ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಧಾನ ದಿನವಾದ ಕಾರ್ತಿಕ ಶುದ್ಧ ಷಷ್ಠಿಯ ದಿನವಾದ ಶನಿವಾರ ಮುಂಜಾನೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಚಂಪಾಷಷ್ಠಿ ಮಹಾರಥೋತ್ಸವ ಜರಗಿತು.
ಬೆಳಗ್ಗೆ 6.57ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ದೇವರು ಬ್ರಹ್ಮರಥಾರೋಹಣರಾದರು. ದೇಗುಲದ ಪ್ರಧಾನ ಅರ್ಚಕ ವೇ| ಸೀತಾರಾಮ ಎಡಪಡಿತ್ತಾಯ ಅವರು ಉತ್ಸವದ ವಿದಿವಿಧಾನ ನೆರವೇರಿಸಿದರು.
ವರ್ಷದಲ್ಲಿ ಒಂದು ಬಾರಿ ಮಾತ್ರ ಸೇವೆ ನೆರವೇರಿಸಲು ಅವಕಾಶವಿರುವ ಮಾತ್ರ ನಡೆಯುವ ಬ್ರಹ್ಮರಥೋತ್ಸವ ಸೇವೆಯನ್ನು 150 ಭಕ್ತರು ಸಲ್ಲಿಸಿದ್ದರು. ಬ್ರಹ್ಮರಥೋತ್ಸವ ಸೇವೆ ಸಲ್ಲಿಸಿದ ಭಕ್ತರಿಗೆ ರಥ ಎಳೆಯಲು ಅನುಕೂಲವಾಗುವಂತೆ ವಿಶೇಷ ಪಾಸ್ ನೀಡಲಾಗಿತ್ತು. ಮೊದಲು ದೇಗುಲದ ಹೊರಾಂಗಣದಲ್ಲಿ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರ ಪಾಲಕಿ ಉತ್ಸವ ನೆರವೇರಿತು.
ಪೂಜೆಯ ಬಳಿಕ ವೇ| ಸೀತಾರಾಮ ಎಡಪಡಿತ್ತಾಯರು ದೇವರಿಗೆ ಸುವರ್ಣ ವೃಷ್ಟಿಗೈದರು. ಬಳಿಕ ಧನ, ಕನಕ, ಹೂವು, ಫಲವಸ್ತು ಪ್ರಸಾದಗಳನ್ನು ರಥದಿಂದ ಭಕ್ತರತ್ತ ಎಸೆದರು. ಭಕ್ತರು ನಾಣ್ಯ, ಕಾಳುಮೆಣಸು, ಸಾಸಿವೆಗಳನ್ನು ರಥಕ್ಕೆ ಸಮರ್ಪಿಸಿದರು. ಬಳಿಕ ಪ್ರಥಮವಾಗಿ ಪಂಚಮಿ ರಥೋತ್ಸವ, ಅನಂತರ ಸುಬ್ರಹ್ಮಣ್ಯ ದೇವರ ಮಹಾರಥೋತ್ಸವ ನಡೆಯಿತು.
ದೇವರು ಗರ್ಭಗುಡಿಗೆ ಪ್ರವೇಶಿಸಿದ ಬಳಿಕ ಎಲ್ಲ ಭಕ್ತರಿಗೂ ಮೂಲಪ್ರಸಾದ ವಿತರಿಸಲಾಯಿತು. ಶುಕ್ರವಾರ ರಾತ್ರಿ ಪಂಚಮಿ ರಥೋತ್ಸವ ಜರಗಿತು. ಷಷ್ಠಿಯ ದಿನದಂದು ದೇಗುಲದ ವಿವಿಧ ಭೋಜನ ಶಾಲೆಗಳಲ್ಲಿ ಬೆಳಗ್ಗೆ 10.30ರಿಂದ ಸಂಜೆ 5 ಗಂಟೆಯ ತನಕ ಸಹಸ್ರಾರು ಭಕ್ತರು ಅನ್ನಪ್ರಸಾದವನ್ನು ಸ್ವೀಕರಿಸಿದರು.
ಎಡೆಸ್ನಾನ
ಷಷ್ಠಿ ದಿನವಾದ ಶನಿವಾರ 162 ಪುರುಷರು, 102 ಮಹಿಳೆಯರು ಹಾಗೂ 14 ಮಕ್ಕಳು ಸಹಿತ ಒಟ್ಟು 278 ಮಂದಿ ಭಕ್ತರು ಎಡೆಸ್ನಾನ ಸೇವೆ ನೆರವೇರಿಸಿದರು.
ರವಿವಾರ ಅವಭೃಥೋತ್ಸವ ಚಂಪಾಷಷ್ಠಿ ಮಹೋತ್ಸವದ ಅಂಗವಾಗಿ ಮಾರ್ಗಶಿರ ಶುದ್ಧ ಸಪ್ತಮಿಯ ದಿನವಾದ ರವಿವಾರ ಬೆಳಗ್ಗೆ ಕುಮಾರಾಧಾರಾ ನದಿಯಲ್ಲಿ ದೇವರ ಅವಭೃಥೋತ್ಸವ ಮತ್ತು ನೌಕಾವಿಹಾರ ನಡೆಯಲಿದೆ. ಅದಕ್ಕೂ ಮೊದಲು ಓಕುಳಿ ಪೂಜೆ, ಓಕುಳಿ ಸಂಪ್ರೋಕ್ಷಣೆ ನಡೆಯಲಿದೆ.