Advertisement

ಕುಮಾರಪರ್ವತ ಚಾರಣ ನಿಷೇಧ

12:30 AM Feb 07, 2019 | |

ರಾಜ್ಯದ 21 ವನ್ಯಜೀವಿ ಅಭಯಾರಣ್ಯಗಳ ಪೈಕಿ ಪುಷ್ಪಗಿರಿ ವನ್ಯಜೀವಿ  ಅಭಯಾರಣ್ಯವೂ ಒಂದು. ಇದು ಕೊಡಗಿನ ಸೋಮವಾರ ಪೇಟೆ ವ್ಯಾಪ್ತಿಯಲ್ಲಿದೆ. ಇದು 102 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಪಸರಿಸಿದೆ.

Advertisement

ಸುಬ್ರಹ್ಮಣ್ಯ: ಪಶ್ಚಿಮ ಘಟ್ಟಗಳಿಂದ ಆವೃತವಾಗಿರುವ ಕುಕ್ಕೆಯ ಕುಮಾರ ಪರ್ವತವಿರುವ ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯೊಳಕ್ಕೆ ಸಾರ್ವಜನಿಕರ ಪ್ರವೇಶವನ್ನು ಫೆ. 1ರಿಂದ ವನ್ಯಜೀವಿ ವಿಭಾಗ ನಿಷೇಧಿಸಿದೆ. ಕುಮಾರ ಪರ್ವತಕ್ಕೆ ತೆರಳಲು ಚಾರಣಿಗರಿಗೂ ಅವಕಾಶವಿಲ್ಲ.

ಒಂದೆಡೆ ಹಸುರು, ಇನ್ನೊಂದಡೆ ಮುಳಿ ಹುಲ್ಲಿನಿಂದ ಕೂಡಿದ ನುಣುಪಾದ ಶಿಖರ. ಬಂಡೆಗಳ ಕಡಿದಾದ ಪ್ರದೇಶವೂ ಇಲ್ಲಿದ್ದು, ಚಾರಣಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕೃತಿಯ ಸೌಂದರ್ಯ ಸವಿಯಲು ಇಲ್ಲಿ ಬೆಟ್ಟ ಹತ್ತುತ್ತಾರೆ. ದಿನಕ್ಕೆ 25ರಿಂದ 30 ತಂಡಗಳು ಚಾರಣಕ್ಕೆ ತೆರಳುತ್ತವೆ. ಮಳೆಗಾಲದ ಕೆಲ ತಿಂಗಳು ಹೊರತು ಪಡಿಸಿ ಇತರ ಅವಧಿಯಲ್ಲಿ ಇಲ್ಲಿ ಚಾರಣಿಗರು ಕಂಡುಬರುತ್ತಿದ್ದರೂ ಅಕ್ಟೋಬರ್‌ನಿಂದ ಫೆಬ್ರವರಿ ತನಕ ಚಾರಣಕ್ಕೆ ಪ್ರಶಸ್ತ ಅವಧಿಯಾಗಿದೆ.

ವನ್ಯ ರಕ್ಷಣೆಗೆ ಕ್ರಮ
ಅರಣ್ಯ, ಹುಲ್ಲುಗಾವಲು ಸಂಪೂರ್ಣವಾಗಿ ಒಣಗಿರುವುದರಿಂದ ಈ ಅವಧಿಯಲ್ಲಿ ವನ್ಯಧಾಮ ದೊಳಗೆ ಸಾರ್ವಜನಿಕರು ಪ್ರವೇಶಿಸಿ ಚಟುವಟಿಕೆ ನಡೆಸಿದರೆ ವನ್ಯಧಾಮಕ್ಕೆ ಬೆಂಕಿ ಬೀಳುವ ಸಾಧ್ಯತೆ ಮತ್ತು ಚಾರಣಿಗರಿಗೂ ಅಪಾಯ ಇದೆ ಎಂಬ ಕಾರಣವೊಡ್ಡಿ ಅರಣ್ಯ ಇಲಾಖೆ ಚಾರಣ ನಿಷೇಧಿಸಿದೆ.

