Advertisement
ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಮಗ್ರ ಅಭಿವೃದ್ಧಿಗೆ 180 ಕೋಟಿ ರೂ. ವೆಚ್ಚದ ಮಾಸ್ಟರ್ ಪ್ಲಾನ್ ಜಾರಿಯಲ್ಲಿದೆ. ಇದರಲ್ಲಿ 17 ಕೋಟಿ ರೂ. ವೆಚ್ಚದ ಒಳಚರಂಡಿಯೂ ಸೇರಿದೆ. ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ ಕಾಮಗಾರಿ ಹೊಣೆ ನಿರ್ವಹಿಸಿತ್ತು. ಕಾಮಗಾರಿ ವೇಳೆ ಲೋಪವಾಗಿದ್ದು, ಈಗ ಅಲ್ಲಲ್ಲಿ ಮ್ಯಾನ್‌ಹೋಲ್ ಒಡೆದು ಕೊಳಚೆ ನೀರು ಹೊರಬರುತ್ತಿದೆ. ಇದರಿಂದ ಪರಿಸರ ಮಲಿನದ ಜತೆಗೆ ಸಾಂಕ್ರಾಮಿಕ ರೋಗ ಹಬ್ಬಲು ಕಾರಣವಾಗುತ್ತಿದೆ.
ಸುಬ್ರಹ್ಮಣ್ಯದಲ್ಲಿ ಅಳವಡಿಸಿದ ಒಳಚರಂಡಿ ಪೈಪುಗಳು ಕಾರ್ಯಾರಂಭ ಮಾಡಿದ ಒಂದು ವರ್ಷದಲ್ಲಿ ಚೇಂಬರ್ ಹಾಗೂ ಪೈಪುಗಳಲ್ಲಿ ಸೋರಿಕೆ ಕಾಣಲಾರಂಭಿಸಿದೆ. ಶನಿವಾರ ಸುಬ್ರಹ್ಮಣ್ಯ ಮುಖ್ಯ ಪೇಟೆಯ ಹೂವಿನ ಸ್ಟಾಲ್ ಬಳಿ ಒಳಚರಂಡಿ ಪೈಪಿನಿಂದ ಕಲುಷಿತ ನೀರು ಸೋರಿಕೆಯಾಗಿ ಪೇಟೆಯಲ್ಲಿ ಪಾದಚಾರಿಗಳು ತೆರಳುವಾಗ ಮೂಗು ಬಿಗಿ ಹಿಡಿದು ಸಂಚರಿಸಬೇಕಾಯಿತು. ಬಳಿಕ ದೇವಸ್ಥಾನದ ಸಿಬಂದಿ ಬಂದು ತಾತ್ಕಾಲಿಕ ದುರಸ್ತಿ ಮಾಡಿದ್ದಾರೆ. ನಗರದಲ್ಲಿ ಒಳಚರಂಡಿ ಕಾರ್ಯಾ ರಂಭ ಮಾಡಿದ ಸ್ವಲ್ಪ ದಿನಗಳಲ್ಲೇ ಕಾಮಗಾರಿಯ ಲೋಪ ಗಮನಕ್ಕೆ ಬಂದಿತ್ತು. ಅದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೂ ಗಮನಹರಿಸದ ಒಳಚರಂಡಿ ಮಂಡಳಿ ನಿರ್ಲಕ್ಷ್ಯದಿಂದ ವರ್ತಿಸಿದೆ. ಪರಿಣಾಮ ನಗರ ಮಲಿನವಾಗುತ್ತಿದೆ. ಒಳಚರಂಡಿ ಕಾಮಗಾರಿಯಲ್ಲಿ ಭಾರಿ ಕಳಪೆಯಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಭ್ರಷ್ಟಾಚಾರದ
ದುರ್ವಾಸನೆ’!
ಕುಕ್ಕೆ ಕ್ಷೇತ್ರದಲ್ಲಿ ಸ್ವತ್ಛತೆಯ ಸಮಸ್ಯೆ ಬೆಟ್ಟದಂತೆ ಬೆಳೆಯುತ್ತಿದೆ. ತ್ಯಾಜ್ಯ ನಿರ್ವಹಣೆ, ಚರಂಡಿ ಸಮಸ್ಯೆ ಪರಿಹಾರಕ್ಕೆಂದು ಕೋಟಿಗಟ್ಟಲೆ ಸುರಿದು ನಿರ್ಮಿಸಿದ ಒಳಚರಂಡಿ ಯೋಜನೆಯ ಹಣ ಇಲ್ಲಿ ನೀರು ಪಾಲಾಗಿದೆ. ಯೋಜನೆಯಲ್ಲಿ ಭ್ರಷ್ಟಚಾರ ನಡೆದ ಬಗ್ಗೆಯೂ ಸಾರ್ವಜನಿಕರಿಂದ ದೂರುಗಳು ಕೇಳಿ ಬರಲಾರಂಭಿಸಿದೆ.
Related Articles
ಸುಬ್ರಹ್ಮಣ್ಯ ಕ್ಷೇತ್ರ ಚಂಪಾಷಷ್ಠಿ ಮಹೋತ್ಸವಕ್ಕೆ ತೆರೆದುಕೊಳ್ಳುತ್ತಿದೆ. ಜಾತ್ರೆ ಅವಧಿಯಲ್ಲಿ ಲಕ್ಷಾಂತರ ಮಂದಿ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಈ ವೇಳೆ ಸ್ವತ್ಛತೆಗೆ ಆದ್ಯತೆ ನೀಡಬೇಕಿದೆ. ಅದರಲ್ಲಿ ಒಳಚರಂಡಿ ಯೋಜನೆಗಳ ಅವ್ಯವಸ್ಥೆಯಿಂದ ನಗರದಲ್ಲಿ ದುರ್ವಾಸನೆ ಹರಡುತ್ತಿರುವುದು ಸ್ವತ್ಛತೆ ಹಾಗೂ ಆರೋಗ್ಯ ಕಾಪಾಡಿ ಕೊಳ್ಳುವುದಕ್ಕೆ ಸವಾಲಾಗಿದೆ. ಇಲ್ಲಿ ರೋಗ ಹರಡುವ ಭೀತಿಯೂ ಇದೆ.
Advertisement
ಸಮನ್ವಯ ಕೊರತೆಕಾಮಗಾರಿ ವಹಿಸಿಕೊಂಡ ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿಯು ದೇವಸ್ಥಾನದ ಆಡಳಿತಕ್ಕೆ ನಿರ್ವಹಣೆ ಜವಾಬ್ದಾರಿ ವಹಿಸಿದೆ ಎನ್ನುತ್ತಾ ಕೈ ತೊಳೆದುಕೊಳ್ಳುತ್ತಿದೆ. ಕೆಲಸ ಪೂರ್ಣಗೊಳಿಸಿ ಕೊಟ್ಟಿಲ್ಲ ಎಂದು ದೇವಸ್ಥಾನದವರು ಮಂಡಳಿಯತ್ತ ಬೊಟ್ಟು ಮಾಡುತ್ತಿದ್ದಾರೆ. ಸರಿಯಾದ ಮಾಹಿತಿ ನೀಡಲು ದೇವಸ್ಥಾನದಲ್ಲಿ ಈಗ ಖಾಯಂ ಅಧಿಕಾರಿಗಳೂ ಇಲ್ಲ. ಎರಡು ಇಲಾಖೆಗಳ ಸಮನ್ವಯದ ಕೊರತೆಯಿಂದ ಕೋಟ್ಯಂತರ ಭಕ್ತರ ಹಣ ಇಲ್ಲಿ ನೀರಿನ ಮೇಲಿಟ್ಟ ಹೋಮದಂತಾಗಿದೆ. ನದಿ ಸೇರುತ್ತಿದೆ ಕೊಳಚೆ
ಒಳಚರಂಡಿ ಯೋಜನೆಯ ಚೇಂಬರ್ ಹಾಗೂ ಪೈಪುಗಳಿಂದ ನೀರು ಹೊರಚೆಲ್ಲಿ ಪರಿಸರ ದುರ್ನಾತ ಬೀರಿ ಜನಸಾಮಾನ್ಯರಿಗೆ ತೊಂದರೆಯಾಗುವುದು ಒಂದೆಡೆ. ಇನ್ನೊಂದು ಕಡೆ ಕೊಳಚೆ ನೀರು ನದಿಯನ್ನು ಸೇರುತ್ತಿದೆ. ನಗರದಲ್ಲಿ ವಿವಿಧೆಡೆ ಹಾಕಿರುವ ಒಳಚರಂಡಿ ಪೈಪುಗಳಲ್ಲಿ ನೀರು ಸೋರಿಕೆಯಾಗಿ ಕ್ಷೇತ್ರದ ಪ್ರಮುಖ ತೀರ್ಥ ಸ್ನಾನ ನಡೆಸುವ ಕುಮಾರಧಾರಾ ಹಾಗೂ ದರ್ಪಣ ತೀರ್ಥ ನದಿ ಸೇರುತ್ತದೆ. ಕುಮಾರಧಾರಾ ದರ್ಪಣ ತೀರ್ಥ ನದಿಗಳು ಒಂದೆಡೆ ಸೇರಿ ಹರಿಯುವ ನದಿ ಪಾತ್ರದ ಜನರು ಇಲ್ಲಿನ ನೀರನ್ನು ಕುಡಿಯಲು ಬಳಸುತ್ತಾರೆ. ನೀರು ಕಲುಷಿತಗೊಂಡಲ್ಲಿ ಅದನ್ನು ಕುಡಿದ ಜನರಿಗೆ ರೋಗ ಹರಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ನಿರ್ವಹಣೆ ಹೊಣೆ ನಮ್ಮದಲ್ಲ
ಒಳಚರಂಡಿ ಕಾಮಗಾರಿ ಪೂರ್ತಿಗೊಳಿಸಿ ದೇವಸ್ಥಾನಕ್ಕೆ ನಿರ್ವಹಣೆಗಾಗಿ ಹಸ್ತಾಂತರಿಸಿದ್ದೇವೆ. ಅದರ ನಿರ್ವಹಣೆ ನಮ್ಮ ಕೈಯಲ್ಲಿ ಇಲ್ಲ. ಹೀಗಾಗಿ ಈ ಸಮಸ್ಯೆ ನಮಗೆ ಸಂಬಂಧಿಸಿದಲ್ಲ.
- ಗಣೇಶ್ ನಾಯ್ಕ,
ಎಇ, ಒಳಚರಂಡಿ ಮತ್ತು ಜಲಮಂಡಳಿ -ಬಾಲಕೃಷ್ಣ ಭೀಮಗುಳಿ