Advertisement

Kulai: ಅವೈಜ್ಞಾನಿಕ ಕುಳಾಯಿ ಮೀನುಗಾರಿಕಾ ಜೆಟ್ಟಿ

03:34 PM Oct 15, 2024 | Team Udayavani |

ಕುಳಾಯಿ: ಕುಳಾಯಿ ಜೆಟ್ಟಿಯನ್ನು ಸ್ಥಳೀಯ ಮೀನುಗಾರರ ಬೇಡಿಕೆ ಯನ್ನು ಪರಿಗಣಿಸದೆ ಯಥಾಸ್ಥಿತಿಯಲ್ಲಿ ನಿರ್ಮಿಸ ಲಾಗುತ್ತಿದ್ದು, ಇದರಿಂದ ಆಕ್ರೋಶ ಗೊಂಡ ನಾಡದೋಣಿ ಹಾಗೂ ಮೂಲ ಮೀನುಗಾರ ಸಂಘಟನೆಯ ಮೀನುಗಾರರು ಸೋಮವಾರ ಜೆಟ್ಟಿ ಕಾಮಗಾರಿ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಮೀನುಗಾರಿಕೆಗೆ ಈ ಜೆಟ್ಟಿಯಿಂದ ಯಾವುದೇ ಪ್ರಯೋಜನವಿಲ್ಲದಂತಾಗಿದ್ದು ಸರಕಾರವು ಸ್ಥಳೀಯ ನಾಡ ದೋಣಿ ಮೀನುಗಾರರ ಅಹವಾಲಿಗೆ ಸ್ಪಂದಿಸದೆ ಮತ್ತೆ ಕಾಮಗಾರಿಯನ್ನ ಆರಂಭಿಸಿದೆ. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಪಾಲಿಕೆ ಚುನಾವಣೆ ಸಹಿತ ಎಲ್ಲ ಚುನಾವಣೆಯಲ್ಲಿ ಮತ ಹಾಕದೆ ಬಹಿಷ್ಕಾರ ಹಾಕಲಿದ್ದೇವೆ ಎಂದು ಗಂಭೀರ ಎಚ್ಚರಿಕೆಯನ್ನು ಮೀನುಗಾರರು ನೀಡಿದರು.

ಕರಾವಳಿ ಸಾಂಪ್ರದಾಯಿಕ ನಾಡ ದೋಣಿ ಹಾಗೂ ಕರಾವಳಿ ಮೂಲ ನಾಡ ದೋಣಿ ಮೀನುಗಾರಿಕಾ ಸಂಘಟನೆಗಳು ಸೋಮವಾರ ತುರ್ತು ಸಭೆ ನಡೆಸಿ ಹೋರಾಟದ ರೂಪುರೇಷೆ ಚರ್ಚಿಸಿದರು.

ಎನ್‌ಎಂಪಿಎ ಅಧಿಕಾರಿಗಳು ಜನಪ್ರತಿನಿಧಿಗಳ ಭಯವೇ ಇಲ್ಲವೆಂಬಂತೆ ಅವರ ಮಾತಿಗೂ ನಿರ್ಲಕ್ಷ್ಯ ವಹಿಸಿದ್ದಾರೆ. ಕಾಮಗಾರಿ ಸ್ಥಗಿತಕ್ಕೆ ರಾಜ್ಯದ ಸಚಿವ ಮಂಕಾಳ್‌ ವೈದ್ಯ ಆದೇಶ ನೀಡಿದ್ದರೂ ಕಾಮಗಾರಿಯನ್ನು ಗುತ್ತಿಗೆದಾರರು ಮುಂದುವರಿಸಿದ್ದಾರೆ.

ಜನಪ್ರತಿನಿಧಿಗಳು ನಾಡ ದೋಣಿ ಮೀನುಗಾರಿಕೆಗೆ ಸೂಕ್ತವಾದ ಜೆಟ್ಟಿ ನಿರ್ಮಾಣ ಮಾಡುವವರೆಗೆ ಹಾಗೂ ಬೇಡಿಕೆಯನ್ನು ಈಡೇರಿಸುವವರೆಗೆ ಚುನಾವಣ ಬಹಿಷ್ಕಾರ ಹಾಗೂ ಅನಿರ್ದಿಷ್ಟಾವಧಿ ಪ್ರತಿಭಟನೆಯ ನಿರ್ಧಾರ ಕೈಗೊಂಡರು. ಇದೇ ಸಂದರ್ಭ ಕಾಮಗಾರಿಯ ಲಾರಿಗಳನ್ನು ತಡೆದು ಒಂದು ಗಂಟೆ ಪ್ರತಿಭಟನೆ ನಡೆಸಲಾಯಿತು.

Advertisement

ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾಮಗಾರಿ
ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ವಸಂತ ಸುವರ್ಣ ಮಾತನಾಡಿ, ಅವೈಜ್ಞಾನಿಕ ಕಾಮಗಾರಿಯನ್ನು ನಿಲ್ಲಿಸಲು ಸಚಿವ ಮಂಕಾಳ್‌ ವೈದ್ಯ ಸ್ಥಳಕ್ಕೆ ಭೇಟಿ ನೀಡಿ ಆದೇಶಿಸಿದ್ದರು. ಆದರೆ ಎನ್‌ಎಂಪಿಎ ಮೀನುಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾಮಗಾರಿ ನಡೆಸಲಾಗುತ್ತಿದೆ. ಬೇಡಿಕೆ ಈಡೇರುವವರೆಗೆ ನಮ್ಮ ಹೋರಾಟ ಮುಂದಿನ ದಿನಗಳಲ್ಲಿ ಮುಂದುವರಿಯಲಿದೆ ಎಂದರು.

ಕೋಟ್ಯಾಂತರ ರೂ.ಖರ್ಚು ಮಾಡಿ ದಕ್ಕೆ ಬದಲು ಕೊಳವೊಂದು ನಿರ್ಮಿಸುತ್ತಿರುವ ರೀತಿಯಲ್ಲಿದೆ. ಅಧಿಕಾರಿಗಳು ಇಷ್ಟು ನಿರ್ಲಕ್ಷé ವಹಿಸಿ ಕಾಟಾಚಾರಕ್ಕೆ ಜೆಟ್ಟಿ ನಿರ್ಮಿಸುವುದರ ಅಗತ್ಯವೇನು?. ಮೀನುಗಾರರಿಗೆ ಅನ್ಯಾಯ ವಾದರೆ ಸಹಿಸಲು ಸಾಧ್ಯವಾಗದು ಹೋರಾಟವೇ ಅಂತಿಮ ಎಂದು ಪ್ರಧಾನ ಕಾರ್ಯದರ್ಶಿ ಸುರೇಶ್‌ ಶ್ರೀಯಾನ್‌ ಬೈಕಂಪಾಡಿ ನುಡಿದರು.

ಸುಧೀರ್‌ ಶ್ರೀಯಾನ್‌ ಮಾತನಾಡಿ ಮೀನುಗಾರರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳುವುದಾಗಿ ಹೇಳಿ ಮೋಸ ಮಾಡಿದ್ದಾರೆ. ಉಳ್ಳಾಲದಿಂದ ಕಾರವಾರದವರೆಗೆ ಇರುವ ಮೀನುಗಾರರ ಒಕ್ಕೂಟದ ಬೆಂಬಲ ಪಡೆದು ಕಾಮಗಾರಿ ಸ್ಥಗಿತಗೊಳಿಸಿ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.

ಕರಾವಳಿ ಸಾಂಪ್ರದಾಯಿಕ ಮೀನುಗಾರರ ಸಂಘದ ಉಪಾಧ್ಯಕ್ಷ ಉದಯ್‌ ಅಮೀನ್‌, ಪ್ರಧಾನ ಕಾರ್ಯದರ್ಶಿ ಸುರೇಶ್‌ ಶ್ರೀಯಾನ್‌ ಬೈಕಂಪಾಡಿ, ದ.ಕ. ಕರಾವಳಿ ಮೂಲ ಮೀನುಗಾರರ ಸಂಘದ ಅಧ್ಯಕ್ಷ ಅಶ್ವಥ್‌ ಕಾಂಚನ್‌ ಬೈಕಂಪಾಡಿ, ಸಂಘಟನ ಕಾರ್ಯದರ್ಶಿ ಚಂದ್ರಶೇಖರ ಶ್ರೀಯಾನ್‌ ಮತ್ತಿತರ ಪದಾಧಿಕಾರಿಗಳು, ಸರ್ವಸದಸ್ಯರು ಉಪಸ್ಥಿತರಿದ್ದರು.

ಅ.16ರಂದು ಸಭೆ
ಮೀನುಗಾರರ ಅನಿರ್ದಿಷ್ಟಾವಧಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬೇಡಿಕೆಯನ್ನು ಪರಿಗಣಿಸುವ ಸಲುವಾಗಿ ಕುಳಾಯಿ ಜೆಟ್ಟಿ ಕಾಮಗಾರಿ ಕುರಿತಂತೆ ಅ.16ರಂದು ನವಮಂಗಳೂರು ಬಂದರು ಪ್ರಾಧಿಕಾರದ ಜತೆ ಸಂಸದ ಬ್ರಿಜೇಶ್‌ ಚೌಟ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಶಾಸಕ ಡಾ|ಭರತ್‌ ಶೆಟ್ಟಿ ವೈ, ಮೀನುಗಾರರ ಸಂಘದ ಮುಖಂಡರು ಪಾಲ್ಗೊಳ್ಳಲಿದ್ದಾರೆ.ಈ ನಿಟ್ಟಿನಲ್ಲಿ ಮಂಗಳವಾರದಿಂದ ನಡೆಯುವ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಅಧಿಕಾರಿಗಳು ಬೇಡಿಕೆಗೆ ಸ್ಪಂದಿಸದೇ ಹೋದಲ್ಲಿ ಹೋರಾಟವೇ ಅಂತಿಮವಾಗಲಿದೆ ಎಂದು ಮೀನುಗಾರರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next