Advertisement

ಕುಲಾಲ ಸಂಘ ಮುಂಬಯಿ : ವಾರ್ಷಿಕ ಶೈಕ್ಷಣಿಕ ನೆರವು ವಿತರಣೆ

04:55 PM Jul 08, 2018 | |

ಮುಂಬಯಿ: ಕುಲಾಲ ಸಮಾಜದ ವಿದ್ಯಾರ್ಥಿಗಳು ಇತ್ತೀಚೆಗಿನ ವರ್ಷಗಳಲ್ಲಿ ಶಿಕ್ಷಣದ ಬಗ್ಗೆ ಹೆಚ್ಚಿನ ನಿಗಾ ವಹಿಸುತ್ತಾ ಎಲ್ಲಾ ಶೈಕ್ಷಣಿಕ ರಂಗದಲ್ಲೂ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಹಿಂದುಳಿದ ಸಮಾಜ ಎಂಬ ಖ್ಯಾತಿಯನ್ನು ಹೊಂದಿದ್ದ ಕುಲಾಲ ಸಮಾಜದ ಕೀರ್ತಿಯನ್ನು ಉತ್ತುಂಗಕ್ಕೇರಿಸುತ್ತಿರುವ ಸಮಾಜದ ವಿದ್ಯಾರ್ಥಿಗಳಿಗೆ ಕುಲಾಲ ಸಂಘದ ಪ್ರೋತ್ಸಾಹ, ಸಹಕಾರ ಸದಾಯಿದೆ. ಮಕ್ಕಳ ಅಭಿರುಚಿಯನ್ನು ಅರಿತುಕೊಂಡು ಅವರನ್ನು ಪ್ರೋತ್ಸಾಹಿಸಬೇಕು ಎಂದು ಕುಲಾಲ ಸಂಘ ಮುಂಬಯಿ ಅಧ್ಯಕ್ಷ ದೇವದಾಸ್‌ ಕುಲಾಲ್‌ ಅವರು ನುಡಿದರು.

Advertisement

ಜೂ. 30 ರಂದು ಫೋರ್ಟ್‌ನ ಆಫ್‌ಜೋ ಹೌಸ್‌ರ ಮೊದಲ ಮಹಡಿಯಲ್ಲಿರುವ ಸಭಾಗೃಹದಲ್ಲಿ ನಡೆದ ಕುಲಾಲ ಸಂಘ ಮುಂಬಯಿ ಇದರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ವಾರ್ಷಿಕ ಶೈಕ್ಷಣಿಕ ನೆರವು ವಿತರಣೆ ಕಾರ್ಯಕ್ರಮವನ್ನು ದೀಪಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತವಾದ ಮಾರ್ಗದರ್ಶನ ಹಾಗೂ ಸಹಕಾರವನ್ನು ಸಂಘವು ಕಳೆದ ಹಲವು ವರ್ಷಗಳಿಂದ ಮಾಡುತ್ತಿದೆ. ಇದರ ಸದುಪಯೋಗವನ್ನು ಸಮಾಜದ ಮಕ್ಕಳು ಪಡೆಯಬೇಕು. ಸಂಘದ ಸಮಾಜಪರ ಕಾರ್ಯಕ್ರಮಗಳಲ್ಲಿ ಸಮಾಜದ ಮಕ್ಕಳು ಹೆಚ್ಚು ಪಾಲ್ಗೊಳ್ಳುವಂತೆ ಪಾಲಕರು ಅವರನ್ನು ಪ್ರೇರೇಪಿಸಬೇಕು ಎಂದರು.

ಸಂಘದ ಉಪಾಧ್ಯಕ್ಷ ರಘು ಮೂಲ್ಯ ಪಾದೆಬೆಟ್ಟು ಅವರು ಮಾತನಾಡಿ, ಇಂದು ವಿದ್ಯಾರ್ಥಿಗಳಿಗೆ ನೀಡಿದ ನೆರವು ದಾನಿಗಳಿಂದ ಸಂಗ್ರಹಿಸಿದ ದೇಣಿಗೆಯಾಗಿದೆ. ಸಂಘದ ಬೃಹತ್‌ ಯೋಜನೆ ರೂಪುಗೊಂಡ ಬಳಿಕ ಅದರಿಂದ ಬರುವ ಆದಾಯದಲ್ಲಿ ಪ್ರತೀ ಸ್ಥಳೀಯ ಸಮಿತಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಯೋಜನೆಯನ್ನು ನೀಡುವ ಉದ್ಧೇಶ ನಮ್ಮದಾಗಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚು ಒಲವನ್ನು ನೀಡಿ, ಸಮಾಜದ ಹೆಸರನ್ನು ಬೆಳಗಿಸಬೇಕು ಎಂದರು.
ಜ್ಯೋತಿ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್‌ ಬಿ. ಸಾಲ್ಯಾನ್‌ ಇವರು ಮಾತನಾಡಿ, ಸಂಘವು ಬಹಳ ವರ್ಷಗಳಿಂದ ಸಣ್ಣ ಮೊತ್ತದ ಮೂಲಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಸಹಕರಿಸುತ್ತಿದೆ. ಇದನ್ನು  ಸಮಾಜದ ವಿದ್ಯಾರ್ಥಿಗಳು ಪ್ರಸಾದ ರೂಪದ ಆಶೀರ್ವಾದ ಎಂದು ಸ್ವೀಕರಿಸಬೇಕು. ಇಂದಿನ ವಿದ್ಯಾರ್ಥಿಗಳ ಫಲಿತಾಂಶವನ್ನು ನೋಡುವಾಗ ಸಂತಸವಾಗುತ್ತಿದೆ. ವಿದ್ಯಾರ್ಥಿಗಳಿಗೆ ಜ್ಯೋತಿ ಕೋ. ಆಪರೇಟಿವ್‌ ಸೊಸೈಟಿಯಿಂದ ಹಲವಾರು ಯೋಜನೆಗಳಿದ್ದು, ಇದರ ಸದುಪಯೋಗವನ್ನು ಸಮಾಜದ ಮಕ್ಕಳು ಪಡೆದುಕೊಳ್ಳಬೇಕು ಎಂದರು.
ಅಮೂಲ್ಯ ಪತ್ರಿಕೆಯ ಸಂಪಾದಕ ಶಂಕರ್‌ ವೈ. ಮೂಲ್ಯ ವಿರಾರ್‌ ಅವರು ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗುತ್ತಿದ್ದಾರೆ. ಕೇವಲ ಜೀವನದಲ್ಲಿ ಅಂಕಗಳು ಮುಖ್ಯವಲ್ಲ. ಮುಂದಿನ ಜೀವನದ ಬಗ್ಗೆ ಯೋಚಿಸಬೇಕಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಕೂಡಾ ಸಾಧನೆ ನಮ್ಮದಾಗಬೇಕು. ಪಾಲಕರ ಮಾರ್ಗದರ್ಶನದಲ್ಲಿ ಮಕ್ಕಳು ಬೆಳೆಯಬೇಕು ಎಂದು ನುಡಿದರು.

ಗೌರವ ಕೋಶಾಧಿಕಾರಿ ಜಯ ಅಂಚನ್‌ ಇವರು ಮಾತನಾಡಿ, ಆರ್ಥಿಕ ನೆರವು ಕಾರ್ಯಕ್ಕೆ ಸಮಾಜದ ದಾನಿಗಳು ಸ್ವಇಚ್ಚೆಯಿಂದ ದೇಣಿಗೆ ನೀಡುವುದರಿಂದ ಈ ಬಾರಿ ಹೆಚ್ಚಿನ ವಿದ್ಯಾರ್ಥಿಗಳಿಗೆ ನೆರವು ನೀಡಲು ಸಾಧ್ಯವಾಯಿತು. ನೆರವು ಪಡೆದ ವಿದ್ಯಾರ್ಥಿಗಳು, ಸಂಘದ ಸಂಪರ್ಕವನ್ನು ಇಟ್ಟುಕೊಳ್ಳಬೇಕು. ಮುಂದಿನ ದಿನಗಳಲ್ಲಿ ದಾನಿಗಳಾಗಿ ನೀವು ಸಹಕರಿಸಬೇಕು ಎಂದರು.

ವೇದಿಕೆಯಲ್ಲಿ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಕುಲಾಲ್‌ ಬಂಟ್ವಾಳ, ಅತಿಥಿಯಾಗಿ ಆ್ಯಂಕರ್‌ ಕಂಪೆನಿಯ ಆರ್ಥಿಕ ಸಲಹೆಗಾರ ಶ್ರೀಧರ ಬಂಗೇರ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸುಚಿತ್ರಾ ಬಂಜನ್‌ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಕರುಣಾಕರ ಸಾಲ್ಯಾನ್‌ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ವಿವಿಧ ಸ್ಥಳೀಯ ಸಮಿತಿಯ ಪದಾಧಿಕಾರಿಗಳು, ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

ನಮ್ಮ ಬದುಕಿನಲ್ಲಿ ಸಮಯಕ್ಕೆ ಮಹತ್ವ ನೀಡಬೇಕು. ಶಿಕ್ಷಣ ಪಡೆ ಯುವ ಸಂದರ್ಭದಲ್ಲಿ ಸಮಯ ಮಹತ್ವದ್ದಾಗಿ ರುತ್ತದೆ. ಸಮಯ ಪ್ರಜ್ಞೆಯನ್ನು ಅರಿತಾಗ ಉನ್ನತ ಶ್ರೇಣಿಯಲ್ಲಿ ವಿದ್ಯೆ ಪಡೆಯಲು ಸಾಧ್ಯ. ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯೆ ಕಲಿಯಬೇಕು ಎಂಬ ಹಂಬಲವಿದ್ದಲ್ಲಿ, ಸವಲತ್ತು, ಸೌಲಭ್ಯಗಳು ಇವೆ. ಸರಕಾರ ಕೂಡ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳು ಅದರ ಪ್ರಯೋಜನ ಪಡೆಯಬೇಕು. ಶಿಕ್ಷಣದಿಂದ ಬದುಕಲ್ಲಿ ಬೆಳಕು ಮೂಡುತ್ತದೆ.
-ಶ್ರೀಧರ ಬಂಗೇರ, ಆರ್ಥಿಕ ಸಲಹೆಗಾರ, ಆ್ಯಂಕರ್‌ ಕಂಪೆನಿ

Advertisement

Udayavani is now on Telegram. Click here to join our channel and stay updated with the latest news.

Next