ದುಬಾೖ: ವೆಸ್ಟ್ ಇಂಡೀಸ್ ಎದುರಿನ ಟಿ20 ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡ ಭಾರತ, ತಂಡ ರ್‍ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನ ಕಾಯ್ದುಕೊಂಡಿದೆ. ಆದರೆ ಬ್ಯಾಟಿಂಗ್ ಮತ್ತು ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ರೋಹಿತ್ ಶರ್ಮ, ಕುಲದೀಪ್ ಯಾದವ್ ಪ್ರಗತಿ ಸಾಧಿಸಿದ್ದಾರೆ.
ಮೊದಲೆರಡು ಪಂದ್ಯಗಳಲ್ಲಿ ಆಡಿದ್ದ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಕೋಲ್ಕತಾ ಪಂದ್ಯದ ಗೆಲುವಿನ ಹೀರೋ ಆಗಿ ಮೂಡಿಬಂದಿದ್ದರು. 2 ಪಂದ್ಯಗಳಿಂದ 5 ವಿಕೆಟ್ ಕಿತ್ತ ಸಾಧನೆಯಿಂದ ಅವರು ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ 14 ಸ್ಥಾನ ಮೇಲೇರಿದ್ದು, 23ನೇ ಸ್ಥಾನಕ್ಕೆ ಬಂದಿದ್ದಾರೆ.
ಭುವನೇಶ್ವರ್ ಕುಮಾರ್ ಮತ್ತು ಜಸ್‌ಪ್ರೀತ್ ಬುಮ್ರಾ ಕ್ರಮವಾಗಿ 9 ಹಾಗೂ 5 ಸ್ಥಾನ ಮೇಲೇರಿದ್ದು, 19ನೇ ಹಾಗೂ 21ನೇ ರ್‍ಯಾಂಕಿಂಗ್ ಹೊಂದಿದ್ದಾರೆ. ಯಜುವೇಂದ್ರ ಚಾಹಲ್ ಭಾರತದ ಅಗ್ರಮಾನ್ಯ ಬೌಲರ್ ಆಗಿದ್ದು, 4ನೇ ಸ್ಥಾನದಲ್ಲಿದ್ದಾರೆ.
ಉಸ್ತುವಾರಿ ನಾಯಕ ರೋಹಿತ್ ಶರ್ಮ ಲಕ್ನೋದಲ್ಲಿ ಶತಕ ಸಿಡಿಸಿ ಸುದ್ದಿಯಾಗಿದ್ದರು. ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ 10ನೇ ಸ್ಥಾನದಲ್ಲಿದ್ದ ಅವರೀಗ 7ಕ್ಕೆ ಏರಿದ್ದಾರೆ. ಕೊನೆಯ ಪಂದ್ಯದಲ್ಲಿ ಮಿಂಚಿದ ಶಿಖರ್ ಧವನ್ ಅವರದು 5 ಸ್ಥಾನಗಳ ಪ್ರಗತಿ. ಅವರೀಗ 16ನೇ ಸ್ಥಾನ ತಲುಪಿದ್ದಾರೆ. ಸರಣಿಯಿಂದ ಹೊರಗುಳಿದ ವಿರಾಟ್ ಕೊಹ್ಲಿ 2 ಸ್ಥಾನ ಕುಸಿದು 14ಕ್ಕೆ ಇಳಿದಿದ್ದಾರೆ.
ಪಾಕ್ ನಂ.1, ಭಾರತ ನಂ.2
ಟೀಮ್ ರ್‍ಯಾಂಕಿಂಗ್‌ನಲ್ಲಿ ಭಾರತ ದ್ವಿತೀಯ ಸ್ಥಾನದಲ್ಲೇ ಮುಂದುವರಿದಿದೆ. ಪಾಕಿಸ್ಥಾನ ಅಗ್ರಸ್ಥಾನ ಕಾಯ್ದುಕೊಂಡಿದೆ. ಈ ಗೆಲುವಿನಿಂದ ಭಾರತಕ್ಕೆ 3 ಅಂಕ ಲಭಿಸಿತು. ಇದಕ್ಕೂ ಮುನ್ನ ಪಾಕಿಸ್ಥಾನ ತಂಡ ನ್ಯೂಜಿಲ್ಯಾಂಡಿಗೆ 3-0 ವೈಟ್‌ವಾಶ್ ಮಾಡಿ 2 ಅಂಕ ಗಳಿಸಿತ್ತು. ಪಾಕಿಸ್ಥಾನ 138, ಭಾರತ 127 ಅಂಕಗಳನ್ನು ಹೊಂದಿವೆ.