Advertisement
ರಾಜ್ಯದ ಪಾಲಿಗೆ ವಿನೂತನ ಮತ್ತುಪ್ರಥಮ ಎನ್ನಬಹುದಾದ ನದಿ ಉತ್ಸವ (ರಿವರ್ ಫೆಸ್ಟಿವಲ್) ಶನಿವಾರ ಆರಂಭ ಗೊಂಡಿದ್ದು ರವಿವಾರವೂ ನಡೆಯಲಿದೆ. ಫಲ್ಗುಣಿ ನದಿಯಲ್ಲಿ ಕೂಳೂರು ಸೇತುವೆಯ ಬಳಿಯಿಂದ ಸುಲ್ತಾನ್ ಬತ್ತೇರಿಯವರೆಗೆ ಸುಮಾರು 23 ಕಿ.ಮೀ. ವರೆಗೆ ನದಿ ಮತ್ತು ನದಿಪಾತ್ರದಲ್ಲಿ ನಡೆಯುವ ಉತ್ಸವದಲ್ಲಿ ಎರಡು ದಿನಗಳ ಕಾಲ ವೈವಿಧ್ಯಮಯ ಮನೋರಂಜನೆ ಹಾಗೂ ಜಲಸಂಬಂಧಿತ ಕ್ರೀಡೆಗಳು ನಡೆಯುತ್ತಿವೆ. ಕೂಳೂರಿನಿಂದ ಬಂಗ್ರ ಕೂಳೂರುವರೆಗೆ ಸುಮಾರು ಎರಡುವರೆ ಕಿ.ಮೀ. ದೂರು ನದಿ ಬದಿಯಲ್ಲಿ ನಡೆಯುತ್ತಾ ಪ್ರಕೃತಿ ಸೌಂದರ್ಯ ಆಸ್ವಾದಿಸಬಹುದು.
ನಿಗದಿತ ಶುಲ್ಕ ತೆತ್ತು ನದಿಯಲ್ಲಿ ವಿಹರಿಸಲು ವ್ಯವಸ್ಥೆ ಮಾಡಲಾಗಿದ್ದು, ಜನರು ಜಲವಿಹಾರದ ಆನಂದವನ್ನು ಅನುಭವಿಸಿದರು. ಉತ್ಸವ ತಾಣಗಳಲ್ಲದೆ ನದಿ ತೀರದಲ್ಲಿರುವ ಇತರ ಜೆಟ್ಟಿಗಳಿಗೆ ಪ್ರವಾಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಸುಮಾರು 13 ದೋಣಿಗಳು ಕಾರ್ಯಾಚರಿಸುತ್ತಿವೆ. ನದಿ ಮಧ್ಯದಲ್ಲಿ ಆಕರ್ಷಕ ತೇಲುವ ರೆಸ್ಟೋರೆಂಟ್‌ಗಳಲ್ಲಿ ಕುಳಿತು ನೀರಿನ ಅಲೆಗಳ ಹಿತವಾದ ಜೋಕಾಲಿಯ ನಡುವೆ, ವಿಶಾಲ ಜಲರಾಶಿ ಮತ್ತು ನದಿಯ ಎರಡೂ ಬದಿಗಳಲ್ಲೂ ಇರುವ ಹಸಿರು ಸಿರಿಯ ರಮಣೀಯ ದೃಶ್ಯವನ್ನು ಆನಂದಿಸುತ್ತಾ, ಸ್ವಾದಿಷ್ಟಭರಿತ ತಿಂಡಿತಿನಸುಗಳ ಸವಿದರು. ಜಲಕ್ರೀಡೆಗಳ ಪುಳಕ
ನದಿ ಉತ್ಸವಕ್ಕೆ ಆಗಮಿಸುವ ಸಾರ್ವ ಜನಿಕರಿಗೆ ಜಲಕ್ರೀಡೆಗಳು ಮನಸ್ಸಿಗೆ ಉಲ್ಲಾಸ ನೀಡುತ್ತಿವೆೆ. ರೋಯಿಂಗ್, ಕಯಾಕ್, ಸ್ಟ್ಯಾಂಡ್ ಆಫ್ ಫೆಡಲಿಂಗ್, ವಿಂಡ್ ಸರ್ಫಿಂಗ್ ಜೆಟ್ಸೆಕಿ, ಸ್ಪೀಡ್‌ಬೋಟು ಸಹಿತ ವಿವಿಧ ಜಲಕ್ರೀಡೆಗಳು ಪ್ರದರ್ಶಿತ ಗೊಳ್ಳುತ್ತಿವೆ. ಇದರಲ್ಲಿ ಭಾಗವಹಿಸುವ ಅವಕಾಶವನ್ನು ಜಿಲ್ಲಾಡಳಿತ ಕಲ್ಪಿಸಿದ್ದು ಸಾರ್ವಜನಿಕರು ಇದರಲ್ಲಿ ಪಾಲ್ಗೊಂಡು ಆನಂದಿಸಿದರು. ಜಲಕ್ರೀಡೆ ಪ್ರವೀಣರು, ತರಬೇತುದಾರರು ಆಸಕ್ತ ಸಾರ್ವಜನಿಕರ ಜತೆ ಇದ್ದು ಮಾರ್ಗದರ್ಶನ ನೀಡುತ್ತಿದ್ದಾರೆ.