ಉಲ್ಲಂಘಿಸಿದರೆ ಕಠಿನ ಶಿಕ್ಷೆ
ವನ್ಯಧಾಮ ಪ್ರವೇಶಿಸದಂತೆ ನಾಮಫ‌ಲಕ ಹಾಕಲಾಗಿದೆ. ಆದೇಶ ಉಲ್ಲಂಘಿಸಿದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಕಾನೂನಿನಡಿ ಶಿಕ್ಷೆಗೆ ಗುರಿಪಡಿಸುವ ಎಚ್ಚರಿಕೆ ನೀಡಲಾಗಿದೆ.

Advertisement

3 ಜಿಲ್ಲೆಗಳ ಗಡಿಭಾಗ
ಕುಮಾರ ಪರ್ವತವು ದ.ಕ. ಮತ್ತು ಕೊಡಗು ಜಿಲ್ಲೆಗಳ ಗಡಿಭಾಗದಲ್ಲಿದೆ. ಪರ್ವತ ಶೃಂಗವು ಸಮುದ್ರ ಮಟ್ಟದಿಂದ 5,615 ಅಡಿ ಎತ್ತರದಲ್ಲಿದೆ. ಕೊಡಗು, ಹಾಸನ ಮತ್ತು ದ.ಕ. ಈ ಮೂರು ಜಿಲ್ಲೆಯ ಕಡೆಗಳಿಂದಲೂ ಚಾರಣ ಕೈಗೊಳ್ಳಬಹುದಾಗಿದೆ. 
ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿಂಬಾಗಿಲಿನಿಂದ ಈ ಪರ್ವತ ಚಾರಣ ಆರಂಭವಾಗುತ್ತದೆ. ಸುಬ್ರಹ್ಮಣ್ಯ-ಕುಮಾರಪರ್ವತ ನಡುವೆ ಇರುವ ನಡಿಗೆಯ ದೂರ 12 ಕಿ.ಮೀ.

ಕೊಡಗು ಘಟನೆ ಪಾಠ
ಕೊಡಗು ಮತ್ತು ದ.ಕ. ಜಿಲ್ಲೆಗಳಿಗೆ ಹೊಂದಿಕೊಂಡು ಪುಷ್ಪಗಿರಿ ವನ್ಯಧಾಮವಿದೆ. ಪ್ರಾಕೃತಿಕ ವಿಕೋಪಗಳಂತಹ ಘಟನೆಗಳು ಈ ಭಾಗದಲ್ಲಿ ಈಗಾಗಲೇ ಸಂಭವಿಸಿರುವ ಉದಾಹರಣೆ ಕಣ್ಣ ಮುಂದಿದೆ. ವಾತಾವರಣದಲ್ಲೂ ಸಾಕಷ್ಟು ಏರುಪೇರುಗಳಾಗುತ್ತಿವೆ. ಇದು ಮನುಕುಲ, ಪ್ರಾಣಿ-ಪಕ್ಷಿ ಸಂಕುಲದ ಮೇಲೂ ಪ್ರತೀಕೂಲ ಪರಿಣಾಮ ಬೀರುತ್ತದೆ.

ಮುಂಗಾರು ಆರಂಭದವರೆಗೆ ನಿಷೇಧ
ಬೇಸಗೆ ದಿನಗಳಾದ್ದರಿಂದ ಅರಣ್ಯದೊಳಗೆ ಬೆಂಕಿ ಬೀಳುವ ಸಾಧ್ಯತೆಗಳು ಹೆಚ್ಚಿವೆ. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ. ವನ್ಯಧಾಮ ವ್ಯಾಪ್ತಿಯಲ್ಲಿ ಸಾರ್ವಜನಿಕರ ಚಲನವಲನಕ್ಕೆ ಈಗಾಗಲೇ ನಿಷೇಧ ಹೇರಲಾಗಿದೆ. ಮುಂಗಾರು ಆರಂಭವಾಗುವ ತನಕ ಈ ನಿಷೇಧ ಜಾರಿಯಲ್ಲಿರುತ್ತದೆ.
 ಜಯ, ವನ್ಯಜೀವಿ ಅಧಿಕಾರಿ, ಮಡಿಕೇರಿ. 

Advertisement

Udayavani is now on Telegram. Click here to join our channel and stay updated with the latest news.

Next