Advertisement

Alva’s Virasat-2024: ಆಳ್ವಾಸ್‌ ಕ್ಯಾಂಪಸ್‌ ಸಂಗೀತಮಯ

01:09 AM Dec 12, 2024 | Team Udayavani |

ಮೂಡುಬಿದಿರೆ: ಒಂದಕ್ಕಿಂತ ಒಂದು ಅದ್ಭುತವಾದ ಪ್ರಸ್ತುತಿ. ಆಳ್ವಾಸ್‌ ಕ್ಯಾಂಪಸ್‌ನ ಮೂಲೆ ಮೂಲೆಯಲ್ಲೂ ಪ್ರತಿಧ್ವನಿಸಿದ ಸಂಗೀತ. ಪ್ರತಿ ಗಾಯನಕ್ಕೂ ತಲೆ ದೂಗುತ್ತಾ, ತಾಳ ಹಾಕುತ್ತಾ ತನ್ಮಯರಾದ ಪ್ರೇಕ್ಷಕರು.

Advertisement

ಆಳ್ವಾಸ್‌ನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್‌ ಬಯಲು ರಂಗಮಂದಿರದಲ್ಲಿ ಬುಧವಾರ ಪದ್ಮಶ್ರೀ ಪಂಡಿತ್‌ ವೆಂಕಟೇಶ್‌ ಕುಮಾರ್‌ಬಳಗದವರು ಪ್ರಸ್ತುತ ಪಡಿಸಿದ ಹಿಂದೂಸ್ಥಾನಿ ಗಾಯನ ನೆರೆದಿದ್ದ ಪ್ರೇಕ್ಷಕರಿಗೆ ಸಂಗೀತ ರಸದೌತಣ ನೀಡಿತು.

ಶ್ರೀ ರಾಗದಲ್ಲಿ ಮುರಲಿಯನ್ನು ಸ್ತುತಿಸುತ್ತಾ “ಆನಂದ್‌ ದೇ ಮುಖಚಂದ್ರ ಐ ಸೇ ಚಾಂದನಿ ಸಾಂದ್ರಾ’ ಎನ್ನುವ ಹಾಡಿನ ಮೂಲಕ ಕಛೇರಿ ಆರಂಭಿಸಿದರು.

ಬೇಲೂರು ವೆಂಕಟದಾಸರ ರಚನೆಯ ಕಮಲೇ ಕಮಲಾಲಯೇ…ಕಮಲಾ ಭವಾನಿ ಸುರ ವಂದಿತ ಪದೇ….ಅಕ್ಕ ಮಹಾದೇವಿಯವರ ವಚನ “ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ..’ ಹಾಡು ಆರಂಭಿ ಸುತ್ತಿದ್ದಂತೆ ಕರತಾಡನ ಮುಗಿಲು ಮುಟ್ಟಿತು.

ಶ್ರೀಕರ ವಿಠಲ ದಾಸರ ಕೂಗಿದರೂ ಧ್ವನಿ ಕೇಳದೇ…ಶಿರಬಾಗಿ ದರೂ ದಯವಾಗದೇ… ಕನಕದಾಸರ ರಚನೆಯ ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ…, ಕವಯಿತ್ರಿ ಮೀರಾ ಬಾಯಿ ಅವರ “ಪಾಯೋಜಿ ಮೈನೆ ರಾಮ ರತನ್‌ ಧನ್‌ ಪಾಯೋ….’ ಕವಿತೆಯ ಗಾಯನ ಮನಸೂರೆಗೊಂಡಿತು.ಪಾರ್ವತಿಯೇ ದೇವಿಯೇ ಗಿರಿಜೆಯೇ ಕಲ್ಯಾಣಿಯೇ….’ ಹಾಡಿನ ತನ್ನ ಗುರು ಭಕ್ತಿಯನ್ನು ಪ್ರಸ್ತುತ ಪಡಿಸಿದರು.

Advertisement

ವಾದಿರಾಜರ ರಚನೆಯ ‘ಒಂದು ಬಾರಿ ಸ್ಮರಣೆ ಸಾಲದೇ ಆನಂದ ತೀರ್ಥರ, ಪೂರ್ಣ ಪ್ರಜ್ಞರಾ….ಎಂದು ಭೈರವಿ ರಾಗದಲ್ಲಿ ಹಾಡಿ ಕಛೇರಿ ಕೊನೆಗೊಳಿಸಿದರು.

ಹಾರ್ಮೋನಿಯಂನಲ್ಲಿ ನರೇಂದ್ರ ಎಲ್‌. ನಾಯಕ್‌, ತಬಲಾದಲ್ಲಿ ಕೇಶವ ಜೋಷಿ ಮತ್ತು ವಿಘ್ನೇಶ್‌ ಕಾಮತ್‌ ಹಾಗೂ ತಾನ್‌ ಪುರಾ (ತಂಬೂರಿ)ದಲ್ಲಿ ರಮೇಶ ಕೋಲಕುಂದ ಮತ್ತು ರಾಘವ ಹೆಗಡೆ ಶಿರಸಿ ಹಾಗೂ ತಾಳದಲ್ಲಿ ವಿನೀತ್‌ ಭಟ್‌ ಸಾಥ್‌ ನೀಡಿದರು.

ಡಾ| ಎಂ. ಮೋಹನ ಆಳ್ವ, ಮಾಜಿ ಸಚಿವ ಅಭಯ ಚಂದ್ರ ಜೈನ್‌ ಮತ್ತು ಕ್ಯಾ| ಗಣೇಶ್‌ ಕಾರ್ಣಿಕ್‌ ಕಲಾವಿದರನ್ನು ಗೌರವಿಸಿದರು.

ಇದಕ್ಕಿಂತ ಸಂತೋಷ ಇನ್ನೇನಿದೆ…!
ವಾಹ್‌…ವಿದ್ಯಾರ್ಥಿಗಳು, ಹೆತ್ತವರು, ಸಂಗೀತ ಪ್ರಿಯರ ಸಂಗೀತ ಪ್ರೀತಿಯ ಕಂಡು ಬಹಳ ಸಂತೋಷ ಆಯಿತು. ಹಾಡಲು ಅದೇ ಹೊಸ ಹುರುಪು ಕೊಟ್ಟಿತು. ಇದಕ್ಕಿಂತ ಸಂತೋಷ ಇನ್ನೇನಿದೆ ಎಂದು ಪಂ| ವೆಂಕಟೇಶ್‌ ಕುಮಾರ್‌ ಭಾವುಕರಾದರು.

Advertisement

Udayavani is now on Telegram. Click here to join our channel and stay updated with the latest news.

Next