Related Articles
ವಿಶೇಷವಾಗಿ ಆಯೋಜಿಸಿರುವ ವೈವಿಧ್ಯ ಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನದಿ ಉತ್ಸವಕ್ಕೆ ಮೆರುಗು ನೀಡುತ್ತಿವೆ. ಬಂಗ್ರಕೂಳೂರು ಮತ್ತು ಸುಲ್ತಾನ್ ಬತ್ತೇರಿಯಲ್ಲಿ ಅಳವಡಿಸಿರುವ ವೇದಿಕೆಗಳಲ್ಲಿ ಯುವ ಹಾಗೂ ವೃತ್ತಿಪರ ಕಲಾವಿದರಿಂದ ಗಾನ, ನೃತ್ಯ, ಸಂಗೀತ ಕಾರ್ಯಕ್ರಮಗಳು ನದಿ ಉತ್ಸವದಲ್ಲಿ ಆಗಮಿಸುವ ಸಾರ್ವಜನಿಕರ ಮನಸ್ಸುಗಳಿಗೆ ಮುದ ನೀಡುತ್ತಿವೆ. ಬಂಗ್ರಕೂಳೂರಿನಲ್ಲಿ ಆಯೋಜಿಸಲಾದ ಚಿತ್ರಕಲಾ ಪ್ರದರ್ಶನ ಜನರನ್ನು ಆಕರ್ಷಿಸುತ್ತಿದ್ದು, ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಖರೀದಿಯ ಮಜಾ ನೀಡುತ್ತಿವೆ.
Advertisement
ವಿಶಿಷ್ಟ ಉದ್ಘಾಟನೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಕೂಳೂರು ಸೇತುವೆಯ ಬಳಿಯ ಫಲ್ಗುಣಿ ನದಿ ತೀರದ ಜೆಟ್ಟಿಯ ಪಕ್ಕ ಗಿಡಗಳನ್ನು ನೆಡುವ ಮೂಲಕ ನದಿ ಉತ್ಸವಕ್ಕೆ ಚಾಲನೆ ನೀಡಿದರು. ಬಾಲಕಿಯೋರ್ವಳು ಇದಕ್ಕೆ ನೀರೆರೆದಳು. ಮೇಯರ್ ಭಾಸ್ಕರ್ ಕೆ., ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಅಪರ ಜಿಲ್ಲಾಧಿಕಾರಿ ಕುಮಾರ್, ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಅವರಿಗೆ ಸಾಥ್ ನೀಡಿದರು. ಬಳಿಕ ನದಿಗೆ ಹೂವು ಅರ್ಪಿಸಲಾಯಿತು. ವೇದಿಕೆಯಲ್ಲಿ ಸಚಿವರು ಡೊಳ್ಳು ಬಾರಿಸಿದರು. ಸ್ಪೀಡ್‌ಬೋಟ್‌ನಲ್ಲಿ ನದಿಯಲ್ಲಿ ಸಂಚರಿಸಿ ಜಲಕ್ರೀಡೆಯನ್ನು ಉದ್ಘಾಟಿಸಿದರು. ಡೊಳ್ಳು ಕುಣಿತ, ಡೋಲುವಾದನ, ಕೊಂಬು, ಕಹಳೆ, ಚೆಂಡೆವಾದನ ಉದ್ಘಾಟನೆಗೆ ಮೆರುಗು ನೀಡಿದವು.