಪಡಿಸುವುದು. ಸಂಪುಟ ದರ್ಜೆ ಸ್ಥಾನಮಾನದ ಜತೆ ನಿಗಮ-ಮಂಡಳಿ ಅಧ್ಯಕ್ಷಗಿರಿ ನೀಡಿದರೆ ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಶಾಸಕರು ಒಪ್ಪಿಕೊಳ್ಳಲಿದ್ದಾರೆ. ಆಗ ಸಚಿವ ಸ್ಥಾನವೇ ಬೇಕು ಎಂಬ ಒತ್ತಡ ಕಡಿಮೆಯಾಗಬಹುದು ಎಂಬ ಲೆಕ್ಕಾಚಾರ ಹಾಕಲಾಗಿದೆ ಎನ್ನಲಾಗಿದೆ.

Advertisement

ಸೂತ್ರವೇನು?
ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ
ಪೊಲೀಸ್‌ ಇನ್ಸ್‌ಪೆಕ್ಟರ್‌, ತಹಸೀಲ್ದಾರ್‌ನಂಥ ಹುದ್ದೆಗಳ ವರ್ಗಾವಣೆಯಲ್ಲಿ ಶಾಸಕರ ಶಿಫಾರಸಿಗೆ ಮಣೆ
ಲೋಕೋಪಯೋಗಿ, ಕಂದಾಯ, ನಗರಾಭಿವೃದ್ಧಿ, ಪೊಲೀಸರ ವರ್ಗಾವಣೆ ಸಂಘರ್ಷ ತಪ್ಪಿಸುವುದು
ಸಿಎಂ, ಡಿಸಿಎಂ ಜತೆಗೂಡಿ ಸಮನ್ವಯತೆಯಿಂದ ವರ್ಗಾವಣೆಗಳ ತೀರ್ಮಾನ ಮಾಡುವುದು
ಕಾಂಗ್ರೆಸ್‌ ಶಾಸಕರ ಶಿಫಾರಸುಗಳಿಗೆ ಆದ್ಯತೆ ನೀಡುವಂತೆ ರೇವಣ್ಣ ಸೇರಿದಂತೆ, ಜೆಡಿಎಸ್‌ನ ಸಚಿವರಿಗೆ ನಿರ್ದೇಶನ ನೀಡುವುದು
ಜೆಡಿಎಸ್‌ ಶಾಸಕರಿರುವ ಕಡೆ ಕಾಂಗ್ರೆಸ್‌ನ ಮಾಜಿ ಶಾಸಕರು, ಸ್ಥಳೀಯ ನಾಯಕರಿಗೆ ಅಪಮಾನವಾಗದಂತೆ ಎಚ್ಚರಿಕೆ ವಹಿಸುವುದು

ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಸಾಧ್ಯವಿಲ್ಲ. ಸಮ್ಮಿಶ್ರ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಆದರೂ ಬಿಜೆಪಿಯವರು ಸರ್ಕಾರ ಕೆಡವಲು ಷಡ್ಯಂತ್ರದಲ್ಲಿ ತೊಡಗಿದ್ದಾರೆ. ಆದರೆ, ಅವರ ಪ್ರಯತ್ನ ಫ‌ಲ ನೀಡುವುದಿಲ್ಲ.
ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಕಾಂಗ್ರೆಸ್‌ನ ಆರೇಳು ಜನ ಮಾತ್ರ ಬಿಜೆಪಿಗೆ ಹೋಗುತ್ತಾರೆ. 25 ಶಾಸಕರು ಅಲ್ಲ. ಇದರಿಂದ ಸಮ್ಮಿಶ್ರ ಸರ್ಕಾರಕ್ಕೆ ಯಾವ ರೀತಿಯ ಅಪಾಯವೂ ಆಗಲ್ಲ. ನಾನಂತೂ ಈ ಶಾಸಕರ ಪಟ್ಟಿಯಲ್ಲಿ ಇಲ್ಲ.
ಸತೀಶ್‌ ಜಾರಕಿಹೊಳಿ, ಕಾಂಗ್ರೆಸ್‌ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next