ಕುಳಗೇರಿ ಕ್ರಾಸ್: ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಹೆಚ್ಚುತ್ತಿದ್ದು, ನೀರಿನ ಒಳ ಹರಿವು ಸಹ ಅಧಿಕವಾಗುತ್ತಿದೆ. ಕ್ಷಣ ಕ್ಷಣಕ್ಕೂ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ ಜಲಾಶಯಕ್ಕೆ ಬಂದು ಸಂಗ್ರಹವಾಗುವ ಸಂಪೂರ್ಣ ನೀರು ಹೊರಬಿಡಲಾಗುತ್ತಿದ್ದು, ನದಿ ಪಾತ್ರದ ಗ್ರಾಮಗಳಿಗೆ ಪ್ರವಾಹದ ಭೀತಿ ಮತ್ತಷ್ಟು ಹೆಚ್ಚುತ್ತಿದೆ.
ಮಲಪ್ರಭಾ ನದಿ ಪಾತ್ರ ಸೇರಿದಂತೆ ಕುಳಗೇರಿ ಹೋಬಳಿ ಸುತ್ತ ಗ್ರಾಮಗಳಲ್ಲಿ ಮಳೆ ಇಲ್ಲ. ಆದರೆ, ಪ್ರವಾಹದ ಆತಂಕ ಹೆಚ್ಚಾಗುತ್ತಿದೆ. 12 ಸಾವಿರ ಕ್ಯೂಸೆಕ್ ನೀರು ಬಂದು ಆತಂಕ ಹೆಚ್ಚಿಸಿದ್ದು ಸದ್ಯ ಗುರುವಾರ ಮಧ್ಯಾಹ್ನ ಹರಿಬಿಡಲಾದ 15 ಸಾವಿರ ಕ್ಯೂಸೆಕ್‌ನಿಂದ ರೆೈತರ ಜಮಿನಿನಲ್ಲಿ ನೀರು ನುಗ್ಗಿದ್ದು ಬೆಳೆಗಳು ನೀರು ಪಾಲಾಗಿವೆ.
ಅಲ್ಲದೇ ಸುಮಾರು ಗ್ರಾಮಗಳಿಗೆ ಬಂದು ತಲುಪಿದೆ. ಸದ್ಯ ಕೆಲವು ಗ್ರಾಮಗಳಲ್ಲಿ ನೀರು ಸುತ್ತುವರೆಯುತ್ತಿದ್ದು, ಪ್ರವಾಹ ಪರಿಸ್ಥಿತಿ ಇನ್ನೂ ಹೆಚ್ಚಾಗಲಿದೆ.
ಎಚ್ಚರಿಕೆ ನೀಡಿದರೂ ಅರಿಯದ ಜನ: ಪ್ರವಾಹ ಹೆಚ್ಚುತ್ತಿದ್ದಂತೆ ಪೊಲೀಸರು ಜಲಾವೃತಗೊಂಡ ರಸ್ತೆಗಳನ್ನ ಸೇತುವೆಗಳನ್ನ ಮುಳ್ಳು-ಕಂಠಿ ಬಡಿದು ತಡೆದಿದ್ದಾರೆ ಆದರೂ ಪ್ರವಾಹದ ನೀರು ನೋಡಲು ಮಕ್ಕಳು ಮಹಿಳೆಯರು ನದಿ ತೀರದಲ್ಲಿ ಹೆಚ್ಚಿತ್ತಿದ್ದಾರೆ. ಜಿಲ್ಲಾಧಿಕಾರಿ ಜಾನಕಿ ಕೆಎಂ ಸಾಕಷ್ಟು ಎಚ್ಚರಿಕೆ ನೀಡಿದರೂ ಜನ ಮಾತ್ರ ಕ್ಯಾರೆ ಎನ್ನುತ್ತಿಲ್ಲ.
ಮಲಪ್ರಭಾ ಪ್ರವಾಹದ ನೀರು ಹೆಚ್ಚಿತ್ತಿದ್ದು ನದಿ ಪಾತ್ರದಲ್ಲಿ ಯಾರೂ ಹೋಗದಂತೆ ಬಾದಾಮಿ ತಹಶೀಲ್ದಾರ್ ಜೆ ಬಿ ಮಜ್ಜಗಿ ನದಿ ಪಾತ್ರದ ಜನರಲ್ಲಿ ಮನವಿ ಮಾಡಿದ್ದಾರೆ.