ಇಸ್ಲಾಮಾಬಾದ್: ಗೂಢಚಾರಿಕೆ ಮತ್ತು ಭಯೋತ್ಪಾದಕ ಕೃತ್ಯಗಳ ಆರೋಪವನ್ನು ಹೊರಿಸಿ ಪಾಕಿಸ್ತಾನಿ ಮಿಲಿಟರಿಯಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ಅವರನ್ನು ಇಂದು ಡೆಪ್ಯುಟಿ ಹೈ ಕಮಿಷನರ್ ಗೌರವ್ ಅಹ್ಲುವಾಲಿಯಾ ಅವರು ಪಾಕಿಸ್ತಾನದ ಜೈಲಿನಲ್ಲಿ ಭೇಟಿಯಾದರು.
ಈ ಸಂದರ್ಭದಲ್ಲಿ ಕುಲಭೂಷಣ್ ಅವರು ಪಾಕಿಸ್ತಾನಿ ಅಧಿಕಾರಿಗಳು ಹೆಳಿಕೊಟ್ಟಿರುವ ರೀತಿಯಲ್ಲೇ ಮಾತನಾಡಬೇಕಾದ ಒತ್ತಡದಲ್ಲಿದ್ದರು ಎಂದು ಭಾರತೀಯ ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅಹ್ಲುವಾಲಿಯಾ ಅವರ ಭೇಟಿಯ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಾಗಿದೆ.
ಜಾಧವ್ ಅವರ ಮೇಲೆ ಒತ್ತಡ ಹೇರಿರುವುದು ಸ್ಪಷ್ಟವಾಗಿದೆ. ಭೇಟಿಯ ಕುರಿತಾಗಿರುವ ವಿಸ್ತೃತ ವರದಿ ಇನ್ನಷ್ಟೇ ಕೈಸೇರಬೇಕಾಗಿದೆ. ಆದರೆ ಪಾಕಿಸ್ತಾನದ ಸುಳ್ಳು ಸಾಬೀತಿಗೆ ಜಾಧವ್ ಅವರು ಧ್ವನಿಯಾಗಬೇಕಾಗಿದ್ದ ಒತ್ತಡ ಅವರಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ತಿಳಿಸಿದ್ದಾರೆ.
ಈ ಭೇಟಿಯ ವಿಸ್ತೃತ ವರದಿ ನಮ್ಮ ಕೈ ಸೇರಿದ ಬಳಿಕ ನಮ್ಮ ಮುಂದಿನ ನಡೆಯ ಬಗ್ಗೆ ನಿರ್ಧರಿಸಲಿದ್ದೇವೆ ಮತ್ತು ಅಂತಾರಾಷ್ಟ್ರೀಯ ನ್ಯಾಯಾಲಯದ ಮುಂದೆ ಮೇಲ್ಮನವಿ ಸಲ್ಲಿಸುವ ಕುರಿತಾಗಿ ಆ ಬಳಿಕ ನಿರ್ಧರಿಸಲಾಗುವುದು ಎಂದು ರವೀಶ್ ಕುಮಾರ್ ಅವರು ತಿಳಿಸಿದರು.
ಜುಲೈ 17ರಂದು ಅಂತಾರಾಷ್ಟ್ರೀಯ ನ್ಯಾಯಾಲಯವು ಕುಲಭೂಷಣ್ ಜಾಧವ್ ಅವರನ್ನು ಭೇಟಿಯಾಗಲು ಭಾರತದ ರಾಜತಾಂತ್ರಿಕ ನಿಯೋಗಕ್ಕೆ ಅವಕಾಶ ನೀಡಬೇಕು ಎಂದು ಆದೇಶ ನೀಡಿತ್ತು ಮತ್ತು ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನ 1963ರ ವಿಯೆನ್ನಾ ಒಪ್ಪಂದವನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ ಎಂದು ಈ ನ್ಯಾಯಾಲವು ಸರ್ವಾನುಮತದಿಂದ ಅಭಿಪ್ರಾಯಪಟ್ಟಿತ್ತು.