ಮಹಾನಗರ: ಮಳೆಗಾಲ ಆರಂಭವಾಗಲು ಕೆಲವೇ ದಿನಗಳಷ್ಟೇ ಬಾಕಿ ಇದ್ದು, ಮಳೆಗಾಲ ಎದುರಿಸಲು ನಗರಪಾಲಿಕೆ ತಯಾರಿ ನಡೆಸುತ್ತಿದ್ದಂತೆ ಕಾಣುತ್ತಿಲ್ಲ. ನಗರದ ಪ್ರಮುಖ ಭಾಗಗಳ ಚರಂಡಿಯ ಹೂಳೆತ್ತುವ ಕೆಲಸ ಇನ್ನೂ ಪೂರ್ಣಗೊಂಡಂತ್ತಿಲ್ಲ.
ಪಾಲಿಕೆ ವ್ಯಾಪ್ತಿಯ ಪಡುಕೋಡಿ ಕೂಳೂರಿನ ಅಮೃತ ನರ್ಸರಿ ಶಾಲೆ ಕ್ರಾಸ್ ರಸ್ತೆಯ ಸಮೀಪದ ತೋಡಿನ ಹೂಳೆತ್ತುವ
ಗೋಜಿಗೆ ಪಾಲಿಕೆ ಹೋಗಿಲ್ಲ. ತೋಡು ಸ್ವಚ್ಛಗೊಳಿಸದ ಪರಿಣಾಮ ಈ ಹಿಂದೆ ಸುರಿದ ಮಳೆಯಿಂದಾಗಿ ರಸ್ತೆಯಲ್ಲಿ ನೀರು ಹರಿದು ಆ ಭಾಗದ ಜನರಿಗೆ ಸಂಕಷ್ಟ ಎದುರಾಗಿತ್ತು. ಸುದಿನದ ಮುಂಗಾರು ಮುಂಜಾಗ್ರತೆ ಅಭಿಯಾನಕ್ಕೆ ಸ್ಪಂದಿಸಿ ರವೀಂದ್ರ ಕುಳೂರು ಅವರು ಆ ಭಾಗದ ತೋಡಿನ ಹೂಳೆತ್ತುವ ಬಗ್ಗೆ ಉದಯವಾಣಿಗೆ ತಿಳಿಸಿದ್ದಾರೆ.
ತೋಡಿನ ಸಮೀಪದಲ್ಲೇ ನರ್ಸರಿ ಸೇರಿದಂತೆ ಕೆಲವು ಮನೆಗಳಿದ್ದು, ತೋಡಿನ ಹೂಳೆತ್ತದೆ ಹೋದಲ್ಲಿ ಮಳೆಗಾಲದಲ್ಲಿ ಮಳೆ ನೀರು ರಸ್ತೆಯಲ್ಲೇ ಹರಿಯುವ ಭೀತಿ ಇದೆ. ರಾಷ್ಟ್ರೀಯ ಹೆದ್ದಾರಿ 66 ಸಮೀಪದಲ್ಲೇ ಇರುವ ತೋಡಿನ ಹೂಳೆತ್ತುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಎಂಬುದು ಸ್ಥಳೀಯರ ವಾದ.