Advertisement

Malenaduನಾಗೋಡಿ ಗ್ರಾಮಸ್ಥರ ಹೃದಯಸ್ಪರ್ಶಿ ಕಾಣಿಕೆ; ವರ್ಗವಾದ ಶಿಕ್ಷಕನಿಗೆ ಬೈಕ್‌ ಉಡುಗೊರೆ!

11:31 PM Jan 14, 2024 | Team Udayavani |

ಸಿದ್ದಾಪುರ: ಮಲೆನಾಡಿನ ಅತ್ಯಂತ ಕುಗ್ರಾಮ, ಸಾಗರ ತಾಲೂಕಿನ ನಾಗೋಡಿಯ ವಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರು ಸೇರಿ ವರ್ಗಾವಣೆಗೊಂಡ ಶಿಕ್ಷಕ ಸಂತೋಷ್‌ ಕಾಂಚನ್‌ ಕೋಟ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಸಂದರ್ಭ ಸುಮಾರು 1.58 ಲಕ್ಷ ರೂ. ಮೌಲ್ಯದ ಬೈಕನ್ನು ಉಡುಗೊರೆಯಾಗಿ ನೀಡಿ ನಿಷ್ಕಲ್ಮಶ ಪ್ರೀತಿಗೆ ಹೊಸ ಭಾಷ್ಯ ಬರೆದ್ದಾರೆ. ಸಂತೋಷ್‌ ಈ ಶಾಲೆಯಲ್ಲಿ 16 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು.

Advertisement

ಈ ಸರಕಾರಿ ಶಾಲೆಯು ಕೊಡಚಾದ್ರಿ ಶ್ರೇಣಿಯ ತಪ್ಪಲಿನಲ್ಲಿ ದಟ್ಟ ಕಾನನದ ಮಧ್ಯೆ ಇದೆ. ರಾತ್ರಿಯಾಯಿತೆಂದರೆ ಕಾಡುಪ್ರಾಣಿಗಳ ಹಾವಳಿ. ಸುಮಾರು 130 ಗ್ರಾಮಸ್ಥರು ಇಲ್ಲಿದ್ದಾರೆ. 1ರಿಂದ 7ನೇ ತರಗತಿ ಇರುವ ಈ ಶಾಲೆಯಲ್ಲಿ ಈಗ ಒಟ್ಟು 13 ವಿದ್ಯಾರ್ಥಿಗಳಿದ್ದಾರೆ. ಶಿಕ್ಷಕ ಸಂತೋಷ್‌ 2007ರಿಂದ ಈ ಶಾಲೆಯನ್ನು ಮುನ್ನಡೆಸಿಕೊಂಡು ಬಂದಿದ್ದು, ಈಗ ಕೌಟುಂಬಿಕ ಕಾರಣಕ್ಕಾಗಿ ಕುಂದಾಪುರ ತಾಲೂಕಿನ ಉಳ್ಳೂರು-74 ಗ್ರಾಮದ ವಾರಾಹಿ ಸ.ಕಿ.ಪ್ರಾ. ಶಾಲೆಗೆ ವರ್ಗಾವಣೆಗೊಂಡಿದ್ದಾರೆ.

ಅಚ್ಚರಿಯ ಬೈಕ್‌ ಉಡುಗೊರೆ
ಹೀಗೊಂದು ಬೀಳ್ಕೊಡುಗೆ ನಡೆಯುತ್ತದೆ ಎಂದು ಸಂತೋಷ್‌ ಅವರಿಗೆ ಗೊತ್ತಿರಲಿಲ್ಲ. ಸಭಾ ಕಾರ್ಯಕ್ರಮ ನಡೆಯುತ್ತಿರುವಾಗ ಹೊಸ ಪಲ್ಸರ್‌ ಬೈಕ್‌ಗೆ ಪೂಜೆ ಮಾಡಿ ಅದನ್ನು ಸಂತೋಷ್‌ ಅವರಿಗೆ ಉಡುಗೊರೆಯಾಗಿ ನೀಡಲಾಯಿತು. ಸಂತೋಷ್‌ ತಮ್ಮ ಕುಟುಂಬದವರನ್ನು, ಊರಿನ ಜನರನ್ನು, ಶಾಲೆಯ ಮಕ್ಕಳನ್ನು ಬೈಕ್‌ ಮೇಲೆ ಕೂರಿಸಿ ಆನಂದಬಾಷ್ಪ ಸುರಿಸಿದರು.

ಕಾಡಿನ ಮಧ್ಯೆ ಇರುವ ಈ ಶಾಲೆಯಲ್ಲಿ ಮೂಲ ಸೌಕರ್ಯಗಳ ಕೊರತೆಯ ನಡುವೆಯೂ ಸಂತೋಷ್‌ ಪ್ರತಿನಿತ್ಯ ರಾತ್ರಿ ಉಳಿದು ಮಕ್ಕಳಿಗೆ ಪಾಠ ಮಾಡಿದ್ದಾರೆ. ಇಲ್ಲಿನ ಜನರದು ಕೂಲಿ ಹಾಗೂ ಕಾಡುತ್ಪತ್ತಿ ಸಂಗ್ರಹಿಸುವ ಬದುಕು. ಇವರಿಗೆ ಅಕ್ಷರ ಕಲಿಸುವುದೇ ಒಂದು ಸವಾಲು. ಸಂತೋಷ್‌ ಅಂತಹ ಮಕ್ಕಳಿಗೆ ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿಸಿದ್ದಾರೆ. ಈ ಶಾಲೆಯ ಮಕ್ಕಳು ಪ್ರತಿಭಾ ಕಾರಂಜಿಯಲ್ಲಿ ಶಿವಮೊಗ್ಗ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು, ಮೂರು ಬಾರಿ ರಾಜ್ಯಮಟ್ಟದ ಇನ್‌ಸ್ಪೈರ್‌ ಪ್ರಶಸ್ತಿ ಪಡೆದಿದ್ದಾರೆ.

ಮುಂದುವರಿದ ರಾತ್ರಿ ವಾಸ್ತವ್ಯ
ಶಿಕ್ಷಕ ಸಂತೋಷ್‌ ಕಾಂಚನ್‌ ಅವರು ವಾರಾಹಿ ಸ.ಕಿ.ಪ್ರಾ. ಶಾಲೆಗೆ ವರ್ಗವಾದ ಮೇಲೆ ವಳೂರು ಶಾಲೆಗೆ ಅವರಂಥ ಶಿಕ್ಷಕಿಯೇ ಲಭಿಸಿದ್ದಾರೆ. ಪ್ರಸ್ತುತ ಶಿಕ್ಷಕಿಯಾಗಿರುವ ನಯನಾ ಶಾಲೆಯಲ್ಲಿಯೇ ವಾಸ್ತವ್ಯ ಇದ್ದು, ದಿನದ 24 ಗಂಟೆಯೂ ಮಕ್ಕಳಿಗೆ ಲಭ್ಯರಿರುತ್ತಾರೆ.

Advertisement

ಆ್ಯಂಬುಲೆನ್ಸ್‌ ಆಗಿತ್ತು ಬೈಕ್‌
ಸಂತೋಷ್‌ 16 ವರ್ಷಗಳ ಹಿಂದೆ ಶಿಕ್ಷಕರಾಗಿ ಇಲ್ಲಿಗೆ ಬಂದಾಗ ಇಡೀ ಊರಿನಲ್ಲಿ ಒಂದೇ ಒಂದು ಬೈಕ್‌ ಇರಲಿಲ್ಲ. ಇಲ್ಲಿಂದ ತಾಲೂಕು ಕೇಂದ್ರವಾದ ಸಾಗರಕ್ಕೆ ತಲುಪಬೇಕಾದರೆ ಸುಮಾರು 80 ಕಿ.ಮೀ., ಶರಾವತಿ ಹಿನ್ನೀರು ದಾಟಿ ಹೋದರೆ ಹೊಸನಗರಕ್ಕೆ 65 ಕಿ.ಮೀ. ಹಾಗೂ ಕೊಲ್ಲೂರಿಗೆ 15 ಕಿ.ಮೀ. ಆಗುತ್ತದೆ. ಊರಿನ ಜನರು ಮತ್ತು ಮಕ್ಕಳು ಅನಾರೋಗ್ಯಕ್ಕೆ ತುತ್ತಾದರೆ ಸಂತೋಷ್‌ ಹಗಲು ರಾತ್ರಿ ಎನ್ನದೇ ಸ್ವಂತ ಬೈಕಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಊರಿನ ಜನರು ಶಿಕ್ಷಕರ ಬೈಕನ್ನು “ಆ್ಯಂಬುಲೆನ್ಸ್‌’ ಎಂದೇ ಕರೆಯುತ್ತಿದ್ದರು.

ವಳೂರು ಶಾಲೆಯಲ್ಲಿ 16 ವರ್ಷ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದೇನೆ. ಇಲ್ಲಿನ ಮಕ್ಕಳ ಮತ್ತು ಗ್ರಾಮಸ್ಥರ ಪ್ರೀತಿಗೆ ಚಿರಋಣಿ.
-ಸಂತೋಷ್‌ ಕಾಂಚನ್‌, ಶಿಕ್ಷಕ

Advertisement

Udayavani is now on Telegram. Click here to join our channel and stay updated with the latest news.

Next