ಕೂಳೂರು: ರಾಷ್ಟ್ರೀಯ ಹೆದ್ದಾರಿ 66ರ ಕೂಳೂರು ಬಳಿ ಗೈಲ್ಗ್ಯಾಸ್ ಪೈಪ್ಲೈನ್ ಕಾಮಗಾರಿ ವೇಳೆ ಹೆದ್ದಾರಿ ಕುಸಿತ ಉಂಟಾಗಿರುವುದರ ದುರಸ್ತಿ ಶೀಘ್ರ ಆರಂಭಗೊಳ್ಳಲಿದೆ.
ಗೈಲ್ ಕಂಪೆನಿಯವರ ಎಚ್ಡಿಪಿಇ ಸಿಎನ್ಜಿ ಗ್ಯಾಸ್ ಪೈಪ್ಲೈನ್ ಅನ್ನು ಕೂಳೂರು ಸೇತುವೆ ಬಳಿಯಲ್ಲೇ ಫಲ್ಗುಣಿ ನದಿಗೆ ಅಡ್ಡವಾಗಿ ಕ್ರಾಸಿಂಗ್ ಮಾಡುವ ಕಾಮಗಾರಿಯಿದು. ಈ ಕಾಮಗಾರಿ ವೇಳೆ ಕೆಲದಿನಗಳ ಹಿಂದೆ ಭಾರಿ ಮಳೆ ಕೂಡ ಬಂದ ಕಾರಣ ಹೆದ್ದಾರಿ ಭಾಗಶಃ ಕುಸಿದಿತ್ತು.
ಈ ಗ್ಯಾಸ್ ಪೈಪ್ಲೈನ್ ಕಾಮಗಾರಿಗಾಗಿ ಕೆಲವು ತಿಂಗಳ ಹಿಂದೆಯೇ ಗುಜರಾತ್ ಮೂಲದ ಗುತ್ತಿಗೆದಾರರು ಮಷಿನರಿಗಳನ್ನು ತಂದು ಇರಿಸಿದ್ದರು. ಕೂಳೂರು ಸೇತುವೆಗಿಂದ ತುಸು ಹಿಂದೆ ಹೆದ್ದಾರಿ ಬದಿಯಲ್ಲೇ ಹೊಂಡ ಮಾಡಿ ಅಲ್ಲಿಂದ ಮಷಿನ್ ಮೂಲಕ ಡ್ರಿಲ್ ಮಾಡುತ್ತಾ ಪೈಪ್ ಹಾಕಬೇಕಿತ್ತು. ಸುಮಾರು 1.2 ಕಿ.ಮೀ. ಉದ್ದಕ್ಕೆ ಪೈಪ್ ಅಳವಡಿಸಿ, ನದಿ ಬದಿಯಲ್ಲಿ 26 ಮೀಟರ್ ಆಳವಾಗಿ ಈ ಪೈಪ್ಲೈನ್ ಕೊಂಡೊಯ್ಯುವ ಸವಾಲಿನ ಕಾಮಗಾರಿ ಇದು.
ಕೈಕೊಟ್ಟ ಡ್ರಿಲ್ಲಿಂಗ್ ಯಂತ್ರ
ಹೊಂಡ ಮಾಡಿ 200 ಮೀಟರ್ ಪೈಪ್ ಹಾಕುವಾಗಲೇ ಯಂತ್ರದಲ್ಲಿ ದೋಷ ಕಾಣಿಸಿಕೊಂಡು ಕೆಲಸ ಅರ್ಧಕ್ಕೇ ಸ್ಥಗಿತಗೊಂಡಿದೆ. ಹಾಗಾಗಿ ಇನ್ನು ಇದಕ್ಕೆ ಪರ್ಯಾಯವೇನು ಎನ್ನುವ ಬಗ್ಗೆ ಗೈಲ್ ಕಂಪೆನಿ ಚಿಂತಿಸುತ್ತಿದೆ.
ಇನ್ನು ಹೆದ್ದಾರಿ ಅರ್ಧವರೆಗೆ ಕುಸಿದಿರುವುದರಿಂದ ಅಲ್ಲಿ ಸದ್ಯ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ದಟ್ಟಣೆಯ ಅವಧಿಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿದೆ.ಹೊಂಡದ ಸುತ್ತ ಬ್ಯಾರಿಕೇಡ್ ಹಾಕಿ ಸದ್ಯಕ್ಕೆ ಸುರಕ್ಷೆ ಕಾಪಾಡಲಾಗಿದೆ.
ಶೀಘ್ರ ಈ ಹೆದ್ದಾರಿ ಕುಸಿತದ ದುರಸ್ತಿ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದಲೇ ಕೈಗೆತ್ತಿಕೊಳ್ಳಲಾ ಗುವುದು, ಅದರ ವೆಚ್ಚವನ್ನು ಗೈಲ್ಗ್ಯಾಸ್ ಸಂಸ್ಥೆ ಭರಿಸಲಿದೆ ಎಂದು ಮೂಲಗಳು ತಿಳಿಸಿವೆ.