Advertisement

ಕುಕ್ಕೆ ಚಿನ್ನದ ರಥಕ್ಕೆ ಸರ್ಕಾರಿ ಅನುದಾನ ಇಲ್ಲ

11:08 PM Apr 29, 2019 | Lakshmi GovindaRaju |

ಬೆಂಗಳೂರು: ಕುಕ್ಕೆ ಸುಬ್ರಹಣ್ಯ ದೇವಾಲಯಕ್ಕೆ ಸಮರ್ಪಿಸಲು ಉದ್ದೇಶಿಸಿರುವ ಚಿನ್ನದ ರಥಕ್ಕೆ ಸರ್ಕಾರದ ಅನುದಾನ ಬಳಸುವುದಿಲ್ಲ ಎಂದು ಮುಖ್ಯಮಂತ್ರಿ ಕಚೇರಿ ಸ್ಪಷ್ಟನೆ ನೀಡಿದೆ.
ಸಾರ್ವಜನಿಕರ ದೇಣಿಗೆ ಸಂಗ್ರಹ ಹಾಗೂ ದೇವಾಲಯದ ಸಂಪನ್ಮೂಲಗಳಿಂದಲೇ ರಥದ ನಿರ್ಮಾಣ ವೆಚ್ಚ ಭರಿಸುವಂತೆ ತಿಳಿಸಲಾಗಿದೆ. ಅಲ್ಲದೆ, ಇದು ಹಳೆಯ ಪ್ರಸ್ತಾವನೆ ಎಂದು ಸ್ಪಷ್ಟಪಡಿಸಲಾಗಿದೆ.

Advertisement

ಚಿನ್ನದ ರಥ ಸಮರ್ಪಣೆ ಯೋಜನೆಗೆ 2005ರಲ್ಲಿಯೇ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಅಂದಿನ ದಿನಗಳಲ್ಲಿ 15 ಕೋಟಿ ರೂ.ವೆಚ್ಚದಲ್ಲಿ ಚಿನ್ನದ ರಥ ನಿರ್ಮಿಸಲು ಉದ್ದೇಶಿಸಲಾಗಿತ್ತು. ಇದಕ್ಕಾಗಿ ದೇವಾಲಯದಲ್ಲಿ ಲಭ್ಯವಿರುವ ಚಿನ್ನ ಬಳಸಿಕೊಂಡು ಉಳಿದ ಚಿನ್ನವನ್ನು ಬ್ಯಾಂಕಿನ ಮೂಲಕ ಖರೀದಿಸಲು ಸರ್ಕಾರ ಅನುಮೋದನೆ ನೀಡಿತ್ತು.

2005 ಹಾಗೂ 2006ರಲ್ಲಿ ಈ ಕುರಿತು ಆದೇಶ ಸಹ ಹೊರಡಿಸಲಾಗಿತ್ತು. ಇತ್ತೀಚೆಗೆ ಕ್ಷೇತ್ರದ ಭಕ್ತರು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಹಿಂದಿನ ಸರ್ಕಾರಿ ಆದೇಶಗಳನ್ನು ಹಾಜರುಪಡಿಸಿ ನನೆಗುದಿಗೆ ಬಿದ್ದಿರುವ ಈ ಯೋಜನೆಯನ್ನು ಪುನರಾರಂಭಿಸುವಂತೆ ಮನವಿ ಮಾಡಿದ್ದಾರೆ.

ಈ ನಿಟ್ಟಿನಲ್ಲಿ ಇಂದಿನ ಮಾರುಕಟ್ಟೆ ದರದಲ್ಲಿ ಚಿನ್ನದ ಬೆಲೆ, ನಿರ್ಮಾಣ ವೆಚ್ಚ ಎಲ್ಲ ಅಂದಾಜುಗಳನ್ನು ಪರಿಷ್ಕರಿಸಿ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಮಂಡಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next