Advertisement
ದೇಗುಲದ ಹೊರಾಂಗಣದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರ ಪಾಲಕಿ ಉತ್ಸವ ನೆರವೇರಿತು. ಬಳಿಕ ಪೂರ್ವಾಹ್ನ 6.41ರ ವೃಶ್ಚಿಕ ಲಗ್ನದಲ್ಲಿ ರಥೋತ್ಸವ ನೆರವೇರಿತು. ಈ ವೇಳೆ ನಾಗಸ್ವರ, ಪಂಚವಾದ್ಯ, ಬ್ಯಾಂಡ್, ಜಾಗಟೆ, ಶಂಖ ವಾದ್ಯ ಮತ್ತು ಚೆಂಡೆ ವಾದನಗಳ ಹಿಮ್ಮೇಳದಲ್ಲಿ ಸಾಲಾಂಕೃತ ಆನೆ, ಬಿರುದಾವಳಿ, ಭಕ್ತಜನರ ಜಯಘೋಷದ ನಡುವೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರು ಬ್ರಹ್ಮರಥಾರೂಢರಾದರು. ಬಳಿಕ ಮಹಾ ಮಂಗಳಾರತಿ ನೆರವೇರಿತು. ಬಳಿಕ ಭಕ್ತರಿಗೆ ಧನ, ಕನಕ, ಹೂವು, ಫಲವಸ್ತು ಪ್ರಸಾದಗಳನ್ನು ಅರ್ಚಕರು ರಥದಿಂದ ಎಸೆದರು. ಅಪಾರ ಭಕ್ತ ಜನರ ಜಯಘೋಷದೊಂದಿಗೆ ನಡೆದ ಮಹಾರಥೋತ್ಸವದಲ್ಲಿ ನಾಡಿನ ಭಕ್ತರು ರಥೋತ್ಸವ ವೀಕ್ಷಿಸಿದರು. ಭಕ್ತರು ರಥಕ್ಕೆ ಸಾಸಿವೆ, ನಾಣ್ಯ ಏಲಕ್ಕಿ, ಕಾಳುಮೆಣಸು ಇತ್ಯಾದಿಗಳನ್ನು ಅರ್ಪಿಸಿ, ಇಷ್ಟಾರ್ಥಗಳನ್ನು ಪ್ರಾರ್ಥಿಸಿಕೊಂಡರು.
ಗುರುವಾರ ರಾತ್ರಿ ಪಂಚಮಿ ರಥೋತ್ಸವ ನಡೆಯಿತು. ಒಳಾಂಗಣ ಪ್ರಾಂಗಣದಲ್ಲಿ ಉತ್ಸವ ಮೂರ್ತಿಯ ಬಲಿ ನಡೆದ ಬಳಿಕ ರಥಬೀದಿಯಲ್ಲಿ ಪಂಚಮಿ ರಥೋತ್ಸವ ನೆರವೇರಿತು. ಕಾಶಿಕಟ್ಟೆ ಮಹಾಗಣಪತಿ ಸನ್ನಿಧಿಯಲ್ಲಿ ಪೂಜೆ ನೆರವೇರಿತು. ಈ ಬಾರಿ ಪಂಚಮಿ ರಥೋತ್ಸವ ತಡರಾತ್ರಿ 1 ಗಂಟೆಗೆ ನೆರವೇರಿತು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಸಲ ಪಂಚಮಿ ಹಾಗೂ ಷಷ್ಠಿ ರಥೋತ್ಸವಗಳಲ್ಲಿ ಭಕ್ತರ ಪ್ರಮಾಣ ಇಳಿಕೆಯಾಗಿತ್ತು. ಗಣ್ಯರ ಉಪಸ್ಥಿತಿ
ಚಂಪಾಷಷ್ಠಿ ರಥೋತ್ಸವದ ವೇಳೆ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತೆ ಪ್ರಮೀಳಾ, ಹೈಕೋರ್ಟ್ ನ್ಯಾಯಾಧೀಶ ಸತ್ಯನಾರಾಯಣ, ಸುಳ್ಯ ನ್ಯಾಯಾಧೀಶ ಪುರುಷೋತ್ತಮ, ಪುತ್ತೂರು ಸಹಾಯಕ ಆಯುಕ್ತ ಎಚ್. ಕೆ. ಕೃಷ್ಣಮೂರ್ತಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕಾರ್ಯನಿರ್ವಾಹಣಾಧಿಕಾರಿ ಎಚ್. ಎಂ. ರವೀಂದ್ರ, ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ ಪೆರಾಲ್, ನೂತನ ಬ್ರಹ್ಮರಥ ದಾನಿ ಉದ್ಯಮಿ ಅಜಿತ್ ರೈ, ಎಂ.ಬಿ. ಸದಾಶಿವ ಉಪಸ್ಥಿತರಿದ್ದರು. ಪಂಚಮಿ ಮತ್ತು ಚೌತಿ ದಿನಗಳಲ್ಲಿ ಮಾಜಿ ಸಚಿವ ರಮಾನಾಥ ರೈ, ವಿಧಾನಪರಿಷತ್ ಮಾಜಿ ಸದಸ್ಯ ಮುಖ್ಯಮಂತ್ರಿ ಚಂದ್ರು ಸಹಿತ ಹಲವು ಗಣ್ಯರು ದೇಗುಲಕ್ಕೆ ಭೇಟಿ ಇತ್ತರು. ಜಾತ್ರೆ ಪ್ರಯುಕ್ತ ದೇಗುಲ, ಇಲಾಖೆಗಳು, ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕೃಷಿ ಮೇಳ ಆಯೋಜಿಸಲಾಗಿತ್ತು.
Related Articles
ಇಂದು ಶ್ರೀ ಸುಬ್ರಹ್ಮಣ್ಯ ದೇವರ ಅವಭೃಥೋತ್ಸವ ಮತ್ತು ನೌಕಾ ವಿಹಾರ ಕುಮಾರಧಾರಾ ಪುಣ್ಯ ನದಿಯಲ್ಲಿ ನಡೆಯಲಿದೆ. ಈ ವೇಳೆ ದೇಗುಲದ ಯಶಸ್ವಿ ಆನೆ ಜಲಕ್ರೀಡೆಯಲ್ಲಿ ಸಂಭ್ರಮಿಸುವುದು ಮನ ಸೆಳೆಯುತ್ತದೆ. ಸ್ಥಳೀಯ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುತ್ತಾರೆ.
Advertisement