ನವದೆಹಲಿ:ಹರ್ಯಾಣದ ಮಾಜಿ ಕಾಂಗ್ರೆಸ್ ಮುಖಂಡ ಕುಲ್ ದೀಪ್ ಬಿಷ್ಣೋಯಿ ಗುರುವಾರ (ಆಗಸ್ಟ್ 04) ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದ ನಂತರ ಬಿಷ್ಣೋಯಿ ಬಿಜೆಪಿ ಸೇರ್ಪಡೆಗೆ ನಿರ್ಧರಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ನ್ಯಾಷನಲ್ ಹೆರಾಲ್ಡ್ ಕೇಸ್: ಅಮಾಯಕರಾಗಿದ್ರೆ ಭಯ ಪಡುತ್ತಿರುವುದೇಕೆ? ಕಾಂಗ್ರೆಸ್ ಗೆ ಬಿಜೆಪಿ
ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಬಿಜೆಪಿ ಪಕ್ಷದ ಇತರ ಮುಖಂಡರ ಸಮ್ಮುಖದಲ್ಲಿ ಬಿಷ್ಣೋಯಿ ಮತ್ತು ಪತ್ನಿ ರೇಣುಕಾ ಬಿಷ್ಣೋಯಿ ಬಿಜೆಪಿಗೆ ಸೇರ್ಪಡೆಗೊಂಡರು.
“ಬಿಜೆಪಿಗೆ ಸೇರ್ಪಡೆಗೊಂಡ ನಂತರ ಮಾತನಾಡಿದ ಬಿಷ್ಣೋಯಿ, ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಪ್ರಧಾನಿಯಾಗಿದ್ದು, ಅವರು ಯಾವಾಗಲೂ ದೇಶದ ಕುರಿತು ಹಾಗೂ ಬಡವರ ಏಳಿಗೆ ಕುರಿತು ಚಿಂತಿಸುತ್ತಾರೆ ಎಂದು ಹೇಳಿದರು.
ಸತತ ಎಂಟು ವರ್ಷಗಳಿಂದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿರುವ ಖಟ್ಟರ್ ಅವರ ಕಾರ್ಯವೈಖರಿಯನ್ನು ಬಿಷ್ಣೋಯಿ ಹೊಗಳಿದರು. ಬಿಷ್ಣೋಯಿ ಅವರು ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗುವ ಸಾಧ್ಯತೆ ಇರುವುದಾಗಿ ವರದಿ ತಿಳಿಸಿದೆ.
ಜುಲೈನಲ್ಲಿ ಬಿಷ್ಣೋಯಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಸಂಸದರಾಗಿದ್ದ ಬಿಷ್ಣೋಯಿ ಅವರನ್ನು ಕಾಂಗ್ರೆಸ್ ಪಕ್ಷ ಉಚ್ಛಾಟಿಸಿತ್ತು.