Advertisement

ಕುಕ್ಕೆ: ಸಂಘರ್ಷ ತಪ್ಪಿಸಲು 10ರೊಳಗೆ ಸಂಧಾನ ಸಭೆ

11:03 PM Jun 07, 2019 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಶ್ರೀ ಸಂಪುಟ ಮಠದ ನಡುವೆ ತಲೆದೋರಿರುವ ಸಂಘರ್ಷ ತಪ್ಪಿಸಿ ಕ್ಷೇತ್ರದಲ್ಲಿ ಶಾಂತಿ ನೆಲೆಸುವಂತಾಗಲು ಜೂ.10ರ ಒಳಗೆ ಸಂಧಾನ ಸಭೆ ನಡೆಸಲಾಗುವುದು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಗಳು ಹೇಳಿದರು.

Advertisement

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಮತ್ತು ಶ್ರೀ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠಕ್ಕೆ ಶುಕ್ರವಾರ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು. ದೇವಸ್ಥಾನ ಮತ್ತು ಮಠಗಳ ನಡುವೆ ಹಿಂದಿನಿಂದ ಕೆಲವು ವಿಚಾರಗಳಲ್ಲಿ ಸಂಘರ್ಷವಿದ್ದರೂ ಉತ್ತಮ ಬಾಂಧವ್ಯವಿತ್ತು. ಇತ್ತೀಚಿನ ದಿನಗಳಲ್ಲಿ ಗೊಂದಲ ಏರ್ಪಟ್ಟು ಅತಿರೇಕ ಹಂತಕ್ಕೆ ತಲುಪುತ್ತಿದೆ.

ಇದಕ್ಕೆ ಅವಕಾಶ ಮಾಡಿಕೊಡಬಾರದು. ಕ್ಷೇತ್ರದಲ್ಲಿ ಶಾಂತಿ ನೆಲೆಸಬೇಕು. ಇದೇ ಉದ್ದೇಶದಿಂದ ದೇವಸ್ಥಾನ ಮತ್ತು ಮಠದ ಮಧ್ಯೆ ಒಮ್ಮತ ತರಲು ಪ್ರಯತ್ನಿಸುತ್ತಿದ್ದೇನೆ. ಎರಡೂ ಕಡೆಗೆ ಭೇಟಿ ನೀಡಿ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಜೂ.10ರೊಳಗೆ ಸಂಧಾನ ಸಭೆ ನಡೆಸಲು ನಿರ್ಧರಿಸಿದ್ದೇನೆ. ಸಭೆಗೆ ಸೂಕ್ತ ಸ್ಥಳವನ್ನು ಶೀಘ್ರ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಸಂಧಾನ ಸಭೆಯಲ್ಲಿ ಎರಡೂ ಕಡೆಯ ಪ್ರಮುಖರು ಇರುತ್ತಾರೆ. ಯಾರೆಲ್ಲ ಇರಬೇಕು ಅನ್ನುವುದನ್ನು ಶೀಘ್ರ ಪಟ್ಟಿ ಮಾಡಿ ನಿರ್ಧರಿಸುತ್ತೇವೆ, ಎಲ್ಲರಿಗೂ ಒಮ್ಮತ ಆಗುವ ರೀತಿಯಲ್ಲಿ ಮತ್ತು ಧಾರ್ಮಿಕ ಕ್ಷೇತ್ರಗಳ ನಡುವೆ ಅನ್ಯೋನ್ಯತೆ ಸೃಷ್ಟಿಸುವ ರೀತಿಯಲ್ಲಿ ಆ ಸಂಧಾನ ಸೂತ್ರ ಇರುತ್ತದೆ ಎಂದವರು ತಿಳಿಸಿದರು.

ಭೇಟಿ ವೇಳೆ ಶ್ರೀಗಳು ಎರಡೂ ಕಡೆಯವರಿಂದ ಪ್ರತ್ಯೇಕ ಅಭಿಪ್ರಾಯ ಪಡೆದುಕೊಂಡರು. ಆರಂಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಪಡೆದ ಅವರು ಬಳಿಕ ಸಂಪುಟ ಶ್ರೀ ನರಸಿಂಹ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next