ಕುಳಗೇರಿ ಕ್ರಾಸ್: ಇಲ್ಲಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಸಾರಿಗೆ ಬಸ್ ಪ್ರಾಥಮಿಕ ಆರೋಗ್ಯ ಕೇಂದ್ರ ಬಳಿ ನಿಲ್ಲಿಸುತ್ತಿಲ್ಲ ಎಂದು ಖಾನಾಪೂರ ಎಸ್‌ಕೆ ಗ್ರಾಮ ಸೇರಿದಂತೆ ಸುತ್ತ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಬಸ್‌ಗಳನ್ನ ನಿಲ್ಲಿಸಿ ದಿಢೀರ್ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಪಂ ಸದಸ್ಯ ಶೇಖಪ್ಪ ಪವಾಡಿನಾಯ್ಕರ್ ನಮ್ಮ ಗ್ರಾಮಸ್ಥರು ಬಸ್ ನಿಲುಗಡೆಗಾಗಿ ಸುಮಾರು ನಾಲ್ಕೈದು ವರ್ಷಗಳಿಂದ ಹೋರಾಡುತ್ತಿದ್ದಾರೆ. ಬಸ್ ನಿಲ್ಲಿಸುವಂತೆ ಸಾರಿಗೆ ಅಧಿಕಾರಿಗಳು ಆದೇಶ ಮಾಡಿದ್ದಾರೆ ಆದರೂ ಬಸ್ ಚಾಲಕರು ಪ್ರಯಾಣಿಕರ ಜೊತೆ ಸಹಕರಿಸದೆ ಬಸ್ ನಿಲ್ಲಿಸದೇ ತೆರಳುತ್ತಿದ್ದಾರೆ. ಈ ಕುರಿತು ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದೇವೆ ಆದರೂ ಏನೂ ಪ್ರಯೋಜನವಾಗಿಲ್ಲ ಎಂದು ಆರೋಪಗಳ ಸುರಿಮಳೆ ಸುರಿಸಿದರು.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರು ಮನವೊಲಿಕೆಗೆ ಎಷ್ಟೇ ಪ್ರಯತ್ನಿಸಿದರೂ ಒಪ್ಪದ ಗ್ರಾಮಸ್ಥರು ಬಸ್ ನಿಲ್ಲಿಸುವವರೆಗೂ ನಮ್ಮ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ದಿಢೀರ್ ಪ್ರತಿಭಟನೆ ಕೈಗೊಂಡಿದ್ದರಿಂದ ನೂರಾರು ವಾಹನಗಳು ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಲ್ಲತೊಡಗಿದವು ಪ್ರಯಾಣಿಕರು ತೊಂದರೆ ಅನುಭವಿಸಿದರು. ವಿಕೋಪಕ್ಕೆ ಹೋಗುವುದನ್ನ ಗಮನಿಸಿದ ಪೊಲೀಸರು ಮೇಲಾಧಿಕಾರಿಗಳ ಗಮನಕ್ಕೆ ತಂದರು.
ನಂತರ ಸ್ಥಳಕ್ಕೆ ಆಗಮಿಸಿದ ಬಾದಾಮಿ ಪಿಎಸ್‌ಐ ವಿಠಲ್ ನಾಯಕ್ ಪ್ರತಿಭಟನಾಕಾರರನ್ನು ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಗ್ರಾಮಸ್ಥರ ಜೊತೆ ಮಾತನಾಡಿ ತೊಂದರೆಗಳನ್ನ ಆಲಿಸಿದರು. ಡಿಪೋ ಮ್ಯಾನೇಜರ್ ಜೊತೆ ಮಾತನಾಡಿ ಇಲ್ಲಿ ಆರೋಗ್ಯ ಕೇಂದ್ರ ಇರುವುದರಿಂದ ರೋಗಿಗಳಿಗೆ ತೊಂದರೆಯಾಗುತ್ತದೆ ತಾವು ಬಸ್ ನಿಲ್ಲಿಸುವಂತೆ ಕ್ರಮಕೈಗೊಳ್ಳಬೇಕು ಎಂದು ತಿಳಿಹೇಳಿದರು.
ಅದಕ್ಕೆ ಸ್ಪಂದಿಸಿದ ಡಿಪೋಮ್ಯಾನೇಜರ್ ನಮ್ಮ ಜಿಲ್ಲೆಯ ಘಟಕಗಳಿಂದ ಬರುವ ಎಲ್ಲ ಬಸ್ ನಿಲ್ಲಿಸುವಂತೆ ಇಂದಿನಿಂದಲೇ ಆದೇಶಿಸುತ್ತಿದ್ದೇನೆ ಎಂದು ಹೇಳಿದರು
ಪ್ರತಿಭಟನೆಗೆ ಕಾರಣ: ಹೆರಿಗೆಗಾಗಿ ಆಸ್ಪತ್ರೆಗೆ ಬರುತ್ತಿದ್ದ ಮಹಿಳೆಯೊಬ್ಬರು ಎಷ್ಟೇ ಅಂಗಲಾಚಿ ಬೇಡಿಕೊಂಡರು ಸಾರಿಗೆ ಬಸ್ ಚಾಲಕ ನಿಲ್ಲಿಸಿಲ್ಲ. ದಾರಿಯಲ್ಲೇ ಆ ಮಹಿಳೆಯ ಹೆರಿಗೆಯಾಯಿತು ಎನ್ನಲಾಗುತ್ತಿದೆ.