Advertisement

ಕಮಲದ ತೆಕ್ಕೆಗೆ ಕುಮಾರ್‌ ಬಂಗಾರಪ್ಪ

11:04 AM Mar 10, 2017 | Team Udayavani |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಅವರ ಪುತ್ರ ಮಾಜಿ ಸಚಿವ ಕುಮಾರ್‌ ಬಂಗಾರಪ್ಪ, ಕಾಂಗ್ರೆಸ್‌ನ ಮಾಜಿ ಶಾಸಕರಾದ ಭಟ್ಕಳದ ಜೆ.ಡಿ.ನಾಯ್ಕ ಮತ್ತು ಹೊಸನಗರದ ಜಿ.ಡಿ.ನಾರಾಯಣಪ್ಪ ಅವರು ತಮ್ಮ
ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡರು. ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಪಕ್ಷದ ಧ್ವಜ ನೀಡುವ ಮೂಲಕ ಮೂವರನ್ನೂ ಬಿಜೆಪಿಗೆ ಬರಮಾಡಿಕೊಂಡರು.

Advertisement

ಇದೇ ಸಂದರ್ಭದಲ್ಲಿ ಪಿರಿಯಾ ಪಟ್ಟಣದ ಮಂಜುನಾಥ್‌, ಸೊರಬ ಕ್ಷೇತ್ರದ ಬ್ಲಾಕ್‌ ಕಾಂಗ್ರೆಸ್‌ ಪದಾಧಿಕಾರಿಗಳು,
ಕಾರ್ಯಕಾರಿ ಸಮಿತಿ ಸದಸ್ಯರು, ಯುವ ಕಾಂಗ್ರೆಸ್‌ ಪದಾಧಿಕಾರಿಗಳು, ವಿವಿಧ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರು,
ಆಯ್ಕೆಯಾದ ಸದಸ್ಯರು ಕೂಡ ಬಿಜೆಪಿ ಸೇರಿದರು.

ಗೆಲ್ಲುವ ಅಭ್ಯರ್ಥಿಗೆ ಟಿಕೆಟ್‌: ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎಸ್‌. ಯಡಿಯೂರಪ್ಪ, ಮುಂಬರುವ ವಿಧಾನಸಭೆ
ಚುನಾವಣೆಯಲ್ಲಿ ಸ್ಥಳೀಯವಾಗಿ ಸಮೀಕ್ಷೆ ನಡೆಸಿ, ಜನರ ಅಭಿಪ್ರಾಯ ಪಡೆದು ಗೆಲ್ಲುವ ಅಭ್ಯರ್ಥಿಗ ಳನ್ನು ಗುರುತಿಸಿ ಪಕ್ಷದ ಟಿಕೆಟ್‌ ನೀಡಲಾ ಗುವುದು. ಯಾವುದೇ ಕಾರಣಕ್ಕೂ ದೆಹಲಿ ಮಟ್ಟದಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮ ಗೊಳಿಸುವುದಿಲ್ಲ.

ಆದ್ದರಿಂದ ಟಿಕೆಟ್‌ ಸಿಗದೇ ಇದ್ದವರು ಅಸಮಾಧಾನಗೊಳ್ಳದೆ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ಆಕಾಂಕ್ಷಿಗಳಿಗೂ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಹೇಳಿದರು. ರಾಜ್ಯದ ಕಾಂಗ್ರೆಸ್‌ ಸರ್ಕಾರ ಬದುಕಿದ್ದೂ ಸತ್ತಂತೆ ವರ್ತಿಸುತ್ತಿದೆ. ಇದರಿಂದಾಗಿ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಇದ್ದಾಗಲೇ ಕಾಂಗ್ರೆಸ್‌ ತೊರೆದು ಸಾಕಷ್ಟು ಮಂದಿ ಬಿಜೆಪಿ ಸೇರುತ್ತಿದ್ದು, ಮುಂದಿನ ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂಬ ವಾತಾವರಣ ನಿರ್ಮಾಣವಾಗಿದೆ. ಎಸ್‌.ಎಂ.ಕೃಷ್ಣ ಅವರು ಬಿಜೆಪಿ ಸೇರಿದ ಬಳಿಕ ರಾಜ್ಯದಲ್ಲಿ ಅನ್ಯ ಪಕ್ಷಗಳಿಂದ ಮತ್ತಷ್ಟು ಮಂದಿಯನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಎಂದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ, ಸಂಸದ ಅನಂತಕುಮಾರ್‌ ಹೆಗಡೆ,
ಶಾಸಕ ಗೋವಿಂದ ಕಾರಜೋಳ, ವಿಧಾನ ಪರಿಷತ್‌ ಸದಸ್ಯ ಬಿ.ಜೆ.ಪುಟ್ಟಸ್ವಾಮಿ, ಮಾಜಿ ಶಾಸಕರಾದ ಹರತಾಳು
ಹಾಲಪ್ಪ, ಬೇಳೂರು ಗೋಪಾಲಕೃಷ್ಣ, ಅರಗ ಜ್ಞಾನೇಂದ್ರ, ಎಂ.ಪಿ.ರೇಣುಕಾಚಾರ್ಯ, ಸುನೀಲ್‌ ಹೆಗಡೆ ಶಿವಾನಂದ
ನಾಯ್ಕ ಮತ್ತಿತರರು ಹಾಜರಿದ್ದರು.

Advertisement

ಕಾಗೋಡುಗೆ ಕುಮಾರ್‌ ಟಾಂಗ್‌
“ಹಿರಿಯರು ಮಾರ್ಗದರ್ಶನ ಕೊಡುವವರಾಗಬೇಕೇ ಹೊರತು ಒಬ್ಬ ವ್ಯಕ್ತಿಯ ಸಾಂಸಾರಿಕ, ರಾಜಕೀಯ ದುಗುಡಗಳನ್ನು ಪ್ರಸ್ತಾಪಿಸಿ ಟೀಕಿಸಬಾರದು. ಪ್ರೀತಿಯಿಂದ ಜನರನ್ನು ಗೆಲ್ಲಬೇಕೇ ಹೊರತು ದ್ವೇಷದಿಂದ ಅದು
ಸಾಧ್ಯವಿಲ್ಲ ‘ ಎಂದು ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ಅವರು ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಟಾಂಗ್‌
ನೀಡಿದ್ದಾರೆ. ಬಿಜೆಪಿ ಸೇರಿದ ಬಳಿಕ ಮಾತನಾಡಿದ ಅವರು, “ಹಿರಿಯರು, ಮಂತ್ರಿಗಳಾಗಿದ್ದವರು ಒಳ್ಳೆಯ ವಾತವರಣ
ಸೃಷ್ಟಿಸಿ ಕಿರಿಯರಿಗೆ ಮಾರ್ಗದರ್ಶಕರಾಗಬೇಕು. ಆದರೆ, ನನ್ನ ಸಾಂಸಾರಿಕ ಮತ್ತು ರಾಜಕೀಯ ದುಗುಡಗಳನ್ನು
ಪ್ರಸ್ತಾಪಿಸಿ ಕೇವಲವಾಗಿ ಮಾತನಾಡುವುದು ಅವರ ಹಿರಿತನಕ್ಕೆ ತಕ್ಕುದಲ್ಲ. ಇನ್ನಾದರೂ ಅವರು ತಮ್ಮ ಹಿರಿತನಕ್ಕೆ
ತಕ್ಕಂತೆ ಗೌರವದಿಂದ ವರ್ತಿಸಲಿ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next