Advertisement

ಹ್ಯಾಟ್ರಿಕ್‌ ಹೀರೋ ಜೋಶಿಗೆ ಕುಲಕರ್ಣಿ ಸವಾಲ್‌

03:31 AM Apr 14, 2019 | Team Udayavani |

ಧಾರವಾಡ: ಜಿಲ್ಲೆಯಲ್ಲಿ ಇದೀಗ ಲೋಕಸಭೆ ಚುನಾವಣೆ ಕಾವೇರಿದ್ದು ಕೈ-ಕಮಲದ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿರುವ ಹ್ಯಾಟ್ರಿಕ್‌ ಹೀರೋ ಪ್ರಹ್ಲಾದ ಜೋಶಿ ವಿರುದ್ಧ ಕಾಂಗ್ರೆಸ್‌ನಿಂದ ಸಾಂಪ್ರದಾಯಿಕ ಎದುರಾಳಿ ವಿನಯ್‌ ಕುಲಕರ್ಣಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ತೊಡೆ ತಟ್ಟಿದ್ದು, ಇಬ್ಬರ ಮಧ್ಯೆ ಕಳೆದ ಬಾರಿಗಿಂತಲೂ ಸ್ಪರ್ಧೆ ಬಿರುಸಾಗಿದೆ.

Advertisement

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 1996ರಿಂದ ಕಮಲ ಅರಳುತ್ತಿದ್ದು, ಕಳೆದ 23 ವರ್ಷಗಳಿಂದ ಕಮಲದ ಭದ್ರಕೋಟೆಯಾಗಿದೆ. ಆದರೆ, ಈ ಬಾರಿ ಜೋಶಿ ಮತ್ತು ಕುಲಕರ್ಣಿ ಮಧ್ಯೆ ಜಿದ್ದಾಜಿದ್ದಿ ಆರಂಭವಾಗಿದೆ. 1952ರಿಂದ ಈವರೆಗೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಸಮಬಲದಲ್ಲಿ ಗೆಲುವು ಸಾಧಿಸಿದಂತಿದೆ.

90ರ ದಶಕದಲ್ಲಿ ಆರಂಭಗೊಂಡ ಈದ್ಗಾ ಮೈದಾನ ಗಲಾಟೆಯ ನಂತರ ಈ ಕ್ಷೇತ್ರ ಸತತ ಬಿಜೆಪಿಗೆ ಒಲಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಮೊದಲಿನಿಂದಲೂ ಪ್ರಬಲವಾಗಿಯೇ ಇದ್ದು, ಈ ಬಾರಿ ಮೋದಿ ಅಭಿವೃದ್ಧಿ ಕಾರ್ಯಗಳನ್ನು ಸಂಸದ ಜೋಶಿ ಮೆಲುಕು ಹಾಕಿ ಮತ ಪಡೆವ ಪ್ರಯತ್ನ ಮಾಡುತ್ತಿದ್ದಾರೆ.

ಆದರೆ ಸಂಸದ ಜೋಶಿ ಅವರಿಗೆ ಟಾಂಗ್‌ ಕೊಡಲು ಈ ಬಾರಿ ಕಾಂಗ್ರೆಸ್‌ ಪ್ರಬಲ ಲಿಂಗಾಯತ ಸಮುದಾಯದ ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರಿಗೆ ಟಿಕೆಟ್‌ ನೀಡಿದೆ. ಸಚಿವರಾಗಿದ್ದಾಗ ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸ ಮತ್ತು ಜೋಶಿಗೆ ಮೂರು ಬಾರಿ ಗೆಲ್ಲಿಸಿದ್ದೀರಿ, ಇದೊಂದು ಬಾರಿ ನನಗೆ ಅವಕಾಶ ಕೊಡಿ ಎನ್ನುತ್ತಿದ್ದಾರೆ ವಿನಯ್‌.

ಅಲ್ಪಸಂಖ್ಯಾತರಿಗೆ ಇಲ್ಲಿ ಟಿಕೆಟ್‌ ನೀಡಬೇಕು ಎನ್ನುವ ಗೊಂದಲದ ಮಧ್ಯೆಯೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಈ ಬಾರಿ ಜೋಶಿ ಅವರಿಗೆ ಬಿಸಿ ಮುಟ್ಟಿಸುವುದಾಗಿ ಬಹಿರಂಗವಾಗಿಯೇ ಸವಾಲು ಹಾಕಿವೆ. ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷದಲ್ಲಿ ಬಂಡಾಯವಿರುವುದು ಬಹಿರಂಗ ಸತ್ಯ. ಸಂಸದ ಜೋಶಿ ಅವರ ಏಕಪಕ್ಷೀಯ ನಡೆ ಮತ್ತು ಹೈಕಮಾಂಡ್‌ ಪ್ರಭಾವಕ್ಕೆ ಕೆಲವು ಸ್ಥಳೀಯ ನಾಯಕರು ಬೇಸತ್ತಿದ್ದಾರೆ.

Advertisement

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಗದೀಶ ಶೆಟ್ಟರ್‌ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಮಹೇಶ ನಾಲವಾಡ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವುದಕ್ಕೆ ಆಂತರಿಕ ಅಸಮಾಧಾನ ಉಂಟಾಗಿದೆ. ಇನ್ನು ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಿಲ್ಲ ಎನ್ನುವ ಕಾರಣಕ್ಕೆ ಬಂಡಾಯ ಬೂದಿ ಮುಚ್ಚಿದ ಕೆಂಡದಂತಿದೆ.

ಇದರ ಪರಿಣಾಮವೂ ಚುನಾವಣೆ ನಂತರವೇ ತಿಳಿಯಲಿದೆ. 2014ರಲ್ಲಿ ಬಿಜೆಪಿಯ ಪ್ರಹ್ಲಾದ ಜೋಶಿ 5,45,935 ಮತ ಪಡೆದರೆ, ಕಾಂಗ್ರೆಸ್‌ನ ವಿನಯ ಕುಲಕರ್ಣಿ 4,31,738 ಮತ ಪಡೆದಿದ್ದರು. ಜೆಡಿಎಸ್‌ ಅಭ್ಯರ್ಥಿ ಬಂಕಾಪುರ ಹನುಮಂತಪ್ಪ ಮಲ್ಲಪ್ಪ 8,836 ಮತ ಪಡೆದಿದ್ದರು.

ನಿರ್ಣಾಯಕ ಅಂಶ: ಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯತ ಮತಗಳೇ ಈ ಕ್ಷೇತ್ರದ ಗೆಲುವು ಯಾರದು ಎಂಬುದನ್ನು ನಿರ್ಧರಿಸುತ್ತ ಬಂದಿವೆ. ಅಷ್ಟೇಯಲ್ಲ, ಈ ಕ್ಷೇತ್ರದಲ್ಲಿ ಬಿಜೆಪಿ ಬೆನ್ನೆಲುಬೇ ಲಿಂಗಾಯತರು. 16 ಲಕ್ಷದಲ್ಲಿ 6.5 ಲಕ್ಷ ಲಿಂಗಾಯತರೇ ಇರುವುದರಿಂದ ಕಾಂಗ್ರೆಸ್‌ ಈ ಬಾರಿ ವಿನಯ ಅವರನ್ನು ಕಣಕ್ಕಿಳಿಸಿದೆ.

ಈಗಾಗಲೇ ಅಹಿಂದ ಮತಗಳು ಕಾಂಗ್ರೆಸ್‌ ಜೊತೆ ಇದ್ದೇ ಇವೆ. ಇದಕ್ಕೆ ಶೇ.50ರಷ್ಟು ಲಿಂಗಾಯತರು ಕೈ ಜೋಡಿಸಿದರೆ ಸಾಕು ಗೆಲುವು ನಮ್ಮದೇ ಎನ್ನುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಇದೆ. ಅದೂ ಅಲ್ಲದೇ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಸಂದರ್ಭದಲ್ಲಿ ಮುನಿಸಿಕೊಂಡ ವೀರಶೈವರನ್ನು ಕೈ ನಾಯಕರು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿರುವುದು ಲಾಭವಾಗಲಿದೆ.

ಕ್ಷೇತ್ರ ವ್ಯಾಪ್ತಿ ಎಷ್ಟು?: ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರವೂ ಸೇರ್ಪಡೆಗೊಂಡಿದೆ. ಎಂಟು ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಪೌರಾಡಳಿತ ಸಚಿವರಾಗಿದ್ದ ಕುಂದಗೋಳ ಶಾಸಕ ಸಿ.ಎಸ್‌.ಶಿವಳ್ಳಿ ನಿಧನರಾಗಿದ್ದು, ಕಳೆದ ಚುನಾವಣೆಯಲ್ಲಿ ಜಿಲ್ಲೆಯ ಪೈಕಿ ನವಲಗುಂದ ಕ್ಷೇತ್ರದಿಂದ ಆಯ್ಕೆಯಾಗಿದ್ದ ಜೆಡಿಎಸ್‌ ಈ ಬಾರಿ ಜಿಲ್ಲೆಯ ಯಾವ ಕ್ಷೇತ್ರದಲ್ಲೂ ಗೆದ್ದಿಲ್ಲ.

ಮತದಾರರ ವಿವರ
ಒಟ್ಟು ಮತದಾರರು: 16,88,067
ಪುರುಷ ಮತದಾರರು: 8,58,370
ಮಹಿಳಾ ಮತದಾರರು: 8,29,697

ಜಾತಿ ಲೆಕ್ಕಾಚಾರ ಹೇಗಿದೆ?
ಲಿಂಗಾಯತರು: 6,50,000
ಮುಸ್ಲಿಮರು: 3,00,000
ಎಸ್ಸಿ-ಎಸ್‌ಟಿ: 2,50,000
ಮರಾಠರು: 1,00,000
ಕುರುಬರು: 1,00,000
ಪಟೇಗಾರ (ಎಸ್‌ಎಸ್‌ಕೆ): 50,000
ಕ್ರಿಶ್ಚಿಯನ್‌: 50,000
ಇತರೆ: 1.80,000

* ಬಸವರಾಜ್‌ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next