Advertisement

Kukke Shree Subrahmanya Temple: ಸಂಭ್ರಮದ ಹೂತೇರು ಉತ್ಸವ

11:54 PM Dec 05, 2024 | Team Udayavani |

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಪ್ರಯುಕ್ತ ಮಾರ್ಗಶಿರ ಶುದ್ಧ ಚೌತಿಯ ದಿನವಾದ ಗುರುವಾರ ಪುಷ್ಪಾಲಂಕೃತ ರಥದಲ್ಲಿ ಶ್ರೀ ದೇವರ ಹೂವಿನ ತೇರಿನ ಉತ್ಸವವು ಭಕ್ತಿ ಸಡಗರದಿಂದ ನೆರವೇರಿತು.

Advertisement

ಮಹಾಪೂಜೆಯ ಬಳಿಕ ದೇಗುಲದ ಹೊರಾಂಗಣದಲ್ಲಿ ಬಂಡಿ ಉತ್ಸವ, ಪಾಲಕಿ ಉತ್ಸವ ಹಾಗೂ ಸಂಗೀತ, ಮಂಗಳವಾದ್ಯ, ನಾಗಸ್ವರ, ಬ್ಯಾಂಡ್‌ ಸುತ್ತುಗಳ ಬಳಿಕ ರಥಬೀದಿಗೆ ದೇವರ ಪ್ರವೇಶವಾಯಿತು. ಬಳಿಕ ಉತ್ತರಾಧಿ ಮಠದಲ್ಲಿ ಮಯೂರ ವಾಹನ ಸುಬ್ರಹ್ಮಣ್ಯ ದೇವರಿಗೆ ಪೂಜೆ ನೆರವೇರಿತು.

ಅನಂತರ ವಿವಿಧ ಹೂವುಗಳಿಂದ ಅಲಂಕೃತವಾದ ಮತ್ತು ಝಗಮಗಿಸುವ ವಿದ್ಯುದ್ದೀಪಾಲಂಕಾರದ ಸೊಬಗಿನ ಹೂವಿನ ತೇರಿನಲ್ಲಿ ಶ್ರೀ ದೇವರು ಕಾಶಿಕಟ್ಟೆಗೆ ತೆರಳಿದರು. ಆನೆ ಸಹಿತ ಬಿರುದಾವಳಿಗಳಾದ ತಂಬಿಲಾಲ, ಬಟ್ಟೆಯ ನಿಶಾನಿ, ಮಕರ ತೋರಣ, ಸತ್ತಿಗೆ, ಜಾಲರಿಕೊಡೆ, ಬೆಳ್ಳಿಯ ಪಂಚ ದೀವಟಿಕೆಗಳು ಉತ್ಸವಕ್ಕೆ ಹೆಚ್ಚಿನ ಮೆರುಗನ್ನು ನೀಡಿತು. ಸಹಸ್ರಾರು ಭಕ್ತರು ಶ್ರದ್ಧಾ ಭಕ್ತಿಯಿಂದ ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಹೂವಿನ ತೇರಿನಲ್ಲಿ ಸುಬ್ರಹ್ಮಣ್ಯ ದೇವರು ಸಹೋದರ ಕಾಶಿಕಟ್ಟೆ ಮಹಾ ಗಣಪತಿಯ ಸನ್ನಿಧಿಗೆ ಆಗಮಿಸಿದರು. ಮಹಾಗಣಪತಿ ಸನ್ನಿಧಾನದಲ್ಲಿ ವಿಶೇಷ ಹೂ ಮತ್ತು ಹಣತೆಗಳ ಶೃಂಗಾರದ ನಡುವೆ ಮಹಾಗಣಪತಿಗೆ ರಂಗಪೂಜೆ ನೆರವೇರಿತು. ಬಳಿಕ ವಾಸುಕಿ ಛತ್ರದ ಕಟ್ಟೆಯಲ್ಲಿ ಕಟ್ಟೆಪೂಜೆ ನೆರವೇರಿತು. ಅನಂತರ ಶಿವರಾತ್ರಿ ಕಟ್ಟೆಯಲ್ಲಿ ಪೂಜೆ ನಡೆಯಿತು. ಬಳಿಕ ಮತ್ತು ಸವಾರಿ ಮಂಟಪದ ಅವಲಕ್ಕಿ ಕಟ್ಟೆಯಲ್ಲಿ ಕಟ್ಟೆಪೂಜೆ ನೆರವೇರಿತು.

ಎಡೆಸ್ನಾನ
ಚೌತಿಯ ದಿನವಾದ ಗುರುವಾರ 78 ಭಕ್ತರು ಸ್ವಯಂಪ್ರೇರಿತರಾಗಿ ಎಡೆಸ್ನಾನ ಸೇವೆ ನೆರವೇರಿಸಿದರು. ಪಂಚಮಿ ದಿನವಾರ ಶುಕ್ರವಾರ ಮತ್ತು ಷಷ್ಠಿ ದಿನವಾದ ಶನಿವಾರವೂ ಎಡೆಸ್ನಾನ ನೆರವೇರಲಿದೆ.

Advertisement

ಚಂಪಾಷಷ್ಠಿ: ಮುನ್ನೆಚ್ಚರಿಕೆ ಕ್ರಮ
ಮಂಗಳೂರು: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಚಂಪಾಷಷ್ಠಿ ಮಹೋತ್ಸವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಇಂಜಾಡಿ ಬಳಿಯ ಮದ್ಯದಂಗಡಿಗಳನ್ನು ಡಿ. 6ರ ಬೆಳಗ್ಗೆ 6ರಿಂದ ಡಿ. 7ರ ಮಧ್ಯರಾತ್ರಿ 12 ಗಂಟೆ ತನಕ ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next