ಹೊಸದಿಲ್ಲಿ : ಕುಲಭೂಷಣ್ ಜಾಧವ್ ಅವರಿಗೆ ಇದೇ ಡಿ.25ರಂದು ತಾನಿರುವ ಜೈಲಿನಲ್ಲಿ ತನ್ನ ತಾಯಿ ಮತ್ತು ಪತ್ನಿಯನ್ನು ಭೇಟಿಯಾಗುವುದಕ್ಕೆ ಪಾಕಿಸ್ಥಾನ ಇಂದು ಶುಕ್ರವಾರ ಅನುಮತಿ ನೀಡಿದೆ.
“ಪಾಕ್ ಸರಕಾರ ಕುಲಭೂಷಣ್ ಜಾಧವ್ ಅವರಿಗೆ ತನ್ನ ತಾಯಿ ಮತ್ತು ಪತ್ನಿಯನ್ನು ಭೇಟಿ ಮಾಡುವುದಕ್ಕೆ ಅನುಮತಿ ನೀಡಿದೆ. ನಾನು ಜಾಧವ್ ಅವರ ಪತ್ನಿ ಆವಂತಿಕಾ ಜಾಧವ್ ಮತ್ತು ತಾಯಿಗೆ ಈ ವಿಷಯವನ್ನು ತಿಳಿಸಿದ್ದೇನೆ’ ಎಂದು ಈ ನಡುವೆ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅವರು ಟ್ವಿಟರ್‌ನಲ್ಲಿ ಹೇಳಿದ್ದಾರೆ.
ಭಾರತೀಯ ಬೇಹುಗಾರನೆಂಬ ಆರೋಪದ ಮೇಲೆ ಬಂಧಿಸಲ್ಪಟ್ಟಿರುವ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ಥಾನದ ಮಿಲಿಟರಿ ಕೋರ್ಟ್ ಮರಣ ದಂಡನೆಯ ಶಿಕ್ಷೆಯನ್ನು ವಿಧಿಸಿತ್ತು.
“ಪಾಕ್ ಸರಕಾರ ಈ ಮೊದಲು ಕುಲಭೂಷಣ್ ಜಾಧವ್ ಅವರ ಪತ್ನಿಗೆ ಮಾತ್ರವೇ ವೀಸಾ ನೀಡಲು ಒಪ್ಪಿಕೊಂಡಿತ್ತು. ಆದರೆ ಆತನ ತಾಯಿಗೂ ವೀಸಾ ನೀಡಬೇಕೆಂದು ನಾವು ಕೋರಿದ್ದೆವು. ಮಾತ್ರವಲ್ಲದೆ ಜಾಧವ್ ಅವರ ಪತ್ನಿ ಮತ್ತು ತಾಯಿಯ ಸುರಕ್ಷೆ ಮತ್ತು ಭದ್ರತೆಯ ಬಗ್ಗೆಯೂ ನಾವು ಕಳವಳ ವ್ಯಕ್ತಪಡಿಸಿದ್ದೆವು’ ಎಂದು ಸಚಿವೆ ಸುಶ್ಮಾ ಸ್ವರಾಜ್ ಹೇಳಿದರು.
ಕಳೆದ ವರ್ಷ ಮಾರ್ಚ್ 3ರಂದು ಪ್ರಕ್ಷುಬ್ಧ ಬಲೂಚಿಸ್ಥಾನ ಪ್ರಾಂತ್ಯದಲ್ಲಿ ಭಾರತೀಯ ಬೇಹುಗಾರನೆಂದು ಬಂಧಿಸಲ್ಪಟ್ಟು ಬಳಿಕ ಪಾಕ್ ಮಿಲಿಟರಿ ಕೋರ್ಟಿನಿಂದ ಮರಣ ದಂಡನೆ ವಿಧಿಸಲ್ಪಟ್ಟಿದ್ದ ಕುಲಭೂಷಣ್ ಯಾದವ್ ಅವರ ನೇಣು ಶಿಕ್ಷೆ ಜಾರಿಗೆ 10 ಸದಸ್ಯರ ಐಸಿಜೆ ಪೀಠ ಈ ವರ್ಷ ಮೇ 18ರಂದು ತಡೆಯಾಜ್ಞೆ ನೀಡಿತ್ತು.