ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯನಿಗೆ ಪ್ರಿಯವಾದ ಮಂಗಳವಾರ ಆಶ್ಲೇಷಾ ನಕ್ಷತ್ರ ಬಂದ ವಿಶೇಷ ದಿನವಾದ ಹಿನ್ನೆಲೆಯಲ್ಲಿ ಕುಕ್ಕೆ ದೇವಸ್ಥಾನಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು.
ಮುಂಜಾನೆ 5.30ರಿಂದಲೇ ಸ್ಕಂದ ವಸತಿಗೃಹದ ಸಮೀಪದಿಂದ ರಥಬೀದಿ ವರೆಗೆ ಸರದಿ ಸಾಲಿನಲ್ಲಿ ಸಾಗಿ ಸೇವಾ ರಶೀದಿ ಪಡೆದುಕೊಂಡರು.
2,500 ಭಕ್ತರು ಆಶ್ಲೇಷಾ ಬಲಿ ಸೇವೆ ನೆರವೇರಿಸಿದರು. 425 ನಾಗಪ್ರತಿಷ್ಠೆ ಸೇವೆ, 191 ಸರ್ಪ ಸಂಸ್ಕಾರ ಸೇವೆ ನಡೆಯಿತು. ಪ್ರಮುಖ ಸೇವೆಗಳಾದ ಪಂಚಾಮೃತ ಮಹಾಭಿಷೇಕ, ತುಲಾಭಾರ, ಮಹಾಪೂಜೆ, ಕಾರ್ತಿಕ ಪೂಜೆ, ಶೇಷಸೇವೆಯನ್ನು ಅಧಿಕ ಸಂಖ್ಯೆಯಲ್ಲಿ ಭಕ್ತರು ನೆರವೇರಿಸಿದರು.
ದೇಗುಲದ ಹೊರಾಂಗಣ, ಒಳಾಂಗಣ, ಆದಿಸುಬ್ರಹ್ಮಣ್ಯ ಮೊದ ಲಾದೆಡೆ ಭಕ್ತರ ದಂಡು ಬಂದಿತ್ತು. ಸಹಸ್ರಾರು ಭಕ್ತರು ಸರದಿಯಯಲ್ಲಿ ನಿಂತು ದೇವರ ದರುಶನ ಪಡೆದು ಪ್ರಸಾದ ಮತ್ತು ಭೋಜನ ಪ್ರಸಾದ ಸ್ವೀಕರಿಸಿದರು. ಭಕ್ತರು ಆಗಮಿಸಿದ ವಾಹನಗಳ ಸಂಖ್ಯೆಯೂ ಅಧಿಕವಿದ್ದ ಕಾರಣ ವಾಹನ ನಿಲುಗಡೆ ಸ್ಥಳಗಳು ಭರ್ತಿಯಾಗಿದ್ದವು.
ಇಂದು ನಿತ್ಯೋತ್ಸವಕ್ಕೆ ತೆರೆ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶ್ರೀದೇವರ ಹೊರಾಂಗಣ ಉತ್ಸವಾದಿಗಳು ಜೂ. 12ರ ಬುಧವಾರ ತೆರೆ ಕಾಣಲಿವೆ. ಶುದ್ಧ ಷಷ್ಠಿಯ ದಿನವಾದ ಬುಧವಾರ ದೇವರು ಹೊರಾಂಗಣದಲ್ಲಿ ಪಾಲಕಿ ಮತ್ತು ಬಂಡಿ ಉತ್ಸವ ಸ್ವೀಕರಿಸಿದ ಬಳಿಕ ಒಳಾಂಗಣ ಪ್ರವೇಶಿಸುವುದರೊಂದಿಗೆ ಉತ್ಸವಗಳು ಕೊನೆಯಾಗಲಿದೆ.