Advertisement

ಕುಸಿಯುವ ಹಂತದಲ್ಲಿ ಕುಕ್ಕುಜೆ-ಅಳಂಬ ಸಂಪರ್ಕ ಸೇತುವೆ

09:32 PM Jun 02, 2019 | Team Udayavani |

ಬೆಳ್ತಂಗಡಿ: ನಾರಾವಿ ಗ್ರಾ.ಪಂ. ವ್ಯಾಪ್ತಿಯ ಕುತ್ಲೂರು ಸಮೀಪದ ಅಳಂಬ ಸಂಪರ್ಕಿಸುವ ಕುಕ್ಕುಜೆ ಸೇತುವೆ ತೀರ ಹದೆಗಟ್ಟಿದ್ದು, ಮಳೆಗಾಲದಲ್ಲಿ ಕುಸಿಯುವ ಹಂತದಲ್ಲಿದೆ. ಸೇತುವೆ ಪಿಲ್ಲರ್‌ನ ತಳಭಾಗದ ಕಾಂಕ್ರೀಟ್‌ ಸಂಪೂರ್ಣ ಎದ್ದು ಹೋಗಿ ಕಬ್ಬಿಣದ ಸರಳುಗಳು ಹೊರಬಂದಿವೆ. ಕಳೆದ ಬಾರಿಯಂತೆ ಈ ಬಾರಿ ಅತೀವ ಮಳೆ ಸುರಿದರೆ ನೀರಿನ ರಭಸಕ್ಕೆ ಸೇತುವೆ ಕುಸಿದು ಎರಡು ಬದಿ ಸಂಪರ್ಕವೇ ಕಡಿಯುವ ಭೀತಿಯಲ್ಲಿ ಸ್ಥಳೀಯರಿದ್ದಾರೆ.

Advertisement

ಈ ಕುರಿತು ಗ್ರಾಮಸ್ಥರು ಹಲವು ಬಾರಿ ಶಾಸಕರಿಗೆ ಹಾಗು ಸ್ಥಳೀಯಾಡಳಿತಕ್ಕೆ ಮನವಿ ಸಲ್ಲಿದರೂ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಕಳೆದ ಬಾರಿ ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದ ಹೊರತಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಈಗಾಗಲೇ ಮಳೆ ಆರಂಭವಾಗುವ ಹಂತದಲ್ಲಿದ್ದು, ಕಾಮಗಾರಿ ಆರಂಭಿಸಿದರೂ ಕಾಂಕ್ರೀಟ್‌ ಕಿತ್ತು ಹೋಗುವ ಸಾಧ್ಯತೆ ಇದೆ.

30 ವರ್ಷಕ್ಕೇ ದುಃಸ್ಥಿತಿ
ಗಂಗಾಧರ ಗೌಡರ ಅವಧಿಯಲ್ಲಿ ಕುಕ್ಕುಜೆ ಯಿಂದ ಅಳಂಬಕ್ಕೆ ಸುಮಾರು 15 ಮೀಟರ್‌ ಉದ್ದದ ಸಂಪರ್ಕ ಸೇತುವೆ ನಿರ್ಮಿಸಲಾಗಿತ್ತು. ಸೇತುವೆಗಳಿಗೆ ಕನಿಷ್ಠ 70ರಿಂದ 80 ವರ್ಷ ಬಾಳಿಕೆ ಇದ್ದು, ಈ ಸೇತುವೆ 30 ವರ್ಷಕ್ಕೇ ಶಿಥಿಲಾವಸ್ಥೆ ತಲುಪಿದೆ. ಇದು ಕಳಪೆ ಕಾಮಗಾರಿಗೆ ನಿದರ್ಶನ.

ಘನವಾಹನ ಸಂಚಾರ ನಿಷೇಧ
ಈಗಾಗಲೇ ಶಾಲಾ – ಕಾಲೇಜು ಆರಂಭವಾಗಿದ್ದು, ಮಕ್ಕಳು ಆತಂಕದಲ್ಲಿ ಸಂಚರಿಸುವಂತಾಗಿದೆ. ಸೇತುವೆ ಕುಸಿದು ಬಿದ್ದಲ್ಲಿ ಸುಮಾರು 300 ಮನೆಗೆ ಸಂಪರ್ಕ ಕಡಿದಾಗಲಿದೆ. ಪಂಚಾಯತ್‌ರಾಜ್‌ ಕಿರಿಯ ಎಂಜಿನಿಯರ್‌ ವಿಭಾಗದ ಅಧಿಕಾರಿಗಳು ಘನವಾಹನ ಓಡಾಟ ನಡೆಸದಂತೆ ಸೂಚಿಸಿದ್ದಾರೆ. ಇದರಿಂದ ಕೃಷಿಗೆ ಅಗತ್ಯ ವಸ್ತು ಸಾಗಿಸಲು ತೊಡಕಾಗಲಿದೆ.

ತಡವಾಗಿ ಮಾಹಿತಿ
ಸ್ಥಳೀಯರು ತಡವಾಗಿ ಮಾಹಿತಿ ನೀಡಿದ್ದಾರೆ. ಮಳೆಗಾಲ ಸಮೀಪಿಸಿರುವುದರಿಂದ ದುರಸ್ತಿ ಕಷ್ಟಸಾಧ್ಯ. ದುರಸ್ತಿಗೆ ಕನಿಷ್ಠ 25 ದಿನಗಳು ಬೇಕು. ಮುಂದಿನ ವರ್ಷ ಮಳೆಹಾನಿ ಅನುದಾನದಲ್ಲಿ 3 ಲಕ್ಷ ರೂ. ಮೀಸಲಿರಿಸಿ ಕಾಂಕ್ರೀಟ್‌ ಅಳವಡಿಸಿ ದುರಸ್ತಿಪಡಿಸಲಾಗುವುದು ಎಂದು ಪಂಚಾಯತ್‌ರಾಜ್‌ ವಿಭಾಗ‌ದ ಕಿರಿಯ ಎಂಜಿನಿಯರ್‌ ತಮ್ಮಣ್ಣ ಗೌಡ ಪಾಟೀಲ್‌ತಿಳಿಸಿದ್ದಾರೆ.

Advertisement

ಗ್ರಾ.ಪಂ. ಸಭೆಯಲ್ಲಿ ಚರ್ಚೆ
ತುರ್ತು ಕ್ರಮ ಕೈಗೊಳ್ಳುವ ಕುರಿತಾಗಿ ಕಳೆದ ವಾರ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದು ಸ್ಥಳೀಯರ ಮುಖೇನ ಶಾಸಕರಿಗೆ ಮನವಿ ಮಾಡಲಾಗಿದೆ. ಶಾಸಕರು ಪ್ಲಾ éನಿಂಗ್‌ ಸಿದ್ಧಪಡಿಸುವಂತೆ ಸೂಚಿಸಿದ್ದು, ಆದರೆ ಅಧಿಕಾರಿಗಳು ಈ ಕುರಿತು ನಿರ್ಲಕ್ಷ್ಯ ತೊರಿದ್ದಾರೆ. ಮಳೆಗಾಲಕ್ಕೂ ಮುನ್ನ ತಾತ್ಕಾಲಿಕ ದುರಸ್ತಿ ಅನಿವಾರ್ಯವಾಗಿದೆ.

ಹೊಸ ಸೇತುವೆಗೆ ಪ್ರಸ್ತಾವ
ಈಗಾಗಲೇ ಗ್ರಾ.ಪಂ.ನಿಂದ ಹೊಸ ಸೇತುವೆ ನಿರ್ಮಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಈಗಿರುವ ಸೇತುವೆ ದುರಸ್ತಿಗೊಳಿಸದರೂ ಮುಂದಿನ ಮಳೆಗಾಲಕ್ಕೆ ಅದೇ ಪರಿಸ್ಥಿತಿ ನಿರ್ಮಾಣವಾಗುವುದರಿಂದ ಹೊಸ ಸೇತುವೆ ನಿರ್ಮಿಸುವ ಪ್ರಸ್ತಾವನೆಯ ಕೂಗು ಕೇಳಿಬಂದಿದೆ.

 ಅನುದಾನ ಬಳಸಲಿ
ಮಳೆಗಾಲದಲ್ಲಿ ಸೇತುವೆ ಕುಸಿದು ಬಿದ್ದು ಜೀವಹಾನಿ ಸಂಭವಿಸಿದಲ್ಲಿ ಯಾರು ಹೊಣೆ ಎಂಬಂತಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಎರಡು ವಾರಗಳಾದರೂ ಕ್ರಮ ಕೈಗೊಂಡಿಲ್ಲ. ಶಾಸಕರ ಅನುದಾನದಿಂದ ದುರಸ್ತಿ ಕೈಗೊಂಡಲ್ಲಿ ತಕ್ಕಮಟ್ಟಿನ ಸಮಸ್ಯೆ ನಿವಾರಣೆಯಾಗಲಿದೆ.
– ರವೀಂದ್ರ ಪೂಜಾರಿ, ಅಧ್ಯಕ್ಷರು, ನಾರಾವಿ ಗ್ರಾ.ಪಂ.

 ಸ್ಥಳಕ್ಕೆ ಭೇಟಿ
ಸೇತುವೆ ದುಃಸ್ಥಿತಿ ಕುರಿತು ಈಗಾಗಲೇ ಮಾಹಿತಿ ಬಂದಿದೆ. ಅಧಿಕಾರಿಗಳು ಸ್ಥಳ ಪರಿಶೀಲಿದ್ದಾರೆ. ಇನ್ನೆರಡು ದಿನಗಳಲ್ಲಿ ಖುದ್ದು ಭೇಟಿ ನೀಡಲಾಗುವುದು.
– ಚೆನ್ನಪ್ಪ ಮೊಲಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಪಂಚಾಯತ್‌ರಾಜ್‌ ವಿಭಾಗ

-  ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next