ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಠಿ ಮಹೋತ್ಸವದ ಸ್ಕಂಧ ಪಂಚಮಿಯ ದಿನವಾದ ಸೋಮವಾರ ಕ್ಷೇತ್ರದಲ್ಲಿ 163 ಭಕ್ತರು ಎಡೆಸ್ನಾನ ಸೇವೆಗೈದರು.
ಷಷ್ಠಿಯ ದಿನವಾದ ನ. 29ರಂದು ಕೂಡ ಎಡೆಸ್ನಾನ ಸೇವೆಯನ್ನು ಭಕ್ತರು ನೆರವೇರಿಸಲಿದ್ದಾರೆ. ಕೊರೊನಾ ಕಾಲದಲ್ಲಿ ಸ್ಥಗಿತವಾಗಿದ್ದ ಎಡೆಸ್ನಾನ ಸೇವೆ ಈ ವರ್ಷ ಮತ್ತೆ ಆರಂಭಗೊಂಡಿದ್ದು, ರವಿವಾರ 116 ಭಕ್ತರ ಸೇವೆ ಸಲ್ಲಿಸಿದ್ದರು.
ಧಾರ್ಮಿಕ ದತ್ತಿ ಇಲಾಖೆಯ ಶೈವಾಗಮ ಪಂಡಿತ ಗೋಪಾಲ ಅವರು ಎಡೆಸ್ನಾನದ ಕುರಿತು ಮಾರ್ಗದರ್ಶನ ನೀಡಿದರು. ಅದರಂತೆ ಮಧ್ಯಾಹ್ನ ಮಹಾಪೂಜೆಯ ಬಳಿಕ ದೇವಸ್ಥಾನದ ಹೊರಾಂಗಣದ ಸುತ್ತಲೂ ಬಾಳೆಎಲೆಗಳನ್ನು ಹಾಕಿ ಅದರ ಮೇಲೆ ದೇವರ ನೈವೇದ್ಯವನ್ನು ಬಳಸಿ ಗೋವುಗಳಿಗೆ ನೀಡಲಾಯಿತು. ಅವು ಸೇವಿಸಿ ಉಳಿದ ಎಲೆಯ ಮೇಲೆ ದರ್ಪಣತೀರ್ಥ ನದಿಯಲ್ಲಿ ಸ್ನಾನ ಮಾಡಿ ನಿಂತಿದ್ದ ಎಲ್ಲ ವಯೋಮಾನದ ಭಕ್ತರು ಉರುಳು ಸೇವೆ ನಡೆಸಿದರು. ಒಂದು ಸುತ್ತು ಪ್ರದಕ್ಷಿಣೆಯ ಬಳಿಕ ಮತ್ತೆ ದರ್ಪಣ ತೀರ್ಥದಲ್ಲಿ ಸ್ನಾನ ಮಾಡಿ ಶ್ರೀ ದೇವರ ಪ್ರಸಾದ ಮತ್ತು ಪ್ರಸಾದ ಭೋಜನ ಸ್ವೀಕರಿಸಿದರು.
ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯ ನಿರ್ವಹಣಾಧಿಕಾರಿ ಡಾ| ನಿಂಗಯ್ಯ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶೋಭಾ ಗಿರಿಧರ್, ವನಜಾ ವಿ. ಭಟ್, ಶ್ರೀವತ್ಸ ಬೆಂಗಳೂರು, ಮಾಸ್ಟರ್‌ಪ್ಲಾನ್ ಸಮಿತಿ ಸದಸ್ಯರಾದ ಮನೋಜ್ ಸುಬ್ರಹ್ಮಣ್ಯ, ಆಗಮ ಪಂಡಿತರು, ದೇಗುಲದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್ ಮತ್ತು ದೇಗುಲದ ಗಣೇಶ್ ಭಟ್, ಎನ್.ಸಿ. ಲಕ್ಷ್ಮಣ, ಲೋಕೇಶ್ ಎ.ಆರ್., ಶ್ರೀಮಂತ ಜೋಳದಪ್ಪಗೆ ಉಪಸ್ಥಿತರಿ ದ್ದರು. ಸುಬ್ರಹ್ಮಣ್ಯ ಠಾಣಾಧಿಕಾರಿ ಮಂಜುನಾಥ್ ಟಿ. ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತು ಕಲ್ಪಿಸಿದ್ದರು.
ಪಲ್ಲಪೂಜೆ, ಅಕ್ಷಯ ಪಾತ್ರೆಗೆ ಪೂಜೆ ಪಂಚಮಿಯ ದಿನವಾದ ಸೋಮ ವಾರ ಪ್ರಧಾನ ಅರ್ಚಕ ವೇ|ಮೂ| ಸೀತಾರಾಮ ಎಡಪಡಿತ್ತಾಯರು ಒಳಾಂಗಣದಲ್ಲಿ ಪಲ್ಲಪೂಜೆ ಹಾಗೂ
ಅಕ್ಷಯ ಪಾತ್ರೆಗೆ ಪೂಜೆ, ಪುರೋಹಿತ ಪ್ರಸನ್ನ ಹೊಳ್ಳ ಅವರು ಆದಿಸುಬ್ರಹ್ಮಣ್ಯ ಭೋಜನ ಶಾಲೆಯಲ್ಲಿ ಅನ್ನಬ್ರಹ್ಮನಿಗೆ ಪೂಜೆ ಸಲ್ಲಿಸಿದರು.
ಇಂದು ಮಹಾರಥೋತ್ಸವ
ಕುಕ್ಕೆ ಕ್ಷೇತ್ರದಲ್ಲಿ ಷಷ್ಠಿ ಮಹೋತ್ಸವನ ಅಂಗವಾಗಿ ನ. 29ರ ಬೆಳಗ್ಗೆ ಗಂಟೆ 7.05ರ ವೃಶ್ಚಿಕ ಲಗ್ನದಲ್ಲಿ ಮಹಾರಥೋತ್ಸವ ಜರಗಲಿದೆ. ನ. 30ರಂದು ಅವಭೃಥ ಉತ್ಸವ ಮತ್ತು ನೌಕಾ ವಿಹಾರ ಜರಗಲಿದೆ.
ಇದನ್ನೂ ಓದಿ: ಮಂಗಳೂರು ಪ್ರಕರಣ: 2 ತಿಂಗಳಲ್ಲಿ 5 ಮೊಬೈಲ್ ಬಳಕೆ ಮಾಡಿದ್ದ ಶಾರೀಕ್!