Advertisement

Kukke Shree Subrahmanya: ಭಕ್ತರಿಗೆ ವಸತಿ ಸಮಸ್ಯೆ; ತೊಂದರೆ ಆಗದಂತೆ ಕ್ರಮ

01:28 AM Jun 01, 2024 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ವಿಶೇಷ ದಿನಗಳ ಸಂದರ್ಭದಲ್ಲಿ ವಸತಿ ಸಮಸ್ಯೆಯಿಂದ ಯಾವುದೇ ಭಕ್ತರಿಗೆ ತೊಂದರೆ ಆಗದಂತೆ ಪೂರಕ ಕ್ರಮಕೈಗೊಳ್ಳಲು ದೇವಸ್ಥಾನದ ಅಧಿಕಾರಿಗಳಿಗೆ ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತ ಜುಬಿನ್‌ ಮೊಹಪಾತ್ರ ತಿಳಿಸಿದ್ದಾರೆ.

Advertisement

ಕೆಲವು ದಿನಗಳ ಹಿಂದೆ ಬೇಸಗೆ ರಜೆಯ ಸಂದರ್ಭ ಕುಕ್ಕೆಯ ರಥಬೀದಿಯ ಒಂದು ಬದಿಯಲ್ಲಿ ಹಲವಾರು ಭಕ್ತರು ಮಲಗಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಕ್ಷೇತ್ರದಲ್ಲಿ ವಸತಿ ಸಮಸ್ಯೆಯಿಂದ ಈ ರೀತಿ ಭಕ್ತರು ಬೀದಿಯಲ್ಲಿ ಮಲಗುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿತ್ತು. ವಾರ್ಷಿಕ ನೂರಾರು ಕೋಟಿ ಆದಾಯ ತರುವ ದೇವಸ್ಥಾನದಲ್ಲಿ ಭಕ್ತರ ವಾಸ್ತವ್ಯಕ್ಕೆ ವ್ಯವಸ್ಥೆ ಇಲ್ಲವೇ ಎಂದು ನೆಟ್ಟಿಗರು, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಶ್ನಿಸಿದ್ದರು.

ಈ ಬಗ್ಗೆ ಉದಯವಾಣಿ ಜತೆ ಮಾತನಾಡಿದ ಜುಬಿನ್‌ ಮೊಹಪಾತ್ರ, ಕುಕ್ಕೆಗೆ ರಾತ್ರಿ ಆಗಮಿಸುವ ಭಕ್ತರಿಗೆ ವಸತಿ ಸಿಗದೆ ತೊಂದರೆ ಆದಲ್ಲಿ, ದೇಗುಲದ ಭೋಜನ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಈ ಬಗ್ಗೆ ಧ್ವನಿ ವರ್ಧಕದ ಮೂಲಕ ಈ ಹಿಂದಿನಿಂದಲೂ ಸೂಚನೆ ನೀಡಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಹೆಚ್ಚಿನ ಧ್ವನಿಯಲ್ಲಿ ಹಾಗೂ ನಿರಂತರ ಈ ಸೂಚನೆಗಳನ್ನು ನೀಡಲಾಗುವುದು. ಅಲ್ಲದೇ ರಸ್ತೆ ಬದಿ, ರಥಬೀದಿ ಬದಿ ಭಕ್ತರು ಮಲಗದಂತೆ ಹಾಗೂ ಅವರಿಗೆ ಮಲಗಲು ಭೋಜನ ಶಾಲೆಯ ಕೊಠಡಿಗೆ ತೆರಳಲು ಸೂಚಿಸುವಂತೆ ದೇವಳದ ಸಿಬಂದಿ, ಭದ್ರತಾ ಸಿಬಂದಿಗೆ ಸೂಚಿಸಲಾಗಿದೆ ಎಂದರು.

ಭಕ್ತರಿಗೆ ತಂಗಲು ಕಟ್ಟಡ ನಿರ್ಮಾಣದ ಬಗ್ಗೆ ಮಾಸ್ಟರ್‌ ಪ್ಲಾನ್‌ನಲ್ಲಿ ಯೋಜನೆ ರೂಪಿಸಲಾಗಿದೆ. ಅಲ್ಲದೇ ನಾವು ಕೂಡ ಕಟ್ಟಡ ನಿರ್ಮಿಸುವ ಬಗ್ಗೆ ಯೋಜನೆ ಸಿದ್ಧ ಪಡಿಸಿದ್ದೇವೆ. ಸದ್ಯ ನೀತಿ ಸಂಹಿತೆ ಇರುವುದರಿಂದ ಕೆಲಸ ಆರಂಭ ಸಾಧ್ಯವಾಗುತ್ತಿಲ್ಲ. ಮುಂದೆ ನಿರ್ಮಾಣವಾಗಲಿದೆ ಎಂದ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next