ಮಂಗಳೂರು: ಕಳೆದ ಲಾಕ್ ಡೌನ್ ವೇಳೆಯಲ್ಲಿ ಸುಣ್ಣ ಬಣ್ಣ ಬಳಿದುಕೊಂಡು ಸಿಂಗಾರಗೊಂಡಿದ್ದ ಕೂಳೂರು ಕಮಾನು ಸೇತುವೆಯಲ್ಲಿ ಮತ್ತೆ ಗುಂಡಿಗಳದ್ದೇ ರಾಜ್ಯಭಾರ ಎಂಬಂತಾಗಿದೆ. ಇಂದು ಗುಂಡಿಗಳಿಗೆ ಯಥಾಪ್ರಕಾರ ತೇಪೆ ಕಾರ್ಯ ನಡೆಸಲು ಹೆದ್ದಾರಿ ಪ್ರಾಧಿಕಾರ ಮುಂದಾಗಿದ್ದು ಇದರಿಂದ ಮುಂಜಾನೆ ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ಬ್ಲಾಕ್ ಉಂಟಾಗಿತ್ತು. ವಾಹನಗಳು ಪಣಂಬೂರು ತನಕ ಮುಂದಕ್ಕೆ ಚಲಿಸಲಾರದೇ ಬಾಕಿಯಾಗಿದ್ದು ವಾಹನ ಸವಾರರು ಹೈರಾಣಾಗುವಂತಾಯಿತು.
ಕೂಳೂರು ಕಮಾನು ಸೇತುವೆ ಮೇಲಿನ ರಸ್ತೆ ಕೆಲವರ್ಷಗಳ ಹಿಂದೆ ಸಂಪೂರ್ಣ ಹದಗೆಟ್ಟು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ರಸ್ತೆಗೆ ಕಳೆದ ವರ್ಷ ತೇಪೆ ಕಾರ್ಯ ಮಾಡಿದ್ದಲ್ಲದೆ ಮುರಿದ ಸೇತುವೆಯ ಇಕ್ಕೆಲದ ತಡೆಗೋಡೆಗಳಿಗೆ ಸುಣ್ಣ ಬಳಿದು ಉದ್ಘಾಟನೆ ನೆರವೇರಿಸಲಾಗಿತ್ತು. ಸೇತುವೆ ಕಾಮಗಾರಿಗೆಂದು ಹಲವು ತಿಂಗಳುಗಳ ಕಾಲ ರಸ್ತೆಯನ್ನು ಮುಚ್ಚಿ ಹೊಸ ಸೇತುವೆಯಲ್ಲಿ ಒನ್ ವೇ ಕೊಟ್ಟಿದ್ದರಿಂದ ವಾಹನ ಸವಾರರು ಸುಗಮ ಸಂಚಾರಕ್ಕೆ ಪರದಾಡಿದ್ದರು. ಆದರೆ ಇಷ್ಟೆಲ್ಲ ಆಗಿಯೂ ಹಳೇ ಸೇತುವೆಗೆ ಟಚ್ ಅಪ್ ನೀಡಿದ್ದು ಈ ಬಾರಿಯ ಮಳೆಗಾಲಕ್ಕೂ ಮುನ್ನವೇ ರಾಡಿ ಎದ್ದು ಹೋಗಿತ್ತು. ಇಂದು ಮತ್ತೆ ಸೇತುವೆಗೆ ತೇಪೆ ಕಾರ್ಯ ನಡೆಸುತ್ತಿದ್ದು ವಾಹನ ಸವಾರರಿಗೆ ಕಂಟಕ ಎದುರಾಗಿದೆ. ಮುಂಜಾನೆ ಲಾಕ್ ಡೌನ್ ಸಡಿಲಿಕೆ ವೇಳೆ ತುರ್ತು ಕಾರ್ಯಗಳಿಗೆ ಧಾವಿಸುವ ಜನರು ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕಿದರು.
ಇದನ್ನೂ ಓದಿ: ಕಿಮ್ಸ್ ಚಿಕಿತ್ಸಾ ಕೊಠಡಿಯ ಶೌಚಾಲಯದಲ್ಲಿ ಕೋವಿಡ್ ಸೋಂಕಿತ ಆತ್ಮಹತ್ಯೆ
ಲಾಕ್ ಡೌನ್ ಪ್ರಾರಂಭದಲ್ಲೇ ಮಾಡಬಹುದಿತ್ತು!:
ಕೂಳೂರು ಸೇತುವೆಗೆ ತೇಪೆ ಹಚ್ಚಲು ಲಾಕ್ ಡೌನ್ ಮುಗಿಯುವವರೆಗೆ ಕಾಯುವ ಬದಲು ಪ್ರಾರಂಭದಲ್ಲೇ ಮಾಡಬಹುದಿತ್ತು. ಬೆಳಗ್ಗೆ 10 ಗಂಟೆಯ ನಂತರ ವಾಹನ ಸಂಚಾರ ಕಡಿಮೆಯಾಗುತ್ತಿದ್ದು ಈ ವೇಳೆ ಕಾಮಗಾರಿ ನಡೆಸುತ್ತಿದ್ದರೆ ಯಾರಿಗೂ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಬೆಳ್ಳಂಬೆಳಗ್ಗೆ ರಸ್ತೆ ತಡೆ ಮಾಡಿ ಗುಂಡಿ ಮುಚ್ಚಲು ಮುಂದಾಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹೊಸ ಸೇತುವೆ ನಿರ್ಮಾಣ ಕಾಮಗಾರಿ ಕೂಡ ನಿಧಾನಗತಿಯಲ್ಲಿ ಸಾಗುತ್ತಿದ್ದು ಮಳೆಗಾಲ ಮುಗಿಯುವವರೆಗೆ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ. ಒಟ್ಟಾರೆ ಕೂಳೂರು ಸೇತುವೆ ಎಂದರೆ ವಾಹನ ಸವಾರರು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